ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ 5ನೇ ವಾರ್ಡ್ ಪುರಸಭೆ ಮಾಜಿ ಸದಸ್ಯ ಪಾರ್ಥಸಾರಥಿ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಗೆ ವೇಳೆ ಹಲ್ಲೆ ನಡೆಸಿರುವುದಾಗಿ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಟೌನ್ ಪೊಲೀಸ್ ಠಾಣೆಗೆ ಬುಧವಾರ ಸಂಜೆ ದೂರ ನೀಡಿದ್ದಾರೆ.
ಪಟ್ಟಣದ ದೊಡ್ಡಿಬೀದಿಯಲ್ಲಿ ಪುರಸಭೆಗೆ ಸೇರಿದ ಮೂರು ವಾಣಿಜ್ಯ ಮಳಿಗೆಗಳಿದ್ದು, ಈ ಮಳಿಗೆಗಳನ್ನು ಹರಾಜು ಮೂಲಕ ಪಡೆದಿದ್ದ ಶ್ರೀಕಂಠೇಗೌಡ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಡೀಸಿ ಆದೇಶದಂತೆ ಮಳಿಗೆಗಳ ಮರು ಹರಾಜು ಪ್ರಕ್ರಿಯೆ ನಡೆದು ಮೂರು ಮಳಿಗೆಗಳನ್ನು ಬೇರೆಯವರು ಪಡೆದುಕೊಂಡಿದ್ದರು.ಈ ವಿಚಾರವಾಗಿ ಬುಧವಾರ ಸಂಜೆ ಪುರಸಭೆ ಕಚೇರಿಗೆ ಆಗಮಿಸಿದ್ದ ಮಾಜಿ ಸದಸ್ಯ ಪಾರ್ಥಸಾರಥಿ ಮಳಿಗೆಗೆಳನ್ನು ಮೂಲ ಬಿಡ್ಡು ದಾರರಿಗೆ ನೀಡಬೇಕು. ಬೇರೆಯವರಿಗೆ ವರ್ಗಾಯಿಸದಂತೆ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ವಿಚಾರವಾಗಿ ಮುಖ್ಯಾಧಿಕಾರಿ ಮತ್ತು ಪುರಸಭೆ ಮಾಜಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಆದರೆ, ಮೂಲ ಬಿಡ್ಡುದಾರ ಶ್ರೀಕಂಠೇಗೌಡರನ್ನು ಈ ಬಗ್ಗೆ ಸಂಪರ್ಕಿಸಿದಾಗ ಮಳಿಗೆಗಳನ್ನು ನೀಡುವಂತೆ ನಾವು ಯಾವುದೇ ಅರ್ಜಿ ಸಲ್ಲಿಸಿಲ್ಲ. ನಮಗೆ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಪಾರ್ಥಸಾರಥಿ ಅವರು ಮೂರನೇ ವ್ಯಕ್ತಿಯಾದ ಚಲುವರಾಜು ನನ್ನು ಕರೆದುಕೊಂಡು ಬಂದು ಅವರಿಗೆ ಮಳಿಗೆ ನೀಡಬೇಕು ಎಂದು ತಾಕೀತು ಮಾಡಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದರು.
ಪುರಸಭೆ ಎಂಜಿನಿಯರ್ ಯಶಸ್ವಿನಿ ಮಾತನಾಡಿ, ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು, ಮಹಿಳೆಯರು ಇದ್ದರೂ ಮಾಜಿ ಸದಸ್ಯರು ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ಮುಖ್ಯಾಧಿಕಾರಿಯನ್ನು ನಿಂದಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.