ಪಪಂ ಮೀಸಲು ಪ್ರಕಟ: ಆಕಾಂಕ್ಷಿಗಳಿಂದ ಲಾಬಿ

KannadaprabhaNewsNetwork | Published : Aug 6, 2024 12:36 AM

ಸಾರಾಂಶ

ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪ್ರಕಟಗೊಳ್ಳುತ್ತಿದ್ದಂತೆ, ಆಕಾಂಕ್ಷಿತರು ಸದ್ದಿಲ್ಲದೇ ತಮ್ಮ ಮುಖಂಡರೊಂದಿಗೆ ಲಾಬಿ ನಡೆಸುತ್ತಿದ್ದು, ಸದಸ್ಯರಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಪಟ್ಟಣದ ಗಲ್ಲಿ ಗಲ್ಲಿಯಲ್ಲೂ ತಮ್ಮ ಸದಸ್ಯರುಗಳ ದರ್ಬಾರ್‌ಗಳದ್ದೇ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪ್ರಕಟಗೊಳ್ಳುತ್ತಿದ್ದಂತೆ, ಆಕಾಂಕ್ಷಿತರು ಸದ್ದಿಲ್ಲದೇ ತಮ್ಮ ಮುಖಂಡರೊಂದಿಗೆ ಲಾಬಿ ನಡೆಸುತ್ತಿದ್ದು, ಸದಸ್ಯರಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಪಟ್ಟಣದ ಗಲ್ಲಿ ಗಲ್ಲಿಯಲ್ಲೂ ತಮ್ಮ ಸದಸ್ಯರುಗಳ ದರ್ಬಾರ್‌ಗಳದ್ದೇ ಬಿಸಿ ಬಿಸಿ ಚರ್ಚೆಯಾಗುತ್ತಿದೆ.ಮೀಸಲು ಪ್ರಕಟಗೊಳ್ಳುತ್ತಿದ್ದಂತೆ ಲೆಕ್ಕಾಚಾರ ಶುರು:

ಪಟ್ಟಣ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ-ಎ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದ್ದು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಈ ಬಾರಿ ಪಟ್ಟಣ ಪಂಚಾಯತಿ ಅಧಿಕಾರದ ಗದ್ದುಗೆ ಏರಲು ರಾಜಕೀಯ ದಾಳಗಳನ್ನು ಉರುಳಿಸಲು ಆರಂಭಿಸಿವೆ. ಬಹುಮತ ಇರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಕಾರಣ ಕಾಂಗ್ರೆಸ್, ಜೆಡಿಎಸ್ ಇಲ್ಲವೇ ಜೆಡಿಎಸ್, ಬಿಜೆಪಿ ಮೈತ್ರಿ ಲಾಬಿ ಮುಂದುವರಿದಿದೆ. ಅದೇ ರೀತಿ ಪಕ್ಷೇತರರನ್ನು ತಮ್ಮತ್ತ ಸೆಳೆದು ಪಟ್ಟಣ ಪಂಚಾಯತಿ ತಮ್ಮ ವಶಕ್ಕೆ ತೆಗೆದುಕೊಳ್ಳಲು 3 ಪಕ್ಷಗಳು ಪ್ರಯತ್ನ ಮುಂದುವರಿಸಿವೆ. ಇನ್ನು 3 ಪಕ್ಷದ ಕೆಲ ಸದಸ್ಯರ ಒಲವು ಯಾರು ಕಡೆ ಎಂಬುವುದು ಅಷ್ಟೇ ನಿಗೂಢವಾಗಿದೆ.ಕಳೆದ 2021 ಡಿಸೆಂಬರ್ 30ರಂದು ಫಲಿತಾಂಶ ಘೋಷಣೆಯಾಗಿದ್ದರೂ ಇಲ್ಲಿಯವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆಗೆ ನ್ಯಾಯಾಲಯದ ತಡೆ ಇದ್ದ ಕಾರಣ ಸೋಮವಾರದಂದು ಕರ್ನಾಟಕ ಮುನ್ಸಿಪಾಲಿಟಿ (ಅಧ್ಯಕ್ಷ-ಉಪಾಧ್ಯಕ್ಷ)(ಚುನಾವಣೆ)(ತಿದ್ದುಪಡಿ) ನಿಯಮಾವಳಿ ಪ್ರಕಾರ ಮೀಸಲಾತಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ದೇವರಹಿಪ್ಪರಗಿ ಪಟ್ಟಣದ ಒಟ್ಟು-17 ಸದಸ್ಯ ಬಲದ ಪ.ಪಂಯಲ್ಲಿ ಕಾಂಗ್ರೆಸ್-07, ಜೆಡಿಎಸ್-04, ಬಿಜೆಪಿ-04 ಹಾಗೂ ಪಕ್ಷೇತರ-02 ಇದ್ದು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಬಹಳಷ್ಟು ಪೈಪೋಟಿ ನಡೆಯುವ ಕಾರಣ ಈ ಬಾರಿ ಯಾರಾಗುತ್ತಾರೆ ಎಂದು ಕಾದು ನೋಡುವ ಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ಜನತೆ ಇನ್ನು ಕೆಲ ದಿನಗಳ ಕಾಲ ಯಾವ ಪಕ್ಷದ ಸದಸ್ಯರು ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಕಾತುರದಿಂದ ಕಾದು ನೋಡಬೇಕಾಗಿದೆ.

ಹಿಂದುಳಿದ ವರ್ಗ-ಎಗೆ ಅಧ್ಯಕ್ಷ, ಸಾಮಾನ್ಯಕ್ಕೆ ಉಪಾಧ್ಯಕ್ಷ ಸ್ಥಾನ: ಸರ್ಕಾರ 2015ರಲ್ಲಿ ಮೊದಲ ಬಾರಿಗೆ ದೇವರಹಿಪ್ಪರಗಿ ಗ್ರಾಪಂನಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲಾಯಿತು. ನಂತರ ಒಟ್ಟು-17 ಜನ ಸದಸ್ಯರ ಸ್ಥಾನಕ್ಕೆ 2016ರಲ್ಲಿ ನಡೆದ ಪ.ಪಂ ಚುನಾವಣೆಯಲ್ಲಿ ಮೊದಲ ಅಧಿಕಾರ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಪುರುಷ, ಉಪಾಧ್ಯಕ್ಷರಾಗಿ ಹಿಂದುಳಿದ ವರ್ಗ-ಎ ಮಹಿಳೆ ಆಯ್ಕೆಯಾಗಿದ್ದರು. ನಂತರ ನಡೆದ ಅಧಿಕಾರ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾ ಮಹಿಳೆ ಅಧಿಕಾರ ನಡೆಸಿದ್ದಾರೆ. 2021ರ ಡಿಸೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ 2024 ಆಗಸ್ಟ್- 5ರಂದು ಮೀಸಲಾತಿ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ-ಎ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪ್ರಕಟವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಹೊಂದಾಣಿಕೆಯಿಂದ ಕೆಲಸ ಮಾಡಿದ್ದೇವೆ. ಈಗ ತಾನೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು ಬಿಜೆಪಿ ಪಕ್ಷದ ಮುಖಂಡರ ತಮ್ಮ ನಿಲುವು ತಿಳಿಸಿದ ನಂತರ ಜೆಡಿಎಸ್ ಪಕ್ಷ ಸದಸ್ಯರ ಜೊತೆ ಮಾತನಾಡಿ ಹೊಂದಾಣಿಕೆ ಮಾಡಿಕೊಂಡು ಈ ಬಾರಿ ಪಟ್ಟಣ ಪಂಚಾಯತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ.

-ರಾಜುಗೌಡ ಪಾಟೀಲ ಕುದುರಿಸಾಲವಾಡಗಿ,

ಶಾಸಕರು.

ಬಿಜೆಪಿ ಪಕ್ಷದ ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಮುಖಂಡರು ಹಾಗೂ ಸದಸ್ಯರು ಸೇರಿ ಪಕ್ಷದ ಹೊಂದಾಣಿಕೆಯ ಸ್ಪಷ್ಟತೆ ಸಿಗಲಿದೆ. ಮುಖಂಡರು ಹೇಗೆ ಸೂಚಿಸುತ್ತಾರೆ ನಮ್ಮ ಪಕ್ಷದ 4 ಸದಸ್ಯರು ನಡೆಯುತ್ತೇವೆ. ಪ.ಪಂ ಗದ್ದುಗೆಗೆ ಈ ಬಾರಿ ಬಿಜೆಪಿ ಪಕ್ಷದಿಂದ ಪ್ರಯತ್ನಿಸುವುದು ಶತಸಿದ್ಧ.

-ರಮೇಶ ಮಸಿಬಿನಾಳ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಪಪಂ ಸದಸ್ಯರು ದೇವರಹಿಪ್ಪರಗಿ.

ಕಾಂಗ್ರೆಸ್ ಪಕ್ಷದ 7 ಜನ ಸದಸ್ಯರು ಹಾಗೂ ಒಬ್ಬರು ಪಕ್ಷೇತರರು ಒಟ್ಟು 8 ಜನ ಸದಸ್ಯರಿಂದ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲವಿದೆ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು ಮತ್ತಷ್ಟು ಶಕ್ತಿ ಬಂದಿದೆ. ಈ ಬಾರಿ ಪಕ್ಷದಿಂದ ಅಧಿಕಾರ ಹಿಡಿಯುತ್ತೇವೆ. ನಮ್ಮ ಪಕ್ಷದ ಮುಖಂಡರ ತೀರ್ಮಾನದಂತೆ ನಡೆದುಕೊಳ್ಳಲು ನಡೆದುಕೊಳ್ಳಲು ಎಲ್ಲ ಸದಸ್ಯರಿಗೆ ಸೂಚಿಸಲಾಗುವುದು.

-ಬಸೀರ್‌ ಅಹ್ಮದ್ ಕಸಬ್,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪ.ಪಂ ಸದಸ್ಯರು ದೇವರಹಿಪ್ಪರಗಿ.

Share this article