ಕಾರಟಗಿ: ಪಂಚಮಸಾಲಿ ಸಮಾಜ ಸಂಘಟಿತವಾಗಿ ಶೈಕ್ಷಣಿಕ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬೆಳೆಯಬೇಕಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಸಮಾಜದ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಾದರಿ ಕೆಲಸ. ನಿಮಗೆ ಇತಿಹಾಸವಿದೆ. ಸಮಾಜದ ಸಂಘಟನೆಯಾಗಲು ಶಿಕ್ಷಣಕ್ಕೆ ಒತ್ತು ನೀಡಿ.ಮಕ್ಕಳಿಗೆ ಸಮಾಜದಿಂದ ನೀಡುವ ಸನ್ಮಾನ ಜೀವನಕ್ಕೆ ರೂಪ ಕೊಡುವ ಕೆಲಸ ಮಾಡುತ್ತಿದೆ. ಕನಕಗಿರಿ ಕ್ಷೇತ್ರದ ಪಂಚಮಸಾಲಿ ಸಮಾಜದ ಮಕ್ಕಳು ಹೆಚ್ಚಿನ ಅಧ್ಯಯನ ಮಾಡಿ ಊರಿಗೆ, ಪಾಲಕರಿಗೆ ಮತ್ತು ಕ್ಷೇತ್ರಕ್ಕೆ ಹೆಸರು ತನ್ನಿ ಎಂದರು.
ಕೋಟಿ ಅನುದಾನ:ಕೊಪ್ಪಳದಲ್ಲಿ ಸಮಾಜದಿಂದ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪಕ್ಕೆ ಒಂದು ಕೋಟಿ ಅನುದಾನವನ್ನು ನಮ್ಮ ಇಲಾಖೆಯಿಂದ ನೀಡಲಾಗಿದೆ. ಅದೇ ರೀತಿ ಕನಕಗಿರಿ ಕ್ಷೇತ್ರದ ಕಾರಟಗಿ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘಕ್ಕೆ ನನ್ನ ಇಲಾಖೆಯಿಂದ ಒಂದು ಕೋಟಿ ಅನುದಾನ ನೀಡಲಾಗುವುದು ಎಂದು ಸಚಿವ ತಂಗಡಗಿ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.
ಸಿಎಂ ಬರಲಿ:ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ಬಲಹೀನತೆಯಿಂದ ಸಮಾಜ ಕಟ್ಟಲು ಆಗುವುದಿಲ್ಲ. ರಾಜಕೀಯ ಸ್ಥಾನಮಾನ ಬೇಕಾದರೆ ಸಮಾಜ ಕಟ್ಟಬೇಕು. ಒಗ್ಗಟ್ಟು ತೋರಿಸಬೇಕು ಆಗ ಬೆಲೆ ಸಿಗುತ್ತದೆ ಎಂದರು.
ಕೊಪ್ಪಳದಲ್ಲಿ ಸಮಾಜದಿಂದ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರನ್ನು ಕರೆ ತಂದು ಅದನ್ನು ಉದ್ಘಾಟಿಸಬೇಕಾಗಿದೆ. ಅದರ ಹೊಣೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೇಲಿದೆ ಎಂದರು.ನಾನು ನಾಲ್ಕು ಬಾರಿ ಶಾಸಕನಾದೆ, ಎರಡು ಬಾರಿ ಸಂಸದನಾದೆ ಆದರೆ ಸಚಿವನಾಗಲಿಲ್ಲ. ಮೂರು ಬಾರಿ ಶಾಸಕನಾಗಿ ಗೆದ್ದ ಶಿವರಾಜ ತಂಗಡಗಿ ಸಚಿವರಾದರು ನೋಡಿ ಎಂದರು.
ಪೀಠಗಳು ಒಂದಾಗಲಿ: ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ಮೊದಲಿಗೆ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬೇಕಾಗಿದೆ. ಸಂಘಟನೆ ಮತ್ತು ಹೋರಾಟದ ಮೂಲಕ ನಮ್ಮ ಶಕ್ತಿ ತೋರಿಸಬೇಕಾಗಿದೆ. ಆದರೆ ನಮಗೆ ಇಚ್ಛಾಶಕ್ತಿ ಕೊರತೆ ಇದೆ. ಮೊದಲು ಹರಿಹರ ಪೀಠ ಮತ್ತು ಕೂಡಲ ಸಂಗಮ ಪೀಠಗಳನ್ನು ಒಂದು ಮಾಡುವ ಕೆಲಸ ತ್ವರಿತವಾಗಿ ಆಗಬೇಕಾಗಿದೆ. ಆಗ ಎಲ್ಲ ಹೋರಾಟ ಯಶಸ್ವಿಯಾಗುತ್ತವೆ ಎಂದರು.ಹರಿಹರ ಪೀಠ ಮತ್ತು ಕೂಡಲ ಸಂಗಮ ಪೀಠ ಕೂಡಿಸುವ ಕೆಲಸ ಕೊಪ್ಪಳದಲ್ಲಿ ಆಗಲಿ.ಆ ಮೂಲಕ ಕೊಪ್ಪಳ ಪಂಚಮಸಾಲಿಗಳಿಗೆ ಶಕ್ತಿ ಕೇಂದ್ರವಾಗಲಿ ಎಂದು ಒತ್ತಾಯಿಸಿದರು.
ಸಮಾಜದ ರಾಜ್ಯಾಧ್ಯಕ್ಷ ಶಿವನಗೌಡ ಪಾಟೀಲ್, ಡಾ. ಬಸವರಾಜ ಕ್ಯಾವಟರ್ ಮತ್ತು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮತ್ತು ಕಳಕನಗೌಡ ಮಾತನಾಡಿದರು. ಇದಕ್ಕೂ ಮುನ್ನ ಪ್ರಗತಿಪರ ರೈತ ಡಾ. ದೇವೇಂದ್ರಪ್ಪ ಬಳೂಟಗಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎ.ಜಿ. ಕಾರಟಗಿ ಮತ್ತು ಪಿಎಚ್‌ಡಿ ಪಡೆದ ರಂಜಿತಾ ಅಯೋಧ್ಯ ಇವರನ್ನು ಸಮಾಜದಿಂದ ಸನ್ಮಾನಿಸಲಾಯಿತು.ಜತೆಗೆ ಕಾರಟಗಿ ತಾಲೂಕಿನ ೧೦ನೇ ಮತ್ತು ಪಿಯುಸಿಯಲ್ಲಿ ಶೇ. ೯೦ರಷ್ಟು ಅಂಕ ಪಡೆದ ಸಮಾಜದ ಪ್ರತಿಭಾವಂತ ೫೧ ಮಕ್ಕಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸೋಮನಗೌಡ, ಬಸವರಾಜ ಎತ್ತಿನಮನಿ, ಕರಿಯಪ್ಪ ಮೇಟಿ, ಅನ್ನಪೂರ್ಣ ಗಂಗಾಧರಗೌಡ, ಫಾಲಾಕ್ಷಪ್ಪ ಕೆಂಡದ ಇದ್ದರು.ಚೆನ್ನಬಸಪ್ಪ ಸುಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣೇಗೌಡ ಬೂದುಗುಂಪಾ ನಿರ್ವಹಿಸಿದರು.