ಹಾನಗಲ್ಲ: ಮಾನವ ಜನ್ಮ ದೊಡ್ಡದು ಎಂಬ ಅರಿವು ನಮಗಿದ್ದರೆ ತಿಳಿ ಮನಸ್ಸಿನ ಧರ್ಮ ಸಂಸ್ಕಾರದೊಂದಿಗೆ ಎಲ್ಲರಿಗೂ ಬೇಕಾಗುವ ಜೀವನ ನಡೆಸಲು ಸಾಧ್ಯ ಎಂದು ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಜಾತಿ ಮತ ಬಿಟ್ಟು ಭಾವೈಕ್ಯತೆಯನ್ನು ಬಿತ್ತಿ ಬೆಳೆಯಬೇಕು. ಸಂಸ್ಕಾರ ಸಂಸ್ಕೃತಿ ಮೊದಲ ಆದ್ಯತೆಯಾಗಲಿ. ಭಿಕ್ಷೆ ಬೇಡುವ ಕೈಗೆ ಸಂಗೀತ ವಾದ್ಯಗಳನ್ನು ನೀಡಿ ಗೌರವದಿಂದ ಬದುಕುವದು ಮಾತ್ರವಲ್ಲ, ತಮ್ಮ ಪ್ರತಿಭೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಹಾಗೆ ಬೆಳಕು ಚೆಲ್ಲಿದ ಶ್ರೇಯಸ್ಸು ಪಂ.ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ. ಅಂತಹ ಪುಣ್ಯಾತ್ಮರು ನಡೆದಾಡಿದ ಈ ಭೂಮಿ ಪಾವನ ಭೂಮಿಯಾಗಿದೆ. ಪಂಚಾಕ್ಷರ ಗವಾಯಿಗಳವರು ಶಿವನ ಸೃಷ್ಟಿಯಾಗಿ ಭೂಲೋಕಕ್ಕೆ ಬಂದವರು. ಅಲ್ಲದೆ ಈ ಲೋಕವನ್ನು ಪಾವನಗೊಳಿಸಿದ ಪುಣ್ಯಾತ್ಮರು ಎಂದರು. ಶ್ರೀ ಕುಮಾರ ಪಂಚಾಕ್ಷರೇಶ್ವರ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಬಸಯ್ಯ ಚರಂತಿಮಠ, ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಕವಿ ಗವಾಯಿಗಳವರು ಅಂಧ ಅನಾಥರಿಗೆ ಜೀವನ ದೀಕ್ಷೆ ನೀಡಿ, ಸಂಗೀತ ಸಾಹಿತ್ಯ ಪುರಾಣ ಪ್ರವಚನದ ಜ್ಞಾನ ನೀಡಿ ಇಂಥವರ ಪಾಲಿನ ತಂದೆಯಾಗಿ ಬೆಳಗಿದ್ದಾರೆ. ಶತಶತಮಾನಗಳು ಕಳೆದರೂ ಪಂ.ಪಂಚಾಕ್ಷರ ಗವಾಯಿಗಳವರು ಹಾಗೂ ಪುಟ್ಟರಾಜ ಕವಿ ಗವಾಯಿಗಳವರು ಜನಮಾನಸದಲ್ಲಿ ಶಾಶ್ವತವಾಗಿರುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಅಜಗುಂಡಿ, ಗಾನಯೋಗಿ ಪಂಚಾಕ್ಷರಿ ಕಲಾ ಸಂಘದ ಅಧ್ಯಕ್ಷ ಡಿ.ಎಸ್. ಪಾಟೀಲ, ಸಾಹಿತಿ ಮಾರುತಿ ಶಿಡ್ಲಾಪೂರ, ನ್ಯಾಯವಾದಿ ಎಸ್.ಎಂ.ಕೋತಂಬರಿ, ವಿಜಯಕುಮಾರ ದೊಡ್ಡಮನಿ, ವೆಂಕಟೇಶ ಗವಾಯಿ, ಶಿವಕುಮಾರ ಪಾಟೀಲ, ಧಾರವಾಡ ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ ಪಾಲ್ಗೊಂಡಿದ್ದರು.