ಕನ್ನಡಪ್ರಭ ವಾರ್ತೆ ಮೈಸೂರುಹಕ್ಕು ಮತ್ತು ಅಧಿಕಾರ ಪಡೆಯಲು ಹೋರಾಟಕ್ಕೆ ಸಿದ್ಧರಾಗುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದರು. ನಗರದ ಕಲಾಮಂದಿರದಲ್ಲಿ ಡಾ.ಜಿ. ಪರಮೇಶ್ವರ ಅಭಿಮಾನಿಗಳ ಬಳಗವು ತಮ್ಮ 74ನೇ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪರಮೋತ್ಸವ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಅಭಿಮಾನಿಗಳಿಂದ ವ್ಯಕ್ತವಾದ ಮುಖ್ಯಮಂತ್ರಿ ಕೂಗು, ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ದಲಿತ ಮುಖ್ಯಮಂತ್ರಿ ಆಗ್ರಹಕ್ಕೆ ಸೂಚ್ಯವಾಗಿ ತಿಳಿಸಿದರು.ಸಮಾನತೆ, ಸ್ಥಾನಮಾನ ಪಡೆಯಲು ಇನ್ನೆಷ್ಟು ವರ್ಷ ಕಾಯಬೇಕು? ಆರ್ಥಿಕವಾಗಿ ಭಾರತ ಜಗತ್ತಿನ 3ನೇ ರಾಷ್ಟ್ರವಾಗಿದೆ. ಚಂದ್ರಯಾನ ಕೈಗೊಳ್ಳುತ್ತೇವೆ. ಬಲಿಷ್ಠವಾದ ಮಿಲಿಟರಿ ಪಡೆ ಇದೆ. ಆದರೆ, ಸಮಾನತೆಯಿಂದ ಬಾಳುತ್ತಿಲ್ಲ. ವಿದೇಶದಲ್ಲೂ ಜಾತಿ ಗುಂಪು ರಚಿಸುತ್ತೇವೆ. ದೇಶ ಬೆಳೆದಿದೆ. ಸೌಲಭ್ಯ ಯಾರಿಗೆ ಸಿಕ್ಕಿದೆ ಎಂದು ಅವರು ಪ್ರಶ್ನಿಸಿದರು.ಹೃದಯ ಶ್ರೀಮಂತಿಕೆ ಬಂದಾಗ ಭಾರತಕ್ಕೆ ಗೌರವ ಬರುತ್ತದೆ. ಅದಾಗುತ್ತಿಲ್ಲ ಎಂಬ ವಿಷಾದವಿದೆ. ಅಧಿಕಾರ ಮತ್ತು ಹಕ್ಕು ಪಡೆಯಲು ಹೋರಾಟಕ್ಕೆ ಸಿದ್ಧರಾಗಬೇಕು. ಇಲ್ಲದಿದ್ದರೆ ಬಾಬಾ ಸಾಹೇಬರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದರು.ಮೈಸೂರಿನ ಅಭಿಮಾನಕ್ಕೆ ಅಭಾರಿಯಾಗಿದ್ದೇನೆ. ಅನೇಕ ವಿಘ್ನ, ಅಡೆತಡೆಗಳು ಎದುರಾದರೂ ಧೈರ್ಯದಿಂದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ರೂಪಿಸಿದ್ದಾರೆ ಎಂದು ಅವರು ಧನ್ಯವಾದ ತಿಳಿಸಿದರು.ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಶ್ರೀ ಜ್ಞಾನ ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಬಳಗದ ರಾಜು ಬಿಳಿಕೆರೆ, ಮಂಜುನಾಥ್, ನಿವೃತ್ತ ಪ್ರಾಧ್ಯಾಪಕ ಕೆ.ವಿ. ಅಯ್ಯಣ್ಣ ಇದ್ದರು.-----ಬಾಕ್ಸ್.... ಶೋಷಿತರಿಗೆ ಅಧಿಕಾರ ಕೊಡಬೇಕು- ಶ್ರೀ ಜ್ಞಾನಪ್ರಕಾಶ ಸ್ವಾಮೀಜಿರಾಜ್ಯದ ಶೋಷಿತ ವರ್ಗಕ್ಕೆ ಅಧಿಕಾರ ಕೊಡಬೇಕೆಂಬುದು ನಾಡಿನ ಜನರ ಒತ್ತಾಯ. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಆಶಯಕ್ಕೆ ಕಪ್ಪು ಚುಕ್ಕೆ ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.ಒಂದು ಸಮುದಾಯದವರು 9 ಬಾರಿ, ಮತ್ತೊಂದು ಸಮುದಾಯದವರು 7 ಬಾರಿ, ಇನ್ನೊಂದು ಸಮುದಾಯದವರು 2 ಬಾರಿ, ಸಣ್ಣಪುಟ್ಟ ಸಮುದಾಯದ ಜನರಿಗೂ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ. ಜನಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿರುವ ಶೋಷಿತರು ಮಾತ್ರ ಸಿಎಂ ಸ್ಥಾನದಿಂದ ವಂಚಿತರಾಗಿದ್ದಾರೆ. ಇದು ಸಂವಿಧಾನ ಅಪಮೌಲ್ಯ ಮಾಡುವ ಕ್ರಮ ಎಂದು ಅವರು ಹೇಳಿದರು. ರಾಷ್ಟ್ರೀಯ ಪಕ್ಷಗಳ ನೇತಾರರು ಈ ತಪ್ಪನ್ನು ಸರಿಪಡಿಸಬೇಕು. ನೂರಕ್ಕೆ ನೂರರಷ್ಟು ಬೆಂಬಲಿಸಿರುವ ಸಮುದಾಯವನ್ನು ಬೆಂಬಲಿಸಿದರೆ ರಾಜ್ಯದಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಪರಮೇಶ್ವರ ಸಂವೇದನಶೀಲ ರಾಜಕಾರಣಿ. ಯಾರೊಂದಿಗೂ ಸಂಘರ್ಷ ಇಲ್ಲ. ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿದ್ದಾರೆ. ಪರಮೇಶ್ವರ ಎಡಪಂಥೀಯ ಮತ್ತು ಬಲಪಂಥೀಯ ಎಂದು ಟೀಕಿಸುತ್ತಾರೆ. ಅವರು ನೇರಪಂಥೀಯ ಎಂದು ಅವರು ತಿಳಿಸಿದರು.