ಪಾಪ ಕುಮಾರಣ್ಣ ಹೆದರಿ ಮಂಡ್ಯಕ್ಕೆ ಓಟ: ಶಾಸಕ ಬಾಲಕೃಷ್ಣ ಲೇವಡಿ

KannadaprabhaNewsNetwork |  
Published : Mar 01, 2024, 02:18 AM IST
ಮಾಗಡಿಯ ಕೋಟೆ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು. | Kannada Prabha

ಸಾರಾಂಶ

ಪಾಪ ಈಗ ಡಾ.ಮಂಜುನಾಥವರನ್ನು ನಿಲ್ಲಿಸುವುದಕ್ಕೆ ಮುಂದಾಗಿದ್ದಾರೆ. ಆ ಡಾಕ್ಟರ್ ಯಾರು? ದೇವೇಗೌಡರ ಅಳಿಯ, ಕುಮಾರಣ್ಣನ ಬಾವ. ಅವರನ್ನು ಬಿಜೆಪಿಯಿಂದ ನಿಲ್ಲಿಸುವುದಕ್ಕೆ ಹೊರಟ್ಟಿದ್ದಾರೆ. ಅವರ ಪಕ್ಷದಲ್ಲೇ ನಿಲ್ಲಿಸಿ ಗೆಲ್ಲಿಸಲು ಆಗುವುದಿಲ್ಲವೇ? ಕುಮಾರಸ್ವಾಮಿಗೆ ನಾಚಿಕೆ ಆಗಬೇಕು,ರಾಜಕಾರಣ ಮಾಡುವುದು ಡಾಕ್ಟರ್ ಆಗಿ ಆಪರೇಷನ್ ಮಾಡಿದ ಹಾಗಲ್ಲ,

ಕನ್ನಡಪ್ರಭ ವಾರ್ತೆ ಮಾಗಡಿ

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿಲ್ಲುವುದಕ್ಕೆ ಹೆದರಿ ಮಂಡ್ಯಕ್ಕೆ ಓಡಿಹೋಗಿದ್ದಾರೆ ಎಂದು ಶಾಸಕ ಬಾಲಕೃಷ್ಣ ವ್ಯಂಗ್ಯವಾಡಿದರು.

ಪಟ್ಟಣದ ಕೋಟೆ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ನಿಂತುಕೊಳ್ಳುವುದಕ್ಕೆ ಹೆದರುತ್ತಿದ್ದಾರೆ. ಅವರು ಇವರನ್ನು, ಇವರು ಅವರನ್ನು ಮುಂದಕ್ಕೆ ತಳ್ಳುತ್ತಿದ್ದಾರೆ. ಪಾಪ ಈಗ ಡಾ.ಮಂಜುನಾಥವರನ್ನು ನಿಲ್ಲಿಸುವುದಕ್ಕೆ ಮುಂದಾಗಿದ್ದಾರೆ. ಆ ಡಾಕ್ಟರ್ ಯಾರು? ದೇವೇಗೌಡರ ಅಳಿಯ, ಕುಮಾರಣ್ಣನ ಬಾವ. ಅವರನ್ನು ಬಿಜೆಪಿಯಿಂದ ನಿಲ್ಲಿಸುವುದಕ್ಕೆ ಹೊರಟ್ಟಿದ್ದಾರೆ. ಅವರ ಪಕ್ಷದಲ್ಲೇ ನಿಲ್ಲಿಸಿ ಗೆಲ್ಲಿಸಲು ಆಗುವುದಿಲ್ಲವೇ? ಕುಮಾರಸ್ವಾಮಿಗೆ ನಾಚಿಕೆ ಆಗಬೇಕು,ರಾಜಕಾರಣ ಮಾಡುವುದು ಡಾಕ್ಟರ್ ಆಗಿ ಆಪರೇಷನ್ ಮಾಡಿದ ಹಾಗಲ್ಲ, ರಾಜಕಾರಣವನ್ನು ಯಾರು ಮಾಡಬೇಕು ಅವರೇ ಮಾಡಬೇಕು.ಎಲ್ಲರೂ ರಾಜಕಾರಣದಲ್ಲಿ ಯಶಸ್ವಿಯಾಗಲು ಆಗಲ್ಲ ಎಂದು ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ವಿಚಾರವಾಗಿ ಶಾಸಕರು ವಾಗ್ದಾಳಿ ನಡೆಸಿದರು.

ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವುದು ಒಂದು ಸವಾಲಿನ ಕೆಲಸ. ಆ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ನಮ್ಮನ್ನು ನೋಡಿ ವಿಪಕ್ಷದವರು ಆವತ್ತು ನಕ್ಕಿದ್ದರು, ಆದರೆ ಡಿ.ಕೆ.ಶಿವಕುಮಾರ್ ಗ್ಯಾರಂಟಿ ಕಾರ್ಡ್ಗಳನ್ನು ಸಹಿ ಮಾಡಿ ಕೊಟ್ಟು ನುಡಿದಂತೆ ನಡೆಯುವ ಕೆಲಸ ಮಾಡಿದರು. ನಾವು ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ, ಬಿಜೆಪಿಯವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಆದರೆ, ಅಪ್ಪ-ಮಕ್ಕಳು ಕೊರೋನಾ ಹೆಸರಲ್ಲಿ ಲೂಟಿ ಮಾಡಿದ್ದಾರೆ ಎಂದು ಶಾಸಕ ಯತ್ನಾಳ್ ಅವರೇ ಹೇಳಿದ್ದರು. ಇಂತವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಬಿಜೆಪಿ ವಿರುದ್ಧ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ ಇನ್ನೂ 9 ವರ್ಷ ಮುಂದುವರೆಯುತ್ತದೆ. ಮುಂದೆಯೂ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಮುಂದುವರೆಸಲಿದೆ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಬೆಂಗ್ರಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ 2ಸಾವಿರ ಮನೆ ಮಂಜೂರು ಮಾಡಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಡಿ.ಕೆ.ಸುರೇಶ್ ಅವರಿಗೆ ಗೊತ್ತಿಲ್ಲದ ವಿಚಾರವೇ ಇಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರ, ಸಿಇಒ ದಿಗ್ವಜಯ್ ಬೋಡ್ಕೆ, ತಹಸೀಲ್ದಾರ್ ಸುರೇಂದ್ರ ಮೂರ್ತಿ, ತಾಪಂ ಇಒ ಚಂದ್ರು, ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್, ಮಾಜಿ ಶಾಸಕ ಕೆ.ರಾಜು, ಮುಖಂಡರಾದ ಕೆ.ಕೃಷ್ಣಮೂರ್ತಿ, ಜೆ.ಪಿ.ಚಂದ್ರೇಗೌಡ, ವಿಜಯಕುಮಾರ್, ನರಸಿಂಹಮೂರ್ತಿ, ನಟರಾಜು, ಜಿಲ್ಲಾ ಮಹಿಳಾ ಅಧ್ಯಕ್ಷೆ ದೀಪ ಮುನಿರಾಜು, ಗೀತಾ ರಂಗನಾಥ್, ಕಲ್ಪನಾ ಶಿವಣ್ಣ, ಕಮಲಮ್ಮ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...