ಗಜೇಂದ್ರಗಡ: ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪಂಚಮಸಾಲಿ ಸಮಾಜದ ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ನೀಡಿದ್ದ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.
ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿಸಿದ ಯಾವುದಾದರೂ ಸರ್ಕಾರ ಇದ್ರೆ ಅದು ಸಿದ್ದರಾಮಯ್ಯ ಸರ್ಕಾರ. ನಾವು ಮೀಸಲಾತಿ ಕೇಳುತ್ತಿದ್ದೇವೆ. ಬೇರೆಯವರ ಮೀಸಲಾತಿ ಕಸಿಯುತ್ತಿಲ್ಲ. ಹಿಂದಿನ ಅವಧಿಯಲ್ಲಿದ್ದ ಬೊಮ್ಮಾಯಿ ಸರ್ಕಾರ ನಮಗೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಪ್ರಚಂಡ ಬಹುಮತ ನೀಡಿದೆ. ಈಗಲೂ ಕಾಲ ಮಿಂಚಿಲ್ಲ. ಈ ಹಿಂದೆ ಗೋಲಿಬಾರ್ ಮಾಡಿಸಿದ ಗುಂಡೂರಾವ್ ಸರ್ಕಾರ ಏನಾಯಿತು. ಹಿರಿಯ ಪೊಲೀಸ್ ಅಧಿಕಾರಿ ಅಮಾನತು ಮಾಡಿ ಹಾಕಿರುವ ಕೇಸ್ ಹಿಂಪಡೆಯಬೇಕು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಇದಕ್ಕೂ ಮುನ್ನ ಪಟ್ಟಣದ ದುರ್ಗಾ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯೂ ಅಂಬೇಡ್ಕರ ವೃತ್ತ, ಶಿವಾಜಿ ವೃತ್ತದಿಂದ ಕಾಲಕಾಲೇಶ್ವರ ವೃತ್ತಕ್ಕೆ ಆಗಮಿಸಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತ್ತು. ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪ್ರಭು ಚವಡಿ, ಮುತ್ತಣ್ಣ ಮ್ಯಾಗೇರಿ, ಟಿ.ಎಸ್. ರಾಜೂರ, ಬಸವರಾಜ ಮೂಲಿಮನಿ, ಸುಭಾಷ್ ಮ್ಯಾಗೇರಿ, ಬಸವರಾಜ ಮೂಲಿಮನಿ, ಈಶಣ್ಣ ಮ್ಯಾಗೇರಿ, ಅಮರೇಶ ಬೂದಿಹಾಳ, ಚಂಬಣ್ಣ ಚವಡಿ, ಪವಾಡೆಪ್ಪ ಮ್ಯಾಗೇರಿ, ಉಮೇಶ ಚನ್ನು ಪಾಟೀಲ, ವಿಜಯ ಬೂದಿಹಾಳ, ಅಂದಪ್ಪ ಅಂಗಡಿ, ಬಸಪ್ಪ ಅಕ್ಕಿ ಸೇರಿದಂತೆ ಇತರರು ಇದ್ದರು.