ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 109 ಮಕ್ಕಳು ಸಜ್ಜು । 1991ರಿಂದ 6000 ಮಕ್ಕಳಿಗೆ ಶಿಕ್ಷಣ ಒದಗಿಸಿದ ಶಾಲೆಕೃಷ್ಣ ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆಶ್ರೀಕಾರ್ಮಾರ್ ವಿದ್ಯಾಪೀಠ ಸಂಸ್ಥೆಯಲ್ಲಿ ನಡೆಯುತ್ತಿರುವ ಪಾಪಿನಾಯಕನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ಹೆಸರನ್ನು ಶಾಲಾ ಆಡಳಿತ ಮಂಡಳಿ ಕೋರಿಕೆ ಮೇರೆಗೆ "ಅಕ್ಷಯ ಸ್ಮಾರಕ ಪ್ರೌಢಶಾಲೆ " ಎಂದು ಹೆಸರು ಬದಲಾವಣೆ ಮಾಡಲು ವಿಜಯನಗರ ಜಿಲ್ಲಾ ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ ಆದೇಶ ನೀಡಿದ್ದಾರೆ.
1991ರಿಂದ ಪಾಪಿನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ಗ್ರಾಮಾಂತರ ಪ್ರೌಢಶಾಲೆ ಆ ಭಾಗದ ಹಳ್ಳಿಗಾಡಿನ ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣಕ್ಕೆ ಅನುಕೂಲಕರವಾಗಿದೆ. ಒಂಬತ್ತನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ಈ ಶಾಲೆಯಲ್ಲಿ 258 ಬಾಲಕ, ಬಾಲಕಿಯರು ಓದುತ್ತಿದ್ದಾರೆ.ಈ ಹಿಂದೆ ಎಂಟನೆ ತರಗತಿಯಿಂದ ಹತ್ತನೆ ತರಗತಿಯ ವರೆಗೆ ಈ ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಈಗ ಸರ್ಕಾರ ಹೈಸ್ಕೂಲ್ ಶಿಕ್ಷಣವನ್ನು ಒಂಬತ್ತನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ನಿಗದಿಗೊಳಿಸಿದೆ. ಈ ಶಾಲೆಯಲ್ಲಿ ಇದುವರೆಗೆ 6000ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.
ಈ ಶಾಲೆ ಶಿಕ್ಷಕರಿಗೆ ಆರಂಭದಲ್ಲಿ ವೇತನ ಇರಲಿಲ್ಲ. ತಮ್ಮ ಕುಟುಂಬಕ್ಕೆ ಸೇರಿದ ಶಾಲೆಯ ಶಿಕ್ಷಕರಿಗೆ ಸರ್ಕಾರಿ ಹೈಸ್ಕೂಲ್ ಶಿಕ್ಷಕಿಯಾಗಿದ್ದ ಡಾ. ಅಕ್ಕಮಹಾದೇವಿ ಸರಗಣಾಚಾರಿ ಅವರು ತಮ್ಮ ವೇತನದಲ್ಲಿಯೇ ಗೌರವಧನ ನೀಡುತ್ತಿದ್ದರು. ಅಲ್ಲದೇ 1995ರಿಂದ ಪ್ರತಿ ವರ್ಷ 20 ಮಕ್ಕಳನ್ನು ದತ್ತು ಪಡೆದು ಓದಿಸಿದ್ದಾರೆ. ಪಾಪಿನಾಯಕನಹಳ್ಳಿ ಭಾಗದ ಮಕ್ಕಳು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದೊಂದಿಗೆ ಈ ಕಾರ್ಯ ಮಾಡಿದ್ದಾರೆ.ಕಳೆದ ವರ್ಷ ಅಪಘಾತದಲ್ಲಿ ಅವರ ಪುತ್ರ ಅಕ್ಷಯ ಅಕಾಲಿಕ ನಿಧನ ಹೊಂದಿದ ಹಿನ್ನೆಲೆ ಈ ಶಾಲೆಗೆ ಈಗ ಅಕ್ಷಯ ಸ್ಮಾರಕ ಪ್ರೌಢಶಾಲೆ ಎಂದು ಮರು ನಾಮಕರಣ ಮಾಡಲಾಗಿದೆ. ಅಕ್ಷಯ ಕೂಡ ತಾನು ಎಂಟೆಕ್ ಶಿಕ್ಷಣ ಪೂರೈಸಿದ ಬಳಿಕ ಹಾಗೂ ಎಂಜಿನಿಯರಿಂಗ್ ಓದುತ್ತಿದ್ದಾಗ ಬಿಡುವಾದಾಗಲೆಲ್ಲ; ಶಾಲೆಗೆ ತೆರಳಿ ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ವಿಷಯ ಹೇಳಿಕೊಡುತ್ತಿದ್ದರು. ಈ ಶಾಲೆಯನ್ನು ಹೆಮ್ಮರವಾಗಿ ಬೆಳೆಸಬೇಕೆಂಬ ಮಹದಾಶಯ ಹೊಂದಿದ್ದರು.
ಈ ಶಾಲೆ 1991ರಲ್ಲಿ ಆರಂಭಗೊಂಡರೂ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, 2007-08ನೇ ಸಾಲಿನಲ್ಲಿ ಎಂಬುದನ್ನು ಮರೆಯುವಂತಿಲ್ಲ. ಆ ಭಾಗದ ದಾನಿಗಳು, ಪಾಪಿನಾಯಕನಹಳ್ಳಿ ಗ್ರಾಮದ ಜನರ ಸಹಕಾರದೊಂದಿಗೆ ಶಾಲೆಯನ್ನು ನಿರಾಂತಕವಾಗಿ ನಡೆಸಿಕೊಂಡು ಬರಲಾಗಿದೆ. ಶಾಲೆಗೆ ಹಲವು ದಾನಿಗಳು ಬೆನ್ನೆಲುಬಾಗಿ ನಿಂತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಹೈಸ್ಕೂಲ್ ಶಿಕ್ಷಣ ಪೂರೈಸಿ ಕಾಲೇಜು ಶಿಕ್ಷಣಕ್ಕೆ ತೆರಳಲಿ ಎಂದು ಟೊಂಕಕಟ್ಟಿ ನಿಂತಿದ್ದಾರೆ. ಇದರ ಫಲವಾಗಿ ಇದುವರೆಗೆ ಈ ಶಾಲೆಯಲ್ಲಿ 6000ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.1991ರಲ್ಲಿ ಆರಂಭಗೊಂಡ ಗ್ರಾಮಾಂತರ ಪ್ರೌಢಶಾಲೆಯನ್ನು ಅಕ್ಷಯ ಸ್ಮಾರಕ ಪ್ರೌಢಶಾಲೆ ಎಂದು ಹೆಸರು ಬದಲಾವಣೆ ಮಾಡಿ ಡಿಡಿಪಿಐ ಆದೇಶ ನೀಡಿದ್ದಾರೆ. ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ ಅವರಿಗೆ ನಮ್ಮ ಆಡಳಿತ ಮಂಡಳಿ ಅಭಾರಿಯಾಗಿದೆ ಎಂದು
ವಿದ್ಯಾಪೀಠದ ಕಾರ್ಯದರ್ಶಿ ತಿಪ್ಪೇರುದ್ರ ಹೆಗಡೆ ಹೇಳಿದ್ದಾರೆ.