ತಂದೆ-ತಾಯಿಯೇ ನಿಜವಾದ ದೇವರು: ಬಾಲಚಂದ್ರ ಜಾರಕಿಹೊಳಿ

KannadaprabhaNewsNetwork |  
Published : Nov 10, 2024, 01:47 AM IST
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬಸವರಾಜ ಸ್ವಾಮಿಗಳು ಗೋಕಾವಿ ಕರ್ಣ ಪ್ರಶಸ್ತಿ ನೀಡಿ ಗೌರವಿಸಿದರು.  | Kannada Prabha

ಸಾರಾಂಶ

ಗೋಕಾಕ: ಹೆತ್ತವರೇ ನಮಗೆ ನಿಜವಾದ ದೇವರು. ದೇವರ ಸ್ವರೂಪಿಯಾಗಿರುವ ತಂದೆ-ತಾಯಿಗೆ ಗೌರವ ನೀಡುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಶಾಸಕ, ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಹೆತ್ತವರೇ ನಮಗೆ ನಿಜವಾದ ದೇವರು. ದೇವರ ಸ್ವರೂಪಿಯಾಗಿರುವ ತಂದೆ-ತಾಯಿಗೆ ಗೌರವ ನೀಡುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಶಾಸಕ, ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶುಕ್ರವಾರ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀದೇವಿ ಮತ್ತು ಭರಮದೇವರ ದೇವಸ್ಥಾನ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ ನೆರವೇರಿಸಿ ಮಾತನಾಡಿದ ಅವರು, ಭಾರತೀಯರಾದ ನಾವು ದೇವರಿಗೆ ಶ್ರದ್ಧೆ, ಭಕ್ತಿ ತೋರುವ ಮೂಲಕ ಧಾರ್ಮಿಕತೆ ಉಳಿಸಿ, ಬೆಳೆಸುತ್ತಾ ಈ ಭವ್ಯ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು.

ಈ ಜಗತ್ತು ನಿಂತಿರುವುದೇ ದೇವರಿಂದ. ದೇವರು ಎಲ್ಲ ಕಡೆಗಳಲ್ಲೂ ಆವರಿಸಿಕೊಂಡಿದ್ದಾನೆ. ಆದರೆ, ನಾವು ಯಾರೂ ದೇವರನ್ನು ಸಾಕ್ಷಾತ್‌ ನೋಡಿಲ್ಲ. ಆದರೂ ನಮಗೆ ದೇವರಲ್ಲಿ ನಂಬಿಕೆ, ಭಕ್ತಿ ಇದೆ. ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ದೇವರನ್ನು ಸ್ಮರಿಸಿಕೊಂಡು ಪ್ರಾರ್ಥಿಸುತ್ತೇವೆ. ನಮ್ಮ ಹರಕೆ, ಇಷ್ಟಾರ್ಥಗಳು ಈಡೇರಲಿ ಎಂದು ಬೇಡಿಕೊಳ್ಳುತ್ತೇವೆ. ಇವೆಲ್ಲ ನಾವುಗಳು ದೇವರಲ್ಲಿ ಇಟ್ಟ ನಂಬಿಕೆಗಳು. ನಾವು ದೇವರನ್ನು ನೋಡಲು ಸಾಧ್ಯವಾಗದಿದ್ದರೂ ನಮಗೆ ಜನ್ಮ ಕೊಟ್ಟ ತಂದೆ, ತಾಯಿಯನ್ನೇ ದೇವರೆಂದು ಆರಾಧಿಸಿ, ಗೌರವಿಸಬೇಕು ಎಂದು ಸಲಹೆ ನೀಡಿದರು.

ಕಪರಟ್ಟಿ ಗ್ರಾಮದ ಜನರು ದೈವಿ ಭಕ್ತರು. ಗ್ರಾಮದ ಒಂದೇ ಸ್ಥಳದಲ್ಲಿ ವರಸಿದ್ಧೇಶ್ವರ, ಹನುಮಂತ ದೇವರು, ಬೀರಸಿದ್ಧೇಶ್ವರ, ಬಸವೇಶ್ವರ, ದುರ್ಗಾದೇವಿ ದೇಗುಲ ನಿರ್ಮಾಣ ಮಾಡಿದ್ದಾರೆ. ಈಗ ಭರಮ ದೇವರು ಮತ್ತು ಶ್ರೀದೇವಿ ದೇವಸ್ಥಾನ ಕಟ್ಟಿಸುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದ್ದಾರೆ. ಸಣ್ಣ ಗ್ರಾಮವಾದರೂ ಗುಡಿಗಳನ್ನು ನಿರ್ಮಿಸುವ ಮೂಲಕ ದೈವಿ ಪರಂಪರೆ ಬೆಳೆಸುತ್ತಿರುವ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಆಶ್ರಮದ ಬಸವರಾಜ ಸ್ವಾಮೀಜಿ ಮಾತನಾಡಿ, ಕರ್ನಾಟಕ ನೀರಾವರಿ ನಿಗಮದಿಂದ ₹25 ಲಕ್ಷ ಮತ್ತು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹5 ಲಕ್ಷ ಸೇರಿ ಒಟ್ಟು 30 ಲಕ್ಷ ವೆಚ್ಚದಲ್ಲಿ ಶ್ರೀದೇವಿ ದೇವಸ್ಥಾನ ಮತ್ತು ಸಮುದಾಯ ಭವನ ನಿರ್ಮಿಸಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿದ ₹4ಲಕ್ಷಸೇರಿ ಸುಮಾರು ₹8 ಲಕ್ಷ ವೆಚ್ಚದಲ್ಲಿ ಭರಮ ದೇವರ ದೇವಸ್ಥಾನ ನಿರ್ಮಿಸಲಾಗಿದೆ. ಶಾಸಕರ ಹತ್ತಿರ ಯಾರೇ ಆಗಲಿ ಕಷ್ಟಗಳನ್ನು ಹೇಳಿಕೊಂಡು ಹೋದರೆ ಅವರು ಎಂದೂ ಬರಿಗೈಯಿಂದ ಕಳಿಸಿದ ಉದಾಹರಣೆ ಇಲ್ಲ. ಪ್ರತಿಯೊಬ್ಬರಿಗೂ ತನು, ಮನ, ಧನದ ಸಹಾಯ ಮಾಡುವ ಮೂಲಕ ಬಡವರ ಕಣ್ಣೀರನ್ನು ಒರೆಸುತ್ತಿದ್ದಾರೆ. ಇವರಂಥ ದಯಾಮಯಿ ಶಾಸಕರು ಈ ದೇಶದಲ್ಲಿಯೇ ಸಿಗುವುದಿಲ್ಲ. ದಾನ, ಧರ್ಮಕ್ಕೆ ಹೆಸರಾದ ಬಾಲಚಂದ್ರ ಜಾರಕಿಹೊಳಿ ಆಧುನಿಕ ಕರ್ಣ ಎಂದು ಬಣ್ಣಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಡೆದ ಧರ್ಮಸಭೆಯಲ್ಲಿ ಅಂಕಲಗಿ-ಕುಂದರಗಿ ಮಠದ ಅಮರ ಸಿದ್ಧೇಶ್ವರ ಸ್ವಾಮೀಜಿ, ಮುಮ್ಮೇಟ್ಟಗುಡ್ಡದ ಅವಧೂತ ಮಹಾರಾಜರು, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಯಲ್ಲಪ್ಪ ಸ್ವಾಮೀಜಿ ಮತ್ತು ತಮ್ಮಣ್ಣ ದೇವಋಷಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬಸವರಾಜ ಸ್ವಾಮಿಗಳು ಗೋಕಾವಿ ಕರ್ಣ ಪ್ರಶಸ್ತಿ ನೀಡಿ ಗೌರವಿಸಿದರು. ಶ್ರೀಗಳು, ಗಣ್ಯರು ಸೇರಿ ಶಾಸಕರಿಗೆ ಪುಷ್ಪಾರ್ಪಣೆ ಮಾಡಿ ಸತ್ಕರಿಸಲಾಯಿತು.

ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ಮುಸಗುಪ್ಪಿ, ಪ್ರಮುಖರಾದ ಅರ್ಜುನ ಬೈಲಾಡಿ, ಬಸು ನಾಯಿಕ, ಬಸು ಕಂಕಣವಾಡಿ, ಸಿದ್ದಪ್ಪ ಹಳ್ಳಿ, ಸಿದ್ಧಾರೂಢ ಖಾನಟ್ಟಿ, ಹೊಳೆಪ್ಪ ಬೈಲಾಡಿ, ಮುತ್ತೆಪ್ಪ ಇಟ್ಟಪ್ಪಗೋಳ, ಸಿದ್ದಪ್ಪ ಖಾನಟ್ಟಿ, ಶ್ರೀಕಾಂತ ಕೌಜಲಗಿ, ವಿಠ್ಠಲ ಬೈಲಾಡಿ, ಸಿದ್ರಾಮ ಖಾನಟ್ಟಿ, ರಾಮನಿಂಗ ಹಳ್ಳಿ, ಬಸು ವ್ಯಾಪಾರಿ, ಮುತ್ತೆಪ್ಪ ಖಾನಟ್ಟಿ, ಲಕ್ಕಪ್ಪ ನಾಯಿಕ, ವಾರೆಪ್ಪ ಕಟ್ಟಿಕಾರ, ಯಲ್ಲಪ್ಪ ಇಟ್ಟಪ್ಪಗೋಳ, ಇತರರು ಉಪಸ್ಥಿತರಿದ್ದರು.

ಗಮನ ಸೆಳೆದ ಹಾಡು: ಡೊಳ್ಳಿನ ಗಾಯಕ ಅರ್ಜುನ ಬೈಲಾಡಿ ಹಾಡಿದ ಬಾಲಚಂದ್ರ ಸಾಹುಕಾರ ನಮ್ಮ ಪಾಲಿನ ದೇವರು ಹಾಡು ಗಮನ ಸೆಳೆಯಿತು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕುರಿತು ಅರ್ಜುನ ಬೈಲಾಡಿ ಸ್ವ-ರಚಿತ ಹಾಡಿಗೆ ಬಾಲಚಂದ್ರ ಜಾರಕಿಹೊಳಿ ಒಂದು ಕ್ಷಣ ಭಾವೋದ್ಗಕ್ಕೆ ಒಳಗಾದರು. ಬೈಲಾಡಿ ತಂಡದವರನ್ನು ಶಾಸಕರು ಸತ್ಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ