ಗ್ರಾಪಂ ಸೇವೆಗೆ ಪಂಚಮಿತ್ರ ವಾಟ್ಸ್‌ಆ್ಯಪ್ ಚಾಟ್

KannadaprabhaNewsNetwork |  
Published : Mar 08, 2024, 01:48 AM IST
ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಏರ್ಪಡಿಸಿದ್ದ ‘ಪಂಚಮಿತ್ರ’ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಿ ಕಂಪ್ಲಿ ಶಾಸಕ ಗಣೇಶ್ ಅವರು ಮಾತನಾಡಿದರು.  | Kannada Prabha

ಸಾರಾಂಶ

ವಾಟ್ಸ್‌ಆ್ಯಪ್ ಚಾಟ್‍ಗೆ ಸಂಪರ್ಕ ಸಂಖ್ಯೆ 8277506000ನಿಂದ ಚಾಟ್ ಮಾಡಬಹುದು.

ಬಳ್ಳಾರಿ: ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಎಲ್ಲ ರೀತಿಯ ಸೇವೆಗಳನ್ನು ಆನ್‍ಲೈನ್‍ನಲ್ಲಿ ಪಡೆಯಬಹುದು. ಗ್ರಾಮ ಪಂಚಾಯಿತಿ ಸೇವೆಗಳಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲನೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಎಲ್ಲ ಕುಂದುಕೊರತೆಗಳನ್ನು ದಾಖಲಿಸಿ ಮೊಬೈಲ್‍ನಲ್ಲಿ ವಾಟ್ಸ್‌ಆ್ಯಪ್ ಚಾಟ್ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.

ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಿದ್ಧಪಡಿಸಿರುವ ಮಹತ್ವದ ‘ಪಂಚಮಿತ್ರ’ ವಾಟ್ಸ್‌ಆ್ಯಪ್ ಚಾಟ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮೊಬೈಲ್‍ನಲ್ಲಿ ನಂಬರ್ ಅನ್ನು ಸೇವ್ ಮಾಡಿಕೊಂಡು ಚಾಟ್ ಅನ್ನು ಆರಂಭಿಸಿದರೆ ಭಾಷೆಯ ಆಯ್ಕೆ, ಹೆಸರು, ವಿಳಾಸ, ಮೊಬೈಲ್ ನಂಬರ್ ಎಲ್ಲಾ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ ಆಯ್ಕೆಗಳು ಆರಂಭವಾಗುತ್ತವೆ. ಕ್ರಮ ಸಂಖ್ಯೆಯನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆಯನ್ನು ಮಾಡಿಕೊಂಡು ನಂತರ ಗ್ರಾಮ ಪಂಚಾಯಿತಿಯ ಆಯ್ಕೆ ಮಾಡಿಯನ್ನು ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು ಎಂದರು.

ಸಾರ್ವಜನಿಕರು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಕಟ್ಟಡ ನಿರ್ಮಾಣದ ಲೈಸೆನ್ಸ್, ನೀರು ಸರಬರಾಜು ಸಂಪರ್ಕ, ವ್ಯಾಪಾರ ಪರವಾನಗಿ ಸೇರಿದಂತೆ ಎಲ್ಲ ಇತರ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಬಹುದು ಎಂದರು.

ನರೇಗಾ ಯೋಜನೆ, ತ್ಯಾಜ್ಯ ನಿರ್ವಹಣೆ, ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ 78 ವರ್ಗಗಳ ಕುಂದು ಕೊರತೆಗಳನ್ನು ದಾಖಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರ ಜತೆಗೆ ಸ್ವಾಧೀನ ಪ್ರಮಾಣ ಪತ್ರ, ರಸ್ತೆ ಅಗೆಯಲು ಅನುಮತಿ, ಕೈಗಾರಿಕೆ, ಕೃಷಿ ಆಧರಿತ ಉತ್ಪಾದನಾ ಘಟಕ ಪರವಾನಗಿ, ನಿರಾಕ್ಷೇಪಣಾ ಪತ್ರ, ಜಾಬ್ ಕಾರ್ಡ್ ವಿತರಣೆ ಇನ್ನು ಹಲವು ಸೇವೆಗೆ ಅರ್ಜಿ ಸಲ್ಲಿಸಬಹುದಾಗಿದ್ದು,

ವಾಟ್ಸ್‌ಆ್ಯಪ್ ಚಾಟ್‍ಗೆ ಸಂಪರ್ಕ ಸಂಖ್ಯೆ 8277506000ನಿಂದ ಚಾಟ್ ಮಾಡಬಹುದು ಎಂದರು.

ಮೊದಲಿಗೆ ಹಾಯ್ ಎಂಬ ಸಂದೇಶ ಕಳುಹಿಸಬೇಕು. ಆಗ ಪರದೆ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ. ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಅಗತ್ಯ ಸೇವೆಯನ್ನು ಪಡೆಯಬಹುದು ಎಂದರು.

ಇದೇ ವೇಳೆ ಶಾಸಕ ಜೆ.ಎನ್. ಗಣೇಶ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಭಾರತ್ ನಿರ್ಮಾಣ ಸೇವಾ ಕೇಂದ್ರ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗಿರಿಜಾ ಶಂಕರ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಅಧಿಕಾರಿಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ