ಕನ್ನಡಪ್ರಭ ವಾರ್ತೆ ತುಮಕೂರುಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನದ ನೂತನ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಶನಿವಾರ ತುಮಕೂರು ನಗರಪ್ರವೇಶ ಮಾಡಿದಾಗ ನಗರದ ದಿಗಂಬರ ಜೈನ ಸಮಾಜದ ಮುಖಂಡರು ಭಕ್ತಿ, ಗೌರವದಿಂದ ಸ್ವಾಗತಿಸಿ ಬರಮಾಡಿಕೊಂಡರು.ಶನಿವಾರ ರೈಲ್ವೆ ನಿಲ್ದಾಣ ರಸ್ತೆಯ ಮಹಾವೀರ ಭವನ ಬಳಿ ಸ್ವಾಮೀಜಿಗಳನ್ನು ಪೂರ್ಣಕುಂಭ ಸಹಿತ ಸ್ವಾಗತಿಸಲಾಯಿತು. ನಂತರ ನಡೆದ ಸ್ವಾಮೀಜಿಗಳ ನೇತೃತ್ವದ ಶೋಭಾಯಾತ್ರೆಯನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮೀಜಿ ಉದ್ಘಾಟಿಸಿದರು. ಶೋಭಾಯಾತ್ರೆಯು ಎಂ.ಜಿ.ರಸ್ತೆ, ಗುಂಚಿ ಚೌಕ, ಸ್ವಾತಂತ್ರ್ಯ ವೃತ್ತ, ಮಂಡಿಪೇಟೆ ವೃತ್ತದ ಮೂಲಕ ಚಿಕ್ಕಪೇಟೆಯ ಜಿನ ಮಂದಿರ ತಲುಪಿತು.ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ವಿವಿಧ ಸಮಾಜದ ಗಣ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಿನ ಮಂದಿರದಲ್ಲಿ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳು ಭಗವಂತರಿಗೆ ಪಂಚಾಮೃತ ಅಭಿಷೇಕ, ಪೂಜೆ ನೆರವೇರಿಸಿದರು. ದಿಗಂಬರ ಜೈನ ಸಮಾಜದ ಗಣ್ಯರು, ಸಮಾಜದ ವಿವಿಧ ಸಂಸ್ಥೆಗಳ ಮುಖಂಡರು ಈ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.ನಂತರ ಬಿ.ಹೆಚ್.ರಸ್ತೆಯ ಜೈನ ಭವನದಲ್ಲಿ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ನರಸಿಂಹರಾಜಪುರದ ಸಿಂಹಗದ್ದೆಯ ಶ್ರೀಕ್ಷೇತ್ರ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರುಸಿ. ರಾಮಚಂದ್ರ ಸ್ಯಾದ್ವಾದಿಯ ಜಿನವಾಣಿ ಸ್ವಾದ್ಯಾಯ ಮಂದಿರ ಉದ್ಘಾಟನೆ ನೆರವೇರಿಸಿದರು. ನಂತರ ಜೈನ ಮಂದಿರದಲ್ಲಿ ಈ ಇಬ್ಬರು ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ಜರುಗಿತು.
ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಶಾಸ್ತ್ರ, ಪೂಜಾ ಪದ್ದತಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಈ ಬಗ್ಗೆ ಹಿಂದಿನ ಗುರುಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಹೇಳಿದ್ದರು. ಪೂಜಾ ಪದ್ದತಿಯಲ್ಲಿ ಬದಲಾವಣೆಗಳನ್ನು ಕಾಣುತ್ತಿದ್ದೇವೆ, ಆದರೆ ಹಿಂದಿನಿಂದ ನಡೆದ ಬಂದ ಪದ್ದತಿಯನ್ನೇ ಅನುಸರಿಸಬೇಕು, ಪೂಜೆಯಲ್ಲಿ ಚಲನಚಿತ್ರ ಗೀತೆ ಬಳಸಬಾರದು, ಪೂಜಾ ವಿಧಾನ ಮಂಗಳಕರವಾಗಿರಬೇಕು ಎಂದು ಹೇಳಿದರು.ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಜಾತಿ ತಾಯಿಯಿಂದ, ಕುಲ ತಂದೆಯಿಂದ ಬರುತ್ತದೆ. ಜೈನ ಧರ್ಮ ಆದರ್ಶವಾದ ಧರ್ಮ. ಈ ಧರ್ಮದಲ್ಲಿ ಹುಟ್ಟುವುದು ಪುಣ್ಯದ ಫಲ.ಜನ್ಮಜನ್ಮಾಂತರದ ಪುಣ್ಯ ಸಂಪಾದಿಸಿದವರು ಜೈನ ಧರ್ಮದಲ್ಲಿ ಹುಟ್ಟುತ್ತಾರೆ. ಜೈನ ಧರ್ಮಿಯರು ವಿಜಾತಿ ವಿವಾಹ ಮಾಡಿಕೊಳ್ಳಬೇಡಿ, ಪ್ರೇಮ ವಿವಾಹ ಮಾಡಿಕೊಳ್ಳಬೇಡಿ ಎಂದರು.ದಿಗಂಬರ ಜೈನ ಪಾರ್ಶ್ವನಾಥಸ್ವಾಮಿ ಜಿನ ಮಂದಿರದ ಅಧ್ಯಕ್ಷ ಟಿ.ಡಿ.ಬಾಹುಬಲಿಬಾಬು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ ಹಾಲಪ್ಪ, ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಐ.ಎಸ್.ಗುರುನಾಥ್ ಮತ್ತಿತರರು ಭಾಗವಹಿಸಿದ್ದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದ, ಸಮಾಜದ ಶಾಂತಿ, ನೆಮ್ಮದಿಗೆ ಜೈನ ಪರಂಪರೆ ಮಾದರಿಯಾಗಿದೆ. ಧಾರ್ಮಿಕತೆಗೆ ಜೈನರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.ಚಿಕ್ಕಪೇಟೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮುನಿ ನಿವಾಸ ಹಾಗೂ ತ್ಯಾಗಿ ನಿವಾಸ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಕೋರಿ ಸಮಾಜದ ಮುಖಂಡರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಭಟ್ಟಾರಕ ಶ್ರೀಗಳಿಗೆ ಅಷ್ಟವಿದಾರ್ಚನೆ ಹಾಗೂ ಪಾದಪೂಜೆ ನೆರವೇರಿಸಲಾಯಿತರು. ನಂತರ ಜೈನ ಸಮಾಜದ 90 ವರ್ಷ ಮೇಲ್ಪಟ್ಟ ಹಿರಿಯ ಶ್ರಾವಕ-ಶ್ರಾವಕಿಯರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.ದಿಗಂಬರ ಜೈನ ಪಾರ್ಶ್ವನಾಥಸ್ವಾಮಿ ಜಿನ ಮಂದಿರದ ಅಧ್ಯಕ್ಷ ಟಿ.ಡಿ.ಬಾಹುಬಲಿ ಬಾಬು, ಉಪಾಧ್ಯಕ್ಷ ಶೀತಲ್, ಕಾರ್ಯದರ್ಶಿ ಟಿ.ಜೆ.ನಾಗರಾಜ್, ಖಜಾಂಚಿ ಸುಭೋದ್‌ಕುಮಾರ್ ಜೈನ್, ನಿರ್ದೇಶಕರಾದ ಬಿ.ಎಲ್.ಚಂದ್ರಕೀರ್ತಿ, ಎಸ್.ವಿ.ಜಿನೇಶ್, ಎಸ್.ಜೆ.ನಾಗರಾಜ್, ಎಂ.ಬಿ.ನಾಗೇಂದ್ರ, ಟಿ.ಕೆ.ಪದ್ಮರಾಜು, ಟಿ.ವಿ.ಪಾರ್ಶ್ವನಾಥ್, ಎ.ಎನ್.ಮಂಜುನಾಥ್, ಟಿ.ಸಿ.ಶೀತಲ್‌ಕುಮಾರ್, ಬಿ.ಎಸ್.ಪಾರ್ಶ್ವನಾಥ್, ಟ.ಡಿ.ಮಹಾವೀರ್, ಜ್ವಾಲಮಾಲಿನಿ, ಮುಖಂಡರಾದ ಆರ್.ಎ.ಸುರೇಶ್‌ಕುಮಾರ್,ಎಸ್.ವಿ.ಪಾರ್ಶ್ವನಾಥ್, ಎ.ಎನ್.ರಾಜೇಂದ್ರಪ್ರಸಾದ್, ಕೆ.ಪಿ.ವೀರೇಂದ್ರ, ಜಿ.ಡಿ.ರಾಜೇಶ್, ಮಂಜುಳಾ ಚಂದ್ರಪ್ರಭು ಸೇರಿದಂತೆ ಜೈನ ಸಮಾಜದ ವಿವಿಧ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.