18ರಂದು ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Aug 14, 2024, 12:58 AM IST
ರೂಪಕಲಾ13 | Kannada Prabha

ಸಾರಾಂಶ

ತುಳು ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ಅಪಾರ ಸೇವೆ ಸಲ್ಲಿಸಿದ, ತುಳು ಚಳುವಳಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ, ಹಿರಿಯ ಸಾಹಿತ್ಯ ಚೇತನ ದಿ. ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿ ಅವರ ಸ್ಮರಣಾರ್ಥ ತುಳುಕೂಟವು ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ತುಳು ಕಾದಂಬರಿಗೆ ಕಳೆದ 29 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ತುಳುಕೂಟ ನೀಡುವ 29ನೇ ವರ್ಷದ ‘ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ಗೆ ಮಂಗಳೂರಿನ ಕರಂಗಲ್ಪಾಡಿಯ ರೂಪಕಲಾ ಆಳ್ವ ಅವರ ‘ಪಮ್ಮಕ್ಕೆನ ಪೊರುಂಬಾಟ’ ಎಂಬ ಕಾದಂಬರಿ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆ.18ರಂದು ಸಂಜೆ 4 ಗಂಟೆಗೆ ಯಕ್ಷಗಾನ ಕಲಾರಂಗದ ನೂತನ ಸಭಾಂಗಣ ಐವೈಸಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟದ ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದು, ಅತಿಥಿಗಳಾಗಿ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ, ಮಂಗಳೂರಿನ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಉದ್ಯಮಿ ವೈ. ಸುಧೀರ್ ಕುಮಾರ್ ಮತ್ತು ಸಮಾಜಸೇವಕ ಯು. ವಿಶ್ವನಾಥ ಶೆಣೈ ಭಾಗವಹಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ಅಮಿತಾಂಜಲಿ ಕಿರಣ್ ಪರಿಚಯಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ತುಳುಭಾಷೆಯನ್ನು ತೃತೀಯ ಐಚ್ಛಿಕ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಈ ಬಾರಿಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಅಂಕ ಪಡೆದ ಜಿಲ್ಲೆಯ 17 ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ ಎಂದು ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಹಾಗೂ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

* 29ನೇ ವರ್ಷದ ಪ್ರಶಸ್ತಿ

ತುಳು ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ಅಪಾರ ಸೇವೆ ಸಲ್ಲಿಸಿದ, ತುಳು ಚಳುವಳಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ, ಹಿರಿಯ ಸಾಹಿತ್ಯ ಚೇತನ ದಿ. ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿ ಅವರ ಸ್ಮರಣಾರ್ಥ ತುಳುಕೂಟವು ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ತುಳು ಕಾದಂಬರಿಗೆ ಕಳೆದ 29 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 10 ಸಾವಿರ ರು. ನಗದು ಬಹುಮಾನವನ್ನು ಒಳಗೊಂಡಿದೆ.

ಈ ಬಾರಿ ಖ್ಯಾತ ವಿಮರ್ಶಕ ಪ್ರೊ.ಮುರಳಿಧರ ಉಪಾಧ್ಯಾಯ ಹಿರಿಯಡ್ಕ, ಸಾಹಿತಿ ಪದ್ಮನಾಭ ರೈ ಪುತ್ತಿಗೆ, ಕಲಾವಿದ ಸಕು ಪಂಗಾಳ ಅವರು ತೀರ್ಪುಗಾರರಾಗಿ ಪ್ರಶಸ್ತಿಗೆ ಕಾದಂಬರಿಯನ್ನು ಆಯ್ಕೆ ಮಾಡಿದ್ದಾರೆ.* ಸಾಹಿತಿ ರೂಪಕಲಾ ಆಳ್ವ

ಕನ್ನಡ ಮತ್ತು ತುಳು ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸುತ್ತಿರುವ ರೂಪಕಲಾ ಅವರು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಸಂಶೋಧಕಿಯಾಗಿದ್ದಾರೆ. ಮೇರು ನಾಟಿ, ಜೋಳಿಗೆಯಿಂದ ಹೊಳಿಗೆ, ಪಡಿಪ್ಪಿರೆ ಇತ್ಯಾದಿ ಕೃತಿಗಳನ್ನು ರಚಿಸಿರುವ ಅವರಿಗೆ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಸಾರಾ ಅಬೂಬಕ್ಕರ್ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ.

ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಮಂಗಳೂರು ನಗರ ಗ್ರಂಥಾಲಯದ ಸಲಹಾ ಪ್ರಾಧಿಕಾರದ ಸದಸ್ಯರಾಗಿ, ಲೇಖಕಿಯರು ವಾಚಕಿಯರು ಸಂಘ ಇತ್ಯಾಗಿ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

PREV

Recommended Stories

''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ