ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅಗತ್ಯ

KannadaprabhaNewsNetwork |  
Published : Jun 07, 2024, 12:15 AM IST
ತರೀಕೆರೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಯಲ್ಲಿ ವಿಕಸನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಾಡಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಕಸನ ಸಂಸ್ಥೆ ಮಾನವ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಎ.ಎಂ. ವರ್ಗೀಸ್ ಕ್ಲೀಟಸ್ ಮತ್ತಿತರರು ಭಾಗವಹಿಸಿದ್ದರು.

ಕನ್ನಡಪ್ರಭವಾರ್ತೆ, ತರೀಕೆರೆ

ಪರಿಸರ ಉಳಿಸಲು ಮಕ್ಕಳಿಗೆ ಮನೆಗಳಲ್ಲಿ ಪೋಷಕರು ಹಾಗೂ ಶಾಲೆಗಳಲ್ಲಿ ಶಿಕ್ಷಕರು ತಿಳಿ ಹೇಳಬೇಕು ಎಂದು ಪಟ್ಟಣದ ಗಾಳಿಹಳ್ಳಿ ವಿಕಸನ ಸಂಸ್ಥೆ ಮಾನವ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್ ಹೇಳಿದರು.

ವಿಕಸನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಕಸನ ಸಂಸ್ಥೆ ಮಾನವ ಸಂಪನ್ಮೂಲ ಕೇಂದ್ರದಲ್ಲಿ ನಮ್ಮ ಭೂಮಿ ನಮ್ಮ ರಕ್ಷಣೆ ಎಂಬ ಶೀರ್ಷಿಕೆಯೊಂದಿಗೆ ಏರ್ಪಾಡಾಗಿದ್ದ ವಿಶ್ವ ಪರಿಸರ ದಿನಾಚಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಗಿಡಬೆಳೆಸುವಂತಾಗಬೇಕು. ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡಬೇಕು. ಗಿಡ-ಮರ ಬೆಳೆಸಿ ಮುಂದಿನ ಜನಾಂಗಕ್ಕೆ ಆಗುವ ಪ್ರಯೋಜನದ ಬಗ್ಗೆ ಮಕ್ಕಳಿಗೆ ಕಲಿಸಬೇಕಾಗಿರುವುದು ಪೋಷಕರ ಜವಾಬ್ಧಾರಿಯಾಗಿದೆ ಎಂದ ಅವರು, ಈವರೆಗೆ ವಿಕಸನ ಸಂಸ್ಥೆಯಿಂದ ಪ್ರತಿವರ್ಷ ಪರಿಸರ ದಿನಾಚರಣೆ ಹಾಗೂ ವರ್ಷಪೂರ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಹಾಗೂ ರೈತರಿಗೆ ಬೇಕಾದ ಮಾವು, ಬೇವು, ಹಲಸು, ನೇರಳೆ, ನುಗ್ಗೆ, ಸಪೋಟ, ನಿಂಬೆ, ದಾಳಿಂಬೆ ಇನ್ನಿತರ ಔಷಧಿ ಸಸ್ಯಗಳನ್ನು ವಿತರಿಸಲಾಗುತ್ತಿದೆ ಎಂದರು.

ಜನರು ತಮ್ಮ ಜೀವನ ನಿರ್ವಹಣೆ ಮಾಡುತ್ತಿರುವ ವಿಷಯವನ್ನು ಅವರು ವಿವರಿಸಿದರು ಮತ್ತು ಮರ ಕಡಿಯುವುದರಿಂದ ಆಗುವ ಹಾನಿ, ಮಳೆ ಬಾರದಿರುವುದು, ಜಾಗತಿಕ ತಾಪಮಾನ ಏರಿಕೆ, ಮನುಷ್ಯರಿಗೆ ಬರುವ ರೋಗರುಜಿನ ಕುರಿತು ವಿವರವಾಗಿ ತಿಳಿಸಿದರು.

ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಅಧ್ಯಕ್ಷರಾದ ಕನ್ನಡಶ್ರೀ ಬಿ.ಎಸ್..ಭಗವಾನ್‌ ಮಾತನಾಡಿ, ಈ ಹಿಂದೆ ತಾವು ಆಚರಿಸಿದ ಪರಿಸರ ದಿನಾಚರಣೆ ಹಾಗೂ ತರೀಕೆರೆ ಮಹಾತ್ಮಗಾಂಧಿ ಉದ್ಯಾನವನಗಳಲ್ಲಿ ನೆಟ್ಟಿರುವ ಗಿಡ, ಈಗ ಅವು ಹೆಮ್ಮರವಾಗಿ ಜನರಿಗೆ ನೆರಳು ನೀಡುತ್ತಿರುವ ಬಗ್ಗೆ ತಿಳಿಸಿದರು. ಒಬ್ಬರು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಜೀವನದಲ್ಲಿ ಸಾರ್ಥಕತೆ ಪಡೆಯಬೇಕೆಂದು ತಿಳಿಸಿದರು.

ತರೀಕೆರೆ ವಾಲ್ಮೀಕಿ ಸಂಘದ ಪಧಾಧಿಕಾರಿಗಳಾದ ರಾಮಪ್ಪ ಮಾತನಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಲಹೆ ನೀಡಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಕೊಡುಗೆ ಜಗತ್ತಿಗೆ ನೀಡಬೇಕೆಂದು ಅವರು ತಿಳಿಸಿದರು.

ಹಿರಿಯ ನಾಗರಿಕರು ಹಾಗೂ ಪರಿಸರಾಸಕ್ತರು ಒಂದೊಂದು ಗಿಡ ನೆಟ್ಟು ವಿಶ್ವ ಪರಿಸರ ದಿನ ಔಚಿತ್ಯಪೂರ್ಣವಾಗಿ ಆಚರಿಸಿದರು. ಸುಮಾರು ೩೦ ಕ್ಕಿಂತಲೂ ಹೆಚ್ಚು ಗಿಡಗಳನ್ನು ಗಾಳೀಹಳ್ಳಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ನೆಟ್ಟಿರುವುದು ವಿಶೇಷವಾಗಿತ್ತು. ಹೊಂಗೆ, ಬೇವು, ಕಾಡು ಬಾದಾಮಿ, ನೇರಳೆ ಗಿಡಗಳನ್ನು ನೆಡಲಾಯಿತು.

ಪರಮೇಶ್ವರಪ್ಪ, ಮಂಜುನಾಥ್, ರಾಮಚಂದ್ರಪ್ಪ, ಅಂತೋಣಿಕಾಂತ, ಶಿವಪ್ಪ, ಚಂದ್ರಪ್ಪ, ಶ್ರೀನಿವಾಸ್, ಲಿಲ್ಲಿ ವರ್ಗಿಸ್, ಅನ್ಸಿಲಾ ಗ್ರಗೋರಿ, ಕ್ರಿಸ್ತ ದಯಾ ಕಮಾರ್, ವಿಭಾ ವರ್ಗೀಸ್ ಹಾಗೂ ಮಕ್ಕಳ ಪೋಷಕರು, ಸಾರ್ವಜನಿಕರು, ವಿಕಸನ ಸಂಸ್ಥೆ ಸಂಯೋಜಕರು, ಕಚೇರಿ ಸಿಬ್ಬಂದಿ, ವಿಕಸನ ಸಂಸ್ಥೆ ಚಟ್ಟನಹಳ್ಳಿ ಹಾಗೂ ದುಗ್ಲಾಪುರ ವಸತಿಶಾಲೆಯ ಮಕ್ಕಳು ಹಾಗೂ ಪೋಷಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ