ಸಿಂದಗಿ : ಪಂಚಮಸಾಲಿಗಳ ಹೋರಾಟಕ್ಕೆ ಯಶಸ್ಸು ಸಿಗದೇ ಇರಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇದ್ಯಾವುದಕ್ಕೂ ಜಗ್ಗದೆ, ಎದೆಗುಂದದೆ ಯಾರೇ ಮುಖ್ಯಮಂತ್ರಿ ಆಗಿರಲಿ, ಯಾವುದೇ ಸರ್ಕಾರ ಬರಲಿ ಜಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುಡುಗಿದರು.
2ಎ ಮೀಸಲಾತಿಗಾಗಿ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸೋಮವಾರ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಮನೆಗೆ ತೆರಳಿ ಮುಂಬರುವ ಮುಂಗಾರು ಅಧಿವೇಶನದಲ್ಲಿ ಮೀಸಲಾತಿಯ ಕುರಿತು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕಳೆದ ಬಾರಿಯ ಬಿಜೆಪಿ ಸರ್ಕಾರದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಪ್ರಸ್ತುತ ಸರ್ಕಾರವೂ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ದೂರಿದರು. ಸಮಾಜದ ಕೃಪಾಕಟಾಕ್ಷದಿಂದ ಚುನಾಯಿತ ಶಾಸಕರಲ್ಲಿ ಬೆರಳೆಣಿಕೆಯಷ್ಟು ಶಾಸಕರಿಂದ ಮಾತ್ರ ಸಹಕಾರ ದೊರೆತಿದೆ, ಅವರುಗಳಲ್ಲಿ ಸಿಂದಗಿಯ ಶಾಸಕ ಅಶೋಕ ಮನಗೂಳಿ ಅವರು ಕೂಡ ಒಬ್ಬರು. ಮೀಸಲಾತಿ ಹೋರಾಟದ ಪ್ರಥಮ ಸಭೆ ಸಿಂದಗಿಯಲ್ಲಿ ನಡೆದಾಗ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಸಹಕಾರ ನೀಡಿ ಹೋರಾಟಕ್ಕೆ ಬಲ ತುಂಬಿದ್ದರು.
ಅವರ ಪುತ್ರ ಅಶೋಕ್ ಮನಗೂಳಿ ಅವರು ಪಕ್ಷಾತೀತವಾಗಿ ಗಟ್ಟಿತನದಿಂದ ಸದನದಲ್ಲಿ ಮೀಸಲಾತಿಯ ಹಕ್ಕು ಪ್ರತಿಪಾದಿಸಬೇಕು. ನಮ್ಮ ಸಮಾಜದಲ್ಲಿ ನಾನೊಬ್ಬನೇ ಬದುಕಬೇಕೆನ್ನುವ ಶಾಸಕರು ಯಾರು ಇಲ್ಲ. ಕೃಷಿ ಕ್ಷೇತ್ರ ಸೊರಗಿರುವ ಕಾರಣ ಶಿಕ್ಷಣದಿಂದಾದರೂ ನಮ್ಮ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಲಿ ಎನ್ನುವ ಸದುದ್ದೇಶ ಒಂದೇ ಈ ಹೋರಾಟಕ್ಕೆ ಮೂಲ ಕಾರಣವಾಗಿದೆ.
ಲಿಂಗಾಯತ ಸಮಾಜದ ಇತರೆ ಪಂಗಡದ ನಾಯಕರು ತಮ್ಮ ತಮ್ಮ ಪಂಗಡಗಳಿಗೆ ಮೀಸಲಾತಿ ದೊರಕಿಸಿಕೊಟ್ಟು ಸಮಾಜದ ಋಣ ತೀರಿಸುವಲ್ಲಿ ಯಶಸ್ವಿಯಾದರೂ ಸಮಗ್ರ ಲಿಂಗಾಯತರಿಗೆ ಮೀಸಲಾತಿ ಅನ್ವಯವಾಗದೆ ಮೋಸವಾಗಿದೆ. ಅನ್ನ ನೀಡುವ ಸಮಾಜಕ್ಕೆ ಮೀಸಲಾತಿ ಸಿಗದೇ ಕುಳಿತು ತಿನ್ನುವ ಸಮಾಜಗಳಿಗೆ ಮೀಸಲಾತಿ ಸಿಕ್ಕಂತಾಗಿದೆ. ಕಾರಣ ಸಮಾಜದ ಋಣ ತೀರಿಸಲು ಎಲ್ಲ ಲಿಂಗಾಯತ ಒಳ ಪಂಗಡಗಳ ಮೀಸಲಾತಿಗಾಗಿ ಹಾಗೂ ಕ್ಷೇತ್ರದ ವಂಚಿತ ಸಮುದಾಯಗಳ ಪರವಾಗಿ ಶಾಸಕರು ತಮ್ಮ ಹಕ್ಕನ್ನು ಪ್ರತಿಪಾದಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನಿಮ್ಮೆಲ್ಲರ ಒತ್ತಡಕ್ಕೂ ಸರ್ಕಾರ ಸ್ಪಂದಿಸದಿದ್ದರೇ ಸಮಾಜದ ಹೋರಾಟಕ್ಕೆ ಶ್ರೀಗಳೊಂದಿಗೆ ನಿರಂತರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಅಶೋಕ ಮನಗೂಳಿ ಆಗ್ರಹ ಪತ್ರ ಸ್ವೀಕರಿಸಿ ಮಾತನಾಡಿ, ನಾನು ಸಿಂದಗಿ ಕ್ಷೇತ್ರದ ಜನಪ್ರತಿನಿಧಿಯಾಗುವಲ್ಲಿ ಪಂಚಮಸಾಲಿ ಸಮುದಾಯದ ಪಾತ್ರ ಬಹು ದೊಡ್ಡದು. ಅದಕ್ಕಾಗಿ ಮುಂಬರುವ ಅಧಿವೇಶನದಲ್ಲಿ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತೇನೆ. ಹಗಲಿರುಳೆನ್ನದೆ ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪಂಚಮಸಾಲಿಗಳ ಏಳಿಗೆಗೆ ಶ್ರಮಿಸುತ್ತಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಭಾಜಪ ಮುಖಂಡ ಅಶೋಕ ಅಲ್ಲಾಪುರ್, ನೌಕರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ್ ಮಾತನಾಡಿದರು. ಆನಂದ್ ಶಾಬಾದಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಮುಖಂಡರಾದ ಶಿವಪ್ಪಗೌಡ ಬಿರಾದಾರ್, ಸೋಮನಗೌಡ ಬಿರಾದರ್, ಡಾ.ಅರವಿಂದ ಮನಗೂಳಿ, ರಮೇಶ್ ದೇಸಾಯಿ, ಡಾ.ಮುತ್ತು ಮನಗೂಳಿ, ಚಂದ್ರಶೇಖರ್ ನಾಗರಬೆಟ್ಟ, ಶರಣಬಸವ ಕಲಶೆಟ್ಟಿ, ಶ್ರೀಶೈಲ್ ಬುಕ್ಕಾಣಿ, ವಕೀಲರಾದ ಎಸ್ ಬಿ ಪಾಟೀಲ್, ಶ್ರೀಶೈಲ ಮಳಜಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ್, ಗುರಣ್ಣಗೌಡ ಹುಮ್ನಾಬಾದ್, ರವಿ ದೇಸಾಯಿ ಸಂಗನಗೌಡ ಪಾಟೀಲ್, ಶ್ರೀಶೈಲ ಯಳಮೇಲಿ, ಗುರು ಆಕಳವಾಡ, ಶಿವರಾಜ್ ಪಾಟೀಲ ಸೇರಿದಂತೆ ಅನೇಕರು ಇದ್ದರು.
2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ನಡೆಸಿರುವ ಹೋರಾಟಕ್ಕೆ ದೀರ್ಘ ಇತಿಹಾಸವಿದೆ. ಎಷ್ಟೊಂದು ಸುದೀರ್ಘ ಹೋರಾಟದ ನಂತರವೂ ನ್ಯಾಯ ದೊರಕದೇ ಇದ್ದದ್ದು ವಿಪರ್ಯಾಸ.
-ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪೀಠದ ಜಗದ್ಗುರು.