ಎಸ್‌ಯುಸಿಐ ಅಭ್ಯರ್ಥಿ ಪರ ಕರಪತ್ರ ಹಂಚಿ ಪ್ರಚಾರ

ಬಂಡವಾಳಶಾಹಿ ಶೋಷಕ ವರ್ಗದ ಹಿತಕಾಯುವ ಈ ಎರಡೂ ಜನವಿರೋಧಿ ಪಕ್ಷಗಳನ್ನು ಸೋಲಿಸಿ ಅಧಿಕಾರದಿಂದ ದೂರ ಇಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನಗರ ಸಮಿತಿ ಅಧ್ಯಕ್ಷ ಮಲ್ಲಿನಾಥ ಹುಂಡೇಕಲ್ ಹೇಳಿದರು.

KannadaprabhaNewsNetwork | Published : Apr 27, 2024 7:48 PM IST

ಕನ್ನಡಪ್ರಭ ವಾರ್ತೆ ಚಿತ್ತಾಪುರ

ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆ, ಭ್ರಷ್ಟಾಚಾರ ಜೀವಂತವಾಗಿರಲು ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ- ಕಾಂಗ್ರೆಸ್ ಪಕ್ಷಗಳೇ ಕಾರಣವಾಗಿವೆ. ಬಂಡವಾಳಶಾಹಿ ಶೋಷಕ ವರ್ಗದ ಹಿತಕಾಯುವ ಈ ಎರಡೂ ಜನವಿರೋಧಿ ಪಕ್ಷಗಳನ್ನು ಸೋಲಿಸಿ ಅಧಿಕಾರದಿಂದ ದೂರ ಇಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನಗರ ಸಮಿತಿ ಅಧ್ಯಕ್ಷ ಮಲ್ಲಿನಾಥ ಹುಂಡೇಕಲ್ ಹೇಳಿದರು.

ವಾಡಿ ಪಟ್ಟಣದಲ್ಲಿ ಕಲಬುರಗಿ ಲೋಕಸಭೆ ಚುನಾವಣೆಯ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ. ಶರ್ಮಾ ಪರ ಮನೆ ಮನೆಗೆ ಕರಪತ್ರಗಳನ್ನು ವಿತರಿಸುವ ಮೂಲಕ ಮತಯಾಚಿಸಿ ಅವರು ಮಾತನಾಡಿದರು.ಬಡವರು, ರೈತರು, ಮಹಿಳೆಯರ ಪರವಾಗಿದ್ದೇವೆ ಎಂದು ಹೇಳಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ಮತ್ತು ಬಿಜೆಪಿ, ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ಕಂಡುಕೊಳ್ಳಲಿಲ್ಲ. ಚುನಾವಣೆಗಳು ಬಂದಾಗ ಸುಳ್ಳು ಭರವಸೆಗಳನ್ನು ಕೊಟ್ಟು ಮತದಾರರಿಗೆ ಮೋಸ ಮಾಡುವುದೇ ಈ ಪಕ್ಷಗಳ ಕಾಯಕವಾಗಿದೆ. ಗೆದ್ದ ಬಳಿಕ ಬಡವರನ್ನು ತುಳಿಯುವ ಕಾನೂನುಗಳನ್ನೆ ಜಾರಿಗೆ ತಂದಿರುವುದು ಇವರ ಸಾಧನೆಯಾಗಿದೆ. ಹಣ ಮತ್ತು ಹೆಂಡವನ್ನು ಹಂಚಿ ಅಧಿಕಾರಕ್ಕೇರುವ ಈ ಭ್ರಷ್ಟ ಪಕ್ಷಗಳು, ಸರ್ಕಾರದ ಖಜಾನೆಯನ್ನು ಲೂಟಿ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಹಿಂದು-ಮುಸ್ಲಿಂ ಕೋಮು ಸಂಘರ್ಷ ಸೃಷ್ಠಿಸಿ ಜನರ ಐಕ್ಯತೆ ಒಡೆಯುತ್ತಾರೆ. ಇಂಥವರು ಜನಸೇವೆಗೆ ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‌ಒ ಅಧ್ಯಕ್ಷ ವೆಂಕಟೇಶ ದೇವದುರ್ಗ ಮಾತನಾಡಿ, ಹಣಬಲವಿಲ್ಲದೆ ಯಾವೂದೇ ಚುನಾವಣೆ ಎದುರಿಸುವಂತಿಲ್ಲ ಎಂಬಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮತದಾರರಿಗೆ ಹಣವನ್ನು ಹಂಚಿ ಗೆಲ್ಲುವ ದಾರಿ ಹುಡುಕುತ್ತವೆ. ನಾವು ಎಸ್‌ಯುಸಿಐ ಪಕ್ಷದ ಕಾರ್ಯಕರ್ತರು ಬೀದಿಗಳಲ್ಲಿ ದೇಣಿಗೆ ಪೆಟ್ಟಿಗೆ ಹಿಡಿದು ನಿಲ್ಲುವ ಮೂಲಕ ಪಕ್ಷದ ನಿಧಿ ಸಂಗ್ರಹಿಸುತ್ತೇವೆ. ಚುನಾವಣೆ ಕರ್ಚಿಗಾಗಿ ನೋಟು ಕೊಡುವ ಮೂಲಕ ಜನರು ಓಟು ಕೊಡಬೇಕು ಎಂದು ಮನವಿ ಮಾಡುತ್ತಿದ್ದೇವೆ. ಜನಪರ ಹೋರಾಟಗಳಿಂದ ಹೊರಹೊಮ್ಮಿದ ಜನಪರ ಪಕ್ಷ ಎಸ್‌ಯುಸಿಐ ಅಭ್ಯರ್ಥಿ ಎಸ್.ಎಂ.ಶರ್ಮಾ ಅವರ ಬ್ಯಾಟ್ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಎಸ್‌ಯುಸಿಐ (ಸಿ) ಕಾರ್ಯದರ್ಶಿ ವೀರಭದ್ರಪ್ಪಾ ಆರ್.ಕೆ, ಮುಖಂಡರಾದ ಶರಣು ಹೇರೂರ, ರಾಜು ಒಡೆಯರಾಜ್, ಗೋವಿಂದ ಯಳವಾರ, ಸಿದ್ಧಾರ್ಥ ತಿಪ್ಪನೋರ ಸೇರಿದಂತೆ ಇತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Share this article