ಸರ್ವಾಧಿಕಾರಿ ಅಧಿಕಾರಿಗಳಿಂದ ಪಾಲಿಕೆ ಐಸಿಯುನಲ್ಲಿದೆ: ಕೆ.ಪ್ರಸನ್ನಕುಮಾರ

KannadaprabhaNewsNetwork |  
Published : Jun 20, 2024, 01:04 AM IST
19ಕೆಡಿವಿಜಿ1-ದಾವಣಗೆರೆಯಲ್ಲಿ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಪಾಲಿಕೆ ಆಡಳಿತವು ಐಸಿಯುನಲ್ಲಿದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿ ಶಾಹಿಗಳು ಜನ ಪ್ರತಿನಿಧಿಗಳಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಪರಿಸ್ಥಿತಿ ಬಂದೊದಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಕಷ್ಟು ಒತ್ತಾಯ ಮಾಡುತ್ತಿದ್ದರೂ ಕಿವಿಗೊಡದ, ಸಾಮಾನ್ಯ ಸಭೆ ಮಾಡಿ 3 ತಿಂಗಳಾದರೂ ಮತ್ತೊಂದು ಸಾಮಾನ್ಯ ಸಭೆ ಕರೆಯಲು ಮೇಯರ್ ಆಗಲೀ, ಆಯುಕ್ತರಾಗಲಿ ಕ್ರಮ ಕೈಗೊಳ್ಳದೇ ಅಸಡ್ಡೆ ತೋರುತ್ತಿದ್ದಾರೆ ಎಂದರು.

ಮೇಯರ್, ಆಯುಕ್ತರ ಇಂತಹ ವರ್ತನೆ ಪ್ರಜಾತಂತ್ರ ವ್ಯವಸ್ಥೆಗೂ ಮಾರಕವಾಗಿದೆ. ಕರ್ನಾಟಕ ಪೌರ ನಿಗಮ ಅಧಿನಿಯಮ 1976, ಅಧ್ಯಾಯ 3ನೇ ನಿಯಮ 2ರ ಅಡಿ ಮುಂದಿನ ಮೇಯರ್ ಆಯ್ಕೆಯಾಗುವವರೆಗೂ ಹಾಲಿ ಮೇಯರ್ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಇದೆ. ಯಾವುದೇ ಸಬೂಬನ್ನು ಹೇಳದೇ, ಮಹಾ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇನ್ನಾದರೂ ತುರ್ತು ಸಾಮಾನ್ಯ ಸಭೆ ಕರೆಯಲಿ ಎಂದು ತಾಕೀತು ಮಾಡಿದರು.

ಪಾಲಿಕೆ ಕಂದಾಯ ಶಾಖೆಯಲ್ಲಿ ಕಳೆದ 8 ದಿನಗಳಿಂದಲೂ ಸರ್ವರ್ ಸಮಸ್ಯೆಯೆಂದು ಇ-ಆಸ್ತಿ ಪಡೆಯುವ ಮತ್ತು ಖಾತೆ ಬದಲಾವಣೆ ಕೆಲಸಗಳ ಅರ್ಜಿ ವಿಲೇವಾರಿ ಮಾಡಲು ವಿಳಂಬ ಮಾಡಲಾಗುತ್ತಿದೆ. ಮಳೆಗಾಲ ಶುರುವಾಗಿದ್ದರೂ ಮಳೆ ನೀರು ಚರಂಡಿಗಳ ಹೂಳು ತೆಗೆಯುವ ವ್ಯವದಾನವೂ ಅಧಿಕಾರಿಗಳಿಗೆ ಇಲ್ಲ. ಕುಡಿಯು ನೀರನ್ನು ಸಮರ್ಪಕವಾಗಿ ಪೂರೈಸುವಲ್ಲೂ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಜನರ ಗಾಯದ ಮೇಲೆ ಬರೆ ಎಳೆದಂತೆ ಜಲಸಿರಿ ಪೈಪ್‌ ಲೈನ್ ಮನೆಗಳಿಗೆ ಕಲ್ಪಿಸಿ, ನೀರು ಪೂರೈಸದಿದ್ದರೂ ಜನರಿಗೆ ನೀರಿನ ಬಿಲ್ ಪಾವತಿಸುವಂತೆ ಜಲಸಿರಿ ಯೋಜನೆ ಅಧಿಕಾರಿಗಳು ಪೀಡಿಸುತ್ತಿರುವುದು ಪಾಲಿಕೆ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹಿಂದಿನ ಸಾಮಾನ್ಯ ಸಭೆಯಲ್ಲೇ ಪೂರ್ಣ ಪ್ರಮಾಣದ ಸಮರ್ಪಕ ನೀರನ್ನು ಜಲಸಿರಿಯಡಿ ನೀರು ಪೂರೈಸಿದ ನಂತರವಷ್ಟೇ ಬಿಲ್ ನೀಡುವಂತೆ ಒತ್ತಾಯಿಸಿದ್ದ ಸದಸ್ಯರ ಒತ್ತಾಯಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿದರು.

ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಜನ ಹಿತದ ದೃಷ್ಟಿಯಿಂದ ಸದಸ್ಯರು ಜಲಿಸಿರಿಯಡಿ ಸಮರ್ಪಕ ನೀರು ಪೂರೈಸದೇ ಬಿಲ್‌ ನೀಡದಂತೆ ಒತ್ತಾಯಿಸಿದ್ದರೂ, ಅಧಿಕಾರಿ ವರ್ಗ ಕಿವಿಗೊಡದೇ, ಮನಸೋಇಚ್ಛೆ ವರ್ತಿಸುತ್ತಿದ್ದಾರೆ. ಜಲಸಿರಿ ಬಿಲ್ ನೀಡಿರುವುದು, ಹಗಲು ದರೋಡೆ ಮಾಡುತ್ತಿರುವುದು, ಆಸ್ತಿ ತೆರಿಗೆಯನ್ನು ಅವೈಜ್ಞಾನಿಕವಾಗಿ ದುಪ್ಪಟ್ಟುಗೊಳಿಸಿದ್ದನ್ನು ಕಡಿಮೆ ಮಾಡಲು ಒತ್ತಾಯಕ್ಕೂ ಅಧಿಕಾರಿಗಳು ಕಿವಿಗೊಡದೇ, ತಮ್ಮದೇ ಮೊಂಡು ವರ್ತನೆ ಮುಂದುವರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೂ ಅಲ್ಲ ಎಂದು ಅವರು ಆಕ್ಷೇಪಿಸಿದರು.

ಗ್ಯಾರಂಟಿಗಾಗಿ ಜನರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮೇಯರ್ ಚುನಾವಣೆಗೆ ಇನ್ನೂ ಮೀಸಲಾತಿ ಪ್ರಕಟಿಸದೇ, ಅಧಿಕಾರಿಗಳ ಮೂಲಕ ಹಿಂಬಾಗಿಲ ರಾಜಕಾರಣ‍ ಮಾಡುತ್ತಿರುವುದು ಖಂಡನೀಯ. ಪ್ರಜಾಪ್ರಭುತ್ವ ಉಳಿಸುತ್ತೇವೆಂದು ಉದ್ದುದ್ದ ಭಾಷಣ ನೀಡುತ್ತಾ, ಇಂದು ಪಾಲಿಕೆ ಸದಸ್ಯರ ಅಧಿಕಾರವನ್ನೇ ಕಸಿಯಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವೊಬ್ಬ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಸಹಿಸಲು ಸಾಧ್ಯವಿಲ್ಲ. ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಭೇಟಿ ಮಾಡಿ, ಪಾಲಿಕೆ ಬೆಳವಣಿಗೆಗಳ ಬಗ್ಗೆ ಗಮನಕ್ಕೆ ತಂದಿದ್ದೇವೆ. ತಕ್ಷಣವೇ ಸಾಮಾನ್ಯ ಸಭೆ ಕರೆಯುವಂತೆ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದೇವೆ ಎಂದು ಕೆ.ಪ್ರಸನ್ನಕುಮಾರ ತಿಳಿಸಿದರು.

ಉಪ ಮೇಯರ್ ಯಶೋಧಾ ಯೋಗೇಶ, ಸದಸ್ಯರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಆರ್.ಶಿವಾನಂದ, ಆರ್.ಎಲ್.ಶಿವಪ್ರಕಾಶ, ಕೆ.ಎಂ.ವೀರೇಶ, ಬಿಜೆಪಿ ಮುಖಂಡ ಸುರೇಶ ಗಂಡಗಾಳೆ ಇತರರು ಇದ್ದರು.

ದಾವಣಗೆರೆ ಪಾಲಿಕೆಯಲ್ಲಿ ಅಧಿಕಾರಿಗಳ ಅಟ್ಟಹಾಸ ನಡೆಯುತ್ತಿದ್ದು, ಅಧಿಕಾರಿಗಳಿಗೆ ಕಾನೂನಿನ ಬಗ್ಗೆ ಗೌರವ ಇಲ್ಲ. ಜನ ಸಾಮಾನ್ಯರ ಬಗ್ಗೆ ಕನಿಷ್ಟ ಕಾಳಜಿ ಇಲ್ಲ. ಇಲ್ಲಿನ ಜನಪ್ರತಿನಿಧಿಗಳ ಬಗ್ಗೆಯೂ ಕನಿಷ್ಟ ಭಯವೂ ಇಲ್ಲ. ಇದೆಲ್ಲದರಿಂದಾಗಿ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.

ಎಸ್‌.ಟಿ.ವೀರೇಶ, ಮಾಜಿ ಮೇಯರ್

ದಾವಣಗೆರೆ ಜನತೆಗೆ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗದಿರುವುದು ಖಂಡನೀಯ. ತಕ್ಷಣವೇ ಜನರಿಗೆ ತೊಂದರೆಯಾಗದಂತೆ ಪಾಲಿಕೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಸಚಿವರು ಮಾಡಬೇಕು. ಅಧಿಕಾರಿಗಳೂ ಸಹ ಸರ್ವಾಧಿಕಾರಿ ಧೋರಣೆ ಬಿಡಲಿ.

ಸುರೇಶ ಗಂಡಗಾಳೆ ಬಿಜೆಪಿ ಮುಖಂಡ.

PREV

Recommended Stories

ನಾಲ್ಕು ಜಿಲ್ಲೆಗಳಲ್ಲಿ ಮಳೆ ಆರ್ಭಟ : ಬೆಳೆ ಹಾನಿ ಆತಂಕದಲ್ಲಿ ರೈತರು
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌