ಕನ್ನಡಪ್ರಭ ವಾರ್ತೆ ಹಾಸನ
ಬಣ್ಣಗಳು, ರೇಖೆಗಳು ಮತ್ತು ಕಲ್ಪನೆಯ ಮೂಲಕ ವಿದ್ಯಾರ್ಥಿಗಳು ಸಮಾಜ, ಪ್ರಕೃತಿ, ಪರಿಸರ, ದೇಶಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಚಿತ್ರಗಳ ರೂಪದಲ್ಲಿ ಮನಮುಟ್ಟುವಂತೆ ಮೂಡಿಸಿದರು. ವಿದ್ಯಾರ್ಥಿಗಳ ಉತ್ಸಾಹ, ಏಕಾಗ್ರತೆ ಮತ್ತು ಕಲೆಯ ಮೇಲಿನ ಆಸಕ್ತಿ ಸ್ಪರ್ಧೆಗೆ ವಿಶೇಷ ಮೆರುಗು ನೀಡಿತು. ಸ್ಪರ್ಧೆಯು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಗೆ ಸೃಜನಶೀಲ ಚಿಂತನೆಗೆ ಪ್ರೇರಣೆಯಾಗಿತು. ಸ್ಪರ್ಧೆಯ ಅಂತ್ಯದಲ್ಲಿ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಪರಮೇಶ್ ಹಲಗೇರಿ ಮಾತನಾಡಿ, ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಅಗತ್ಯವೆಂದು ತಿಳಿಸಿದರು. ಚಿತ್ರಕಲೆ ಮಕ್ಕಳ ಮನಸ್ಸನ್ನು ಸಂವೇದನಾಶೀಲವಾಗಿಸಿ, ಅವರ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಆರ್. ಸಿ. ಕಾರದ ಕಟ್ಟಿ ಮಾತನಾಡಿ, ಇಂತಹ ಸ್ಪರ್ಧೆಗಳು ಮಕ್ಕಳಲ್ಲಿರುವ ಅಡಗಿದ ಪ್ರತಿಭೆಯನ್ನು ಹೊರತರುವ ಮಹತ್ವದ ವೇದಿಕೆಗಳಾಗಿವೆ. ಪೋಷಕರು ಮಕ್ಕಳ ಕಲಾ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.ಉಪ ಪ್ರಾಂಶುಪಾಲರಾದ ಮೋಹನ್ ಕುಮಾರ್, ವಿದ್ಯಾಸೌಧ ಕಿಡ್ಸ್ ಶಾಖೆಯ ಮುಖ್ಯಸ್ಥರಾದ ಪೂರ್ಣಿಮಾ ಟಿ.ಡಿ. ಅವರು ಮಕ್ಕಳ ಸಾಧನೆಯನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ವಿಜೇತರನ್ನು ಅಭಿನಂದಿಸಿದರು. ಈ ಚಿತ್ರಕಲಾ ಸ್ಪರ್ಧೆ ಮಕ್ಕಳಿಗೆ ಮರೆಯಲಾಗದ ಅನುಭವವಾಗಿ ಉಳಿದು, ಅವರ ಕಲಾ ಪಯಣಕ್ಕೆ ಹೊಸ ಪ್ರೇರಣೆಯಾಗಿ ಪರಿಣಮಿಸಿತು.