ಕೊಪ್ಪಳ: ಪಂಚಮಸಾಲಿ ಸಮಾಜಕ್ಕೆ 2 ಎ ಹಾಗೂ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ. 10ರಂದು ಬೆಳಗಾವಿಯಲ್ಲಿ ಸುವರ್ಣಸೌಧದ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಮೀಸಲಾತಿ ನೀಡುವಂತೆ ಕೇಳುವುದು ನಮ್ಮ ಹಕ್ಕು. ಸರ್ಕಾರ ಯಾವ ರೂಪದಲ್ಲಿ ಮೀಸಲಾತಿ ನೀಡುತ್ತದೆ ಎಂಬುದು ಮುಖ್ಯವಲ್ಲ. ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಹಿಂದಿನ ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿದ್ದು, ಅದಕ್ಕೆ ಸಂಬಂಧಿಸಿದ ಕಾನೂನು ತೊಡಕುಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜದ ಶಾಸಕರು ಪಕ್ಷಾತೀತವಾಗಿ ಮೀಸಲಾತಿ ಪರವಾಗಿ ಧ್ವನಿ ಎತ್ತಬೇಕು. ಪಂಚಮಸಾಲಿ ಸಮಾಜದ ಶಾಸಕರು ಈ ವರೆಗೆ ಮುಖ್ಯಮಂತ್ರಿಗಳ ಬಳಿ ಮೀಸಲಾತಿ ಕುರಿತು ಸಮರ್ಪಕವಾಗಿ ಮಾತನಾಡಿಲ್ಲ. ಈಗ ಜಿಪಂ ಹಾಗೂ ತಾಪಂ ಚುನಾವಣೆಗಳು ಸಮೀಪಿಸುತ್ತಿದ್ದು, ಸಮಾಜದ ಬೇಡಿಕೆ ಕುರಿತು ಮಾತನಾಡಲು ಇದು ಸೂಕ್ತ ಸಮಯವಾಗಿದೆ. ನಮ್ಮ ಭಾಗದಲ್ಲೇ ಅಧಿವೇಶನ ನಡೆಯುತ್ತಿರುವುದರಿಂದ ಶಾಸಕರು ಸಮಾಜದ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.ಪಂಚಮಸಾಲಿ ಸಮಾಜ ದೊಡ್ಡ ಸಮುದಾಯವಾಗಿದ್ದು, ಇದೀಗ ಒಗ್ಗಟ್ಟಾಗುತ್ತಿದೆ. ಸಮಾಜದ ಮೀಸಲಾತಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಕಠಿಣ ಕಾನೂನು ಜಾರಿ ಅಗತ್ಯ: ಶ್ರೀ ಬಸವಣ್ಣನಿಗೆ ಅಪಚಾರ ಮಾಡಿರುವ ಬಸವ ಮಂಟಪ ಕೃತಿಯ ವಿರುದ್ಧ ಸರ್ಕಾರದ ಕ್ರಮ ಸ್ವಾಗತಾರ್ಹವಾದರೂ ಈ ದಿಸೆಯಲ್ಲಿ ಧರ್ಮದ್ರೋಹಿ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಹಿರಿಯರಾದ ದೇವೇಂದ್ರಪ್ಪ ಬಳೂಟಗಿ, ಬಸವಲಿಂಗಪ್ಪ ಭೂತೆ, ಶಂಭುಲಿಂಗನಗೌಡ ಹಲಿಗೇರಿ, ಕರಿಯಪ್ಪ ಮೇಟಿ, ಈರಣ್ಣ ಹುಬ್ಬಳ್ಳಿ ಇದ್ದರು.