ಕನ್ನಡಪ್ರಭ ವಾರ್ತೆ ಹಾಸನ
ನಗರದ ಕಲಾಭವನದಲ್ಲಿ ಒಡನಾಡಿ ಚಿತ್ರಕಲಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಚಿತ್ರಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಗಳು ಮಕ್ಕಳ ಭಾಷೆ, ಅವರಿಗೆ ಮೊದಲು ಬರುವುದೇ ಚಿತ್ರಕಲೆ, ಆನಂತರ ಬರುವುದು ಓದು. ಚಿತ್ರ ಗೀಚುವುದೇ ಅವರಿಗೆ ಆನಂದ, ನಮ್ಮ ಸಮಾಜದ ಎಲ್ಲಾ ವರ್ಗಗಳ ಪ್ರತಿಶತ ೮೦ ರಷ್ಟು ಮಕ್ಕಳು ತಾವು ಇಷ್ಟಪಡುವ ಆಟಕ್ಕಿಂತಲೂ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.ಒಂದು ಚಿತ್ರಕಲೆಯಲ್ಲಿ ಕಲಾವಿದ ಯಾವ ಬಣ್ಣ ಬಳಸಿದ್ದಾನೆ, ಆ ಚಿತ್ರ ಏನು ಹೇಳುತ್ತಿದೆ, ಅದರ ಶೈಲಿ ಎಲ್ಲವನ್ನೂ ಗಮನಿಸಬೇಕು. ಇದರಿಂದ ಭಾವಾಭಿವ್ಯಕ್ತಿ, ಕಲ್ಪನಾಶಕ್ತಿ, ಜ್ಞಾಪಕ ಶಕ್ತಿ ವೃದ್ಧಿಸುವುದಕ್ಕೆ ಸಹಾಯಕವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕವಿ ಗೊರೂರು ಅನಂತರಾಜ್, ಚಿತ್ರಕಲೆಯಲ್ಲಿ ನಮ್ಮ ಜಿಲ್ಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಕೆ.ಟಿ.ಶಿವಪ್ರಸಾದ್ ಗೆ ಸಲ್ಲುತ್ತದೆ. ಕಲೆಯಲ್ಲಿ ಈ ದೇಶದ ದೊಡ್ಡ ಆಸ್ತಿ ಇವರು. ಕವಿಶೈಲದಲ್ಲಿ ಇವರು ನಿರ್ಮಿಸಿರುವ ಕುವೆಂಪು- ತೇಜಸ್ವಿಯವರ ಸ್ಮಾರಕ ಬಹಳ ಅದ್ಭುತವಾಗಿದೆ, ಇಡೀ ಪರಿಸರವನ್ನೇ ಕ್ಯಾನ್ವಾಸ್ ಮಾಡಿಕೊಂಡು ತಮ್ಮದೇ ಆದ ಕಲ್ಪನೆಯಲ್ಲಿ ಸ್ಮಾರಕ ನಿರ್ಮಿಸಿದ್ದು, ಇದು ಜಗತ್ತಿನ ಬಹುದೊಡ್ಡ ಸ್ಮಾರಕವಾಗಿದೆ ಎಂದರು.ಲೇಖಕಿ ಸಿ. ಸುವರ್ಣ ಶಿವಪ್ರಸಾದ್ ಮಾತನಾಡಿ, ಕಲೆ ಮನುಷ್ಯನ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಸಹಕಾರಿಯಾಗಿದೆ, ಆದ್ದರಿಂದ ಮಕ್ಕಳು ಬಾಲ್ಯದಿಂದಲೇ ತಮ್ಮ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ನೃತ್ಯ , ಚಿತ್ರಕಲೆ , ಕ್ರೀಡೆ , ಬರವಣಿಗೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಆಗ ತಮ್ಮ ಸೃಜನಶೀಲತೆಯ ಬೆಳವಣಿಗೆ ಜೊತೆಗೆ ಸಂಸ್ಕೃತಿಯು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಆಧುನಿಕತೆ ಬೆಳೆದಂತೆ ಚಿತ್ರಕಲೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದ್ದು, ಚಿತ್ರಗಳ ನೈಜತೆ ಮತ್ತು ಅವುಗಳ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಂತಹ ಮಹತ್ವದ ಕಾರ್ಯಗಳಾಗಬೇಕು. ಉತ್ತಮ ಚಿತ್ರಗಳು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತವೆ. ಚಿತ್ರಗಳು ಶಾಶ್ವತವಾಗಿದ್ದು, ಯುವಜನರು ಮತ್ತು ವಿದ್ಯಾರ್ಥಿ ಜೀವನದಲ್ಲೇ ಚಿತ್ರ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಆಕಾಶವಾಣಿ ಗಾಯಕಿ ಸುನಂದಾ ಕೃಷ್ಣ ಭಾವಗೀತೆ, ಜಾನಪದ ಗೀತೆಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಪ್ರೇಕ್ಷಕರ ಮನಗೆದ್ದರು. ಕಲಾವಿದ ವಸಂತಕುಮಾರ್ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಚಿತ್ರಕಲೆಯ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಆಗಮಿಸಿದ್ದ ಗಣ್ಯರು ಬಹುಮಾನ ವಿತರಣೆ ಮಾಡಿದರು. ಕಲಾವಿದ ಚಂದ್ರಕಾಂತ ಸ್ವಾಗತಿಸಿ ವಂದಿಸಿದರು.