ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಸ್ಥಾಪಿಸಲಾಗಿರುವ 33 ಅಡಿ ಎತ್ತರದ ಪರಶುರಾಮ ವಿಗ್ರಹ ವಿವಾದ: ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

KannadaprabhaNewsNetwork |  
Published : Aug 06, 2024, 12:44 AM ISTUpdated : Aug 06, 2024, 11:20 AM IST
ಮುನಿಯಾಲು5 | Kannada Prabha

ಸಾರಾಂಶ

ಈ ನಕಲಿ ಯೋಜನೆಯ ಹಿಂದಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.

  ಉಡುಪಿ :  ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಸ್ಥಾಪಿಸಲಾಗಿರುವ 33 ಅಡಿ ಎತ್ತರದ ಪರಶುರಾಮ ವಿಗ್ರಹ ಕಂಚಿನದಲ್ಲ, ಅದು ನಕಲಿ ಎಂದು ಸಾಬೀತಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಬೇಕು. ಈ ನಕಲಿ ಯೋಜನೆಯ ಹಿಂದಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಕಾರ್ಕಳ ಪೊಲೀಸರು ಈ ವಿಗ್ರಹದ ಶಿಲ್ಪಿಯ ಬೆಂಗಳೂರಿನ ವರ್ಕ್‌ಶಾಪ್‌ಗೆ ದಾಳಿ ಮಾಡಿ, ವಿಗ್ರಹದ ವಿವಿಧ ಭಾಗಗಳನ್ನು ಜಪ್ತು ಮಾಡಿದ್ದಾರೆ. 6 ತಿಂಗಳ ಹಿಂದೆ ಜಿಲ್ಲಾಧಿಕಾರಿ ಆದೇಶದಂತೆ ವಿಗ್ರಹದ ಸೊಂಟಕ್ಕಿಂತ ಮೇಲ್ಭಾಗವನ್ನು ತೆರವುಗೊಳಿಸಲಾಗಿತ್ತು. ಅದೀಗ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ತೆರವಿಗೆ ಆದೇಶ ನೀಡಿರುವ ಜಿಲ್ಲಾಧಿಕಾರಿ ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ವಿಗ್ರಹದ ಸೊಂಟಕ್ಕಿಂತ ಕೆಳಗಿನ ಪಾದದವರೆಗಿನ ಭಾಗ ಉಮಿಕಲ್ ಬೆಟ್ಟದ ಮೇಲೆ ಇನ್ನೂ ಇದೆ. ಆದರೆ ಬೆಂಗಳೂರಿನ ವರ್ಕ್ ಶಾಪ್‌ನಲ್ಲಿ ಪೊಲೀಸರು ದಾಳಿ ನಡೆಸಿದಾಗ ಸೊಂಟದ ಮೇಲಿನ ಭಾಗ ಸಿಕ್ಕಿಲ್ಲ, ಆದರೆ ಎರಡು ಕಾಲಿನ ಭಾಗಗಳು ಪತ್ತೆಯಾಗಿವೆ. ಇವು ಅಸಲಿಯಾದರೇ ಉಮಿಕಲ್ ಬೆಟ್ಟದ ಮೇಲಿರುವ ಕಾಲಿನ ರಚನೆ ನಕಲಿಯಾಗಿರುವುದು ಸಾಬೀತಾಗುತ್ತಿದೆ. ವಿಗ್ರಹದ ಶಿಲ್ಪಿಗೆ ಈಗಾಗಲೇ 1 ಕೋಟಿ ರು.ಗಳನ್ನು ಪಾವತಿಸಲಾಗಿದೆ. ನಕಲಿ ಪೈಬರ್ ವಿಗ್ರಹ ರಚನೆಗೆ ಇಷ್ಟೊಂದು ಹಣವನ್ನು ಪಾವತಿಸಲಾಗಿದೆಯೇ ಎಂದವರು ಪ್ರಶ್ನಿಸಿದರು.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತರಾತುರಿಯಲ್ಲಿ ನಿರ್ಮಿಸಲಾದ ಈ ಧಾರ್ಮಿಕ ಥೀಮ್ ಪಾರ್ಕನ್ನು ಶಾಸಕರು ಕೇವಲ ತಮ್ಮ ಮತಗಳಿಕೆಗಾಗಿಯೇ ನಿರ್ಮಿಸಿದ್ದಾರೆ ಹೊರತು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೂ ಅಲ್ಲ, ಕ್ಷೇತ್ರದ ಅಭಿವೃದ್ಧಿಗೂ ಅಲ್ಲ. ಈ ಮೂಲಕ ಅವರು ಕ್ಷೇತ್ರದ ಜನತೆಯನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ್ದಾರೆ. ಇದು ಜಿಲ್ಲೆಯ ನಾಚಿಕೆಗೇಡಿನ ವಿಷಯ, ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಉದಯಕುಮಾರ್ ಆಗ್ರಹಿಸಿದರು.

ಕಾಂಗ್ರೆಸ್ ನಾಯಕರಾದ ಶುಭದ ರಾವ್, ಜ್ಯೋತಿ ಹೆಬ್ಬಾರ್, ದೀಪಕ್ ಕೋಟ್ಯಾನ್, ರಮೇಶ್ ಕಾಂಚನ್, ಸುಬಿತ್ ಕಾರ್ಕಳ, ವಿವೇಕ್ ಶೆಣೈ ಮುಂತಾದರಿದ್ದರು 

ಪ್ರಮಾಣಕ್ಕೆ ಸಿದ್ದ: ಉದಯಕುಮಾರ್ ಶೆಟ್ಟಿ

ಉಮಿಕಲ್ ಬೆಟ್ಟದ ಮೇಲೆ ಸ್ಥಾಪಿಸಿದ್ದು, ಕಂಚಿನ ವಿಗ್ರಹ ಅಲ್ಲ, ಫೈಬರ್‌ನ ನಕಲಿ ವಿಗ್ರಹ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧ. ಡಿಸಿ, ಕಾರ್ಕಳ ಶಾಸಕರು, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಬರಲಿ ಎಂದು ಉದಯಕುಮಾರ್ ಶೆಟ್ಟಿ ಸವಾಲು ಹಾಕಿದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು