ಕನ್ನಡಪ್ರಭ ವಾರ್ತೆ ಉಳ್ಳಾಲ
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗ್ರಾಮಚಾವಡಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಂಚಲೋಹ ವಿಗ್ರಹದ ಪುನರ್ ಪ್ರತಿಷ್ಠೆ, ಮಹಾಕುಂಭಾಭಿಷೇಕ ಹಾಗೂ ಸಂಘದ 44ನೇ ವಾರ್ಷಿಕೋತ್ಸವ ಸಮಾರಂಭವು ಡಿ.22ರಿಂದ ಡಿ.25ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಶುಕ್ರವಾರ ತೊಕ್ಕೊಟ್ಟು ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದರು.ಡಿ.22ರಂದು ಬೆಳಗ್ಗೆ 9.25ಕ್ಕೆ ಉಗ್ರಾಣ ಮುಹೂರ್ತ, 10.15ಕ್ಕೆ ಕೊಪ್ಪರಿಗೆ ಮುಹೂರ್ತ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿದೆ. 12.30ಕ್ಕೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ವಿಗ್ರಹ ಪೂಜೆ ನೆರವೇರಿಸಿದ ನಂತರ ಪಂಚಲೋಹ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ.
ಸಂಜೆ ಗಂಟೆ 7.00ರಿಂದ ಸೋಲೂರು ಮಠದ ಪೀಠಾಧಿಪತಿಗಳಾದ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕಣಿಯೂರು ಮಠದ ಮಹಾಬಲೇಶ್ವರ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಮಂಗಳೂರು ತಾಲೂಕು ಬಿಲ್ಲವರ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಅಧ್ಯಕ್ಷತೆ ವಹಿಸುವರು. ಬಂಟ್ವಾಳ ಬಿಲ್ಲವರ ಸೇವಾ ಸಮಾಜದ ಅಧ್ಯಕ್ಷ ಸಂಜೀವ ಪೂಜಾರಿ ಸಮಾರಂಭ ಉದ್ಘಾಟಿಸುವರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತ್ತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಡಿ. 23ರಂದು ವಿವಿಧ ವೈದಿಕ ವಿಧಿವಿಧಾನಗಳು ನಡೆಯಲಿದ್ದು ಡಿ.24ರಂದು ವಿವಿಧ ವೈಧಿಕ ಕಾರ್ಯಕ್ರಮಗಳ ಜೊತೆಗೆ ಸಂಜೆ ಗಂಟೆ 6.00ರಿಂದ ಶ್ರೀ ದುರ್ಗಾನಮಸ್ಕಾರ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಡಿ.25ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಪಂಚಲೋಹ ವಿಗ್ರಹದ ಪ್ರತಿಷ್ಠೆ ಮಹಾಕುಂಭಾಭಿಷೇಕ ನಡೆಯಲಿದೆ. ಮಧ್ಯಾಹ್ನ 12ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸುವರು. ಸ್ಪೀಕರ್ ಯು.ಟಿ. ಖಾದರ್ ಬಹುಮಾನ ವಿತರರಿಸುವರು. ಅರ್ಚಕರ ಕೊಠಡಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಆಂಬುಲೆನ್ಸ್‌ನ್ನು ಸಂಸದ ಬ್ರಿಜೇಶ್ ಚೌಟಿ ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಅಧ್ಯಕ್ಷ ಎಸ್.ಎಚ್. ಸಾಯಿರಾಂ ಸಾಧಕರಿಗೆ ಸನ್ಮಾನ ಮಾಡುವರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಕೆ.ಟಿ. ಸುವರ್ಣ ಹಾಗೂ ಯಶವಂತ ಡಿ. ದೇರಾಜೆಗುತ್ತು, ಕಾರ್ಯಾಧ್ಯಕ್ಷೆ ದೇವಕಿ ಆರ್. ಉಳ್ಳಾಲ್, ಪ್ರಧಾನ ಸಂಚಾಲಕರಾದ ಕೆ.ಪಿ. ಸುರೇಶ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಗ್ರಾಮಚಾವಡಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಬೋಳಿಯಾರ್, ಮಾಜಿ ಅಧ್ಯಕ್ಷ ಎ. ಲಕ್ಷ್ಮಣ ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಗ್ರಾಮಚಾವಡಿ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಡಿ. ಕುಂದರ್ ಇದ್ದರು.