ಶ್ರೀದೇವಿ, ಮೂಕಾಂಬಿಕಾ ದೇವಿಯರ ಪಲ್ಲಕ್ಕಿ ಮೆರವಣಿಗೆ

KannadaprabhaNewsNetwork |  
Published : Oct 20, 2026, 01:45 AM IST
ಫೋಟೋ ಶೀರ್ಷಿಕೆಗಳು1. ಕಾರಟಗಿಯ ಶ್ರೀದೇವಿ ದೇವಸ್ಥಾನದ ಕುಂಭೋತ್ಸವದಲ್ಲಿ ಪಾಲ್ಗೊಂಡ ಸುಮಂಗಲೆಯರು.2. ಮೂಕಾಂಬಿಕಾ ದೇವಸ್ಥಾನದ ಉತ್ಸವದ ಅಂಗವಾಗಿ ಕುಂಭಕಳಸಗಳೊಂದಿಗೆ ನಡೆದ ಮೆರವಣಿಗೆ. | Kannada Prabha

ಸಾರಾಂಶ

ಸ್ಥಳೀಯ ಹಳೆಬಜಾರ್‌ನ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಾವಿಯಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ಬಳಿಕ ಅಪಾರ ಸಂಖ್ಯೆಯ ಸುಮಂಗಲೆಯರು ಕುಂಭಕಳಸಗಳನ್ನು ಹೊತ್ತು ಶ್ರೀದೇವಿಯ ಮೂರ್ತಿ ಹಾಗೂ ಭಾವಚಿತ್ರದೊಂದಿಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕಾರಟಗಿ: ಪಟ್ಟಣದ ಜೆಪಿ ನಗರದ ಶ್ರೀದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಸೋಮವಾರ ಮಹಿಳೆಯರ ಕುಂಭೋತ್ಸವ ಹಾಗೂ ಶ್ರೀದೇವಿ ದೇವಿಯ ಪಲ್ಲಕ್ಕಿ ಮೆರವಣಿಗೆ ಭಕ್ತಿ, ಸಡಗರದಿಂದ ಜರುಗಿತು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಭಿಷೇಕ, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ ಕಳಸ, ಕನ್ನಡಿಯೊಂದಿಗೆ ಭಾಜಾ- ಭಜಂತ್ರಿ, ಕಹಳೆ, ಡೊಳ್ಳು, ಭಜನಾ ಮೇಳ ಹಾಗೂ ಜಾಂಜ್‌ಮೇಳದೊಂದಿಗೆ ಮೆರವಣಿಗೆ ಆರಂಭಗೊಂಡಿತು.

ಸ್ಥಳೀಯ ಹಳೆಬಜಾರ್‌ನ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಾವಿಯಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ಬಳಿಕ ಅಪಾರ ಸಂಖ್ಯೆಯ ಸುಮಂಗಲೆಯರು ಕುಂಭಕಳಸಗಳನ್ನು ಹೊತ್ತು ಶ್ರೀದೇವಿಯ ಮೂರ್ತಿ ಹಾಗೂ ಭಾವಚಿತ್ರದೊಂದಿಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕನಕದಾಸ ವೃತ್ತದಿಂದ ನವಲಿ ರಸ್ತೆ ಮಾರ್ಗವಾಗಿ ಜೆಪಿ ನಗರದ ಶ್ರೀದೇವಿ ದೇವಸ್ಥಾನಕ್ಕೆ ಮೆರವಣಿಗೆ ತಲುಪಿತು.

ದೇವಸ್ಥಾನದಲ್ಲಿ ಕುಂಭಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. ನೂರಾರು ಭಕ್ತರು ದೇವಿಯ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು. ಹಿರೇಮಠದ ಮರುಳಸಿದ್ಧಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಅರ್ಚಕ ಚನ್ನಬಸಯ್ಯ ಸ್ವಾಮೀಜಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಮೂಕಾಂಬಿಕಾ ದೇವಸ್ಥಾನದಲ್ಲೂ ಧಾರ್ಮಿಕ ಸಂಭ್ರಮ

ಪಟ್ಟಣದ ಬೂದಗುಂಪಾ ರಸ್ತೆಯ ಮೂಕಾಂಬಿಕಾ ದೇವಸ್ಥಾನದಲ್ಲಿಯೂ ಸೋಮವಾರ ದುರ್ಗಾಷ್ಟಮಿಯ ಅಂಗವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಪೂಜೆಯ ಬಳಿಕ ಕುಂಭಕಳಸಗಳನ್ನು ಹೊತ್ತ ಸುಮಂಗಲೆಯರು ತುಂಗಭದ್ರಾ 31ನೇ ವಿತರಣಾ ಕಾಲುವೆಯ ಗಂಗಾಸ್ಥಳಕ್ಕೆ ತೆರಳಿ ಗಂಗಾಪೂಜೆ ನೆರವೇರಿಸಿದರು.

ಬಳಿಕ ಭಾಜಾ- ಭಜಂತ್ರಿ, ಡೊಳ್ಳು ವಾದ್ಯಗಳೊಂದಿಗೆ ಆರ್.ಜಿ. ಮುಖ್ಯರಸ್ತೆ ಮಾರ್ಗವಾಗಿ ಛತ್ರಚಾಮರ ಸಹಿತ ಕುಂಭಕಳಸಗಳ ಮೆರವಣಿಗೆ ಹಾಗೂ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನವಲಿ ವೃತ್ತದ ಮೂಲಕ ಬೂದಗುಂಪಾ ರಸ್ತೆಯ ಮೂಕಾಂಬಿಕಾ ದೇವಸ್ಥಾನ ತಲುಪಿತು.

ಸಾಲಿಮಠದ ಅರ್ಚಕ ಪ್ರಭುಲಿಂಗಯ್ಯ ಸ್ವಾಮಿ ಹಾಗೂ ಮಹಾಂತಯ್ಯ ತಾತನವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಬಳಿಕ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮೂಕಾಂಬಿಕಾ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಪಟ್ಟಣದ ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿಯುತ ಮತದಾನ ನಡೆಸಲು ಕ್ರಮ ವಹಿಸಿ: ಡಿಸಿ ಶ್ರೀಧರ್
ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್