ಶಿವಮೊಗ್ಗ: ಭಯೋತ್ಪಾದಕತೆ ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ವಾಗತಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಶ್ಮೀರದಲ್ಲಿ ಭಯೋತ್ಪಾದಕರು ಧರ್ಮ ಕೇಳಿ ಬಟ್ಟೆ ಬಿಚ್ಚಿ ಗುಂಡಿನ ದಾಳಿ ನಡೆಸಿದ್ದರು. ಅದನ್ನು ಹಿಂದೂ ಸಮಾಜ ಸಹಿಸಲ್ಲ. ವಿರೋಧ ಪಕ್ಷಗಳು ಸಹ ಘಟನೆ ವಿಚಾರದಲ್ಲಿ ಎಲ್ಲರೂ ಒಂದಾಗಿದ್ದಾರೆ. ಆದ್ದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಕಾಶ್ಮೀರದಲ್ಲಿ ಉಗ್ರರ ದಾಳಿ ಇಡೀ ಪ್ರಪಂಚದ ಗಮನ ಸೆಳೆದಿದೆ. ಘಟನೆ ಬೆನ್ನಲ್ಲೆ ಇಡೀ ಹಿಂದೂ ಸಮಾಜ ಒಂದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಕೂಡ ಎಲ್ಲಾ ಪಕ್ಷಗಳು ಕೇಂದ್ರ ಸರ್ಕಾರದ ಜೊತೆಯಲ್ಲಿ ಒಗ್ಗೂಡಿದ್ದು ಸಂತೋಷದ ವಿಚಾರ. ಮೊದಲು ಅನೇಕ ದೇಶಗಳು ಪಾಕಿಸ್ತಾನದ ಪರವಾಗಿತ್ತು. ಈಗ ಮೋದಿಯವರು ವಿಶ್ವನಾಯಕರಾಗಿದ್ದಾರೆ. ಪಾಕಿಸ್ತಾನ ಈಗ ಇಡೀ ವಿಶ್ವದ ಎದುರಲ್ಲಿ ಒಬ್ಬಂಟಿಯಾಗಿದೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿಶ್ವದ ಭೂಪಟದಲ್ಲಿ ಪಾಕಿಸ್ತಾನ ಇರಲ್ಲ. ಪಾಕಿಸ್ತಾನಕ್ಕೆ ಕುಡಿಯೋಕೆ ನೀರು ಸಹ ಸಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಡೀ ಹಿಂದೂ ಸಮಾಜ ಉಪಜಾತಿಗಳ ಹೆಸರಲ್ಲಿ ಛಿದ್ರ ಛಿದ್ರವಾಗಿದೆ. ರಾಜಕಾರಣಿಗಳು ದೇಶವನ್ನು ಛಿದ್ರ ಮಾಡುವಲ್ಲಿ ಯಶ್ವಸ್ವಿಯಾಗಿದ್ದಾರೆ. ಕಾಶ್ಮೀರ ಘಟನೆ ನಂತರ ಇಡೀ ಭಾರತ ಒಂದು ಎಂದು ಒಂದಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.ಪ್ರಧಾನಿಯವರು ಬಿಹಾರದಲ್ಲಿ ಭಾಷಣ ಮಾಡುವಾಗ ಸಿಂಹದ ರೀತಿಯಲ್ಲಿ ಘರ್ಜಿಸಿದ್ರು. ಉಗ್ರರು ಊಹೆನೂ ಮಾಡಿರಬಾರದು ಅಂತ ಶಿಕ್ಷೆ ಕೊಡುತ್ತೇವೆ ಎಂದಿದ್ದಾರೆ. ಸಿಂದೂ ನದಿ ನೀರು ಬಿಡಲ್ಲ ಎನ್ನುವ ತಿರ್ಮಾನ ಮಾಡಿದ್ದಾರೆ. ಪ್ರಧಾನಿ ಮೋದಿಯವರ ದಿಟ್ಟ ನಿಲುವನ್ನು ಅನೇಕ ದೇಶಗಳು ಒಪ್ಪಿಕೊಂಡಿದೆ ಎಂದರು.ಇದೇ ವೇಳೆ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 10 ಲಕ್ಷ ರುಪಾಯಿ ಕೊಡುವುದಾಗಿ ಘೋಷಿಸಿದೆ. ಆದರೆ, ಮೃತರ ಕುಟುಂಬಕ್ಕೆ 25 ಲಕ್ಷ ರು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ.ವಿಶ್ವಾಸ್, ಬಾಲು, ಶ್ರೀಕಾಂತ್, ಮೋಹನ್ ಜಾಧವ್, ನಾಗರಾಜ್, ಜಗದೀಶ್, ಸೋಗಾನೆ ರಮೇಶ್ ಮೊದಲಾದವರಿದ್ದರು.