- ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎತ್ನಿಕ್ ಡೇ-2024 ಕಾರ್ಯಕ್ರಮ । ರಂಗುರಂಗಿನ ವಸ್ತ್ರಗಳ ಧರಿಸಿ ಮಿಂಚಿದ ವಿದ್ಯಾರ್ಥಿಗಳು - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಸಂಸ್ಕೃತಿಯನ್ನು ಕೂಡಿಸಲು ಎತ್ನಿಕ್ ಡೇ ಕಾರ್ಯಕ್ರಮ ಆಚರಣೆ ಮಾಡಲಾಗುತ್ತದೆ. ಎತ್ನಿಕ್ ಡೇ ಎಂದರೇ ಕಾರು, ಬೈಕುಗಳಲ್ಲಿ ಬರುವುದಲ್ಲ. ಹಳ್ಳಿ ಸೊಗಡಿನ ಉಡುಪು ಧರಿಸಿ, ಎತ್ತಿನ ಬಡ್ಡಿ, ಟ್ರ್ಯಾಕ್ಟರ್‌ಗಳಲ್ಲಿ ಬಂದು ಮೆರುಗು ತುಂಬಬೇಕು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಡಾ. ಬಿ.ಪಿ. ಚಂದ್ರಶೇಖರ ಹೇಳಿದರು.
ನಗರದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎತ್ನಿಕ್ ಡೇ-2024 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಭಾರತ ದೇಶದ ಪ್ರಕೃತಿ, ಪರಿಸರ, ಪರಂಪರೆ ಉಳಿಸಲು ಎತ್ನಿಕ್ ಡೇ ಮಾದರಿ ಕಾರ್ಯಕ್ರಮಗಳು ಸಹಕಾರಿ ಆಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಸ್ವಾದಿಸಬೇಕು ಎಂದ ಅವರು, ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಕೆಗಷ್ಟೇ ಸೀಮಿತಗೊಳಿಸಿ ಅವರ ಮೇಲೆ ಒತ್ತಡ ಹಾಕದೆ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದರು.ಎತ್ನಿಕ್ ಡೇ ನಿಮಿತ್ತ ಕಾಲೇಜಿನ ಯುವತಿಯರು ಬಣ್ಣ ಬಣ್ಣದ ಸೀರೆ, ಲಂಗ- ದಾವಣಿಯಲ್ಲಿ ಮಿಂಚಿದರೆ, ಯುವಕರು ಪಂಚೆ, ಶಲ್ಯ ಧರಿಸಿ ಕಾಲೇಜಿನ ಆವರಣದಲ್ಲಿ ಆಚರಣೆಗೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಎಸ್.ಜಿ.ಮಲ್ಲೇಶ್ ಕುಮಾರ್ ತೀರ್ಪುಗರರಾಗಿ ಭಾಗವಹಿಸಿದ್ದರು. ಎತ್ನಿಕ್ ಡೇ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ರಂಗೋಲಿಯಲ್ಲಿ ಎಂ.ಎಂ.ಚೈತ್ರಾ, ಚಿತ್ರಕಲೆಯಲ್ಲಿ ರಮ್ಯಾ ನಾಯ್ಕ, ನೃತ್ಯ ಸ್ಪರ್ಧೆಯಲ್ಲಿ ಆಕಾಂಕ್ಷಾ ಪ್ರಶಸ್ತಿ ಪಡೆದರೆ, ಸೋಲೊ ಡಾನ್ಸ್‌ನಲ್ಲಿ ಎನ್.ನೇಹಾ, ಮಿಮಿಕ್ರಿಯಲ್ಲಿ ಎಸ್.ಆರ್. ಶಮಂತ್, ಮೋನೊ ಆಕ್ಟಿಂಗ್‌ನಲ್ಲಿ ಎಂ.ಜಿ. ವೃಷಭ್, ಮೈಮ್ ಹಾಗೂ ಸ್ಕಿಟ್‌ನಲ್ಲಿ ಎಚ್.ಎಂ. ಗುರುಮೂರ್ತಿ ಮತ್ತು ತಂಡ, ಮ್ಯಾಡ್ ಆಡ್ಸ್‌ನಲ್ಲಿ ಎಂ.ಭರತ್ ಕುಮಾರ್ ಮತ್ತು ತಂಡ, ಗ್ರೂಪ್ ಸಾಂಗ್‌ನಲ್ಲಿ ಎಂ.ಎಂ. ಚೈತ್ರಾ ಮತ್ತು ತಂಡ ಪ್ರಶಸ್ತಿ ಗಳಿಸಿತು.
ಈ ಸಂದರ್ಭ ಇನ್ನರ್ ವ್ಹೀಲ್ ಕ್ಲಬ್ ಸದಸ್ಯೆ ರೂಪಾ ಮಂಜುನಾಥ, ವಾಣಿಜ್ಯೋದ್ಯಮಿ ಮೀರಾ ರಘು, ಪ್ರಾಧ್ಯಾಪಕರು ಮತ್ತು ಡೀನ್ ಡಾ. ಎಸ್.ಮಂಜಪ್ಪ, ಪ್ರಾಧ್ಯಾಪಕರಾದ ಡಾ. ಎಸ್.ಬಿ. ಮಲ್ಲೂರು, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಇತರರು ಇದ್ದರು.- - - -24ಕೆಡಿವಿಜಿ34, 35, 36,37ಃ:
ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ನಡೆದ ಎತ್ನಿಕ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಯ ಉಡುಪುಗಳ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.