ಮಕ್ಕಳಿಗೆ ಸಂಸ್ಕಾರ ಕಲಿಸಲು ಪೋಷಕರ ಶ್ರಮ ಅಗತ್ಯ: ಮಂಗಳಾನಂದನಾಥ ಸ್ವಾಮೀಜಿ

KannadaprabhaNewsNetwork | Published : Jan 26, 2025 1:32 AM

ಸಾರಾಂಶ

ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ನಡೆಸುವುದು ಬಹಳ ಕಷ್ಟದ ಕೆಲಸ. ಧೈರ್ಯ ಮಾಡಿ ೧೦ ವರ್ಷಗಳ ಕಾಲ ಗುಣಮಟ್ಟದ ಶಿಕ್ಷಣವನ್ನು ರಂಜಿತ್‌ಕುಮಾರ್ ಅವರ ಸಂಸ್ಥೆ ನೀಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಟೇಕಲ್

ತಂದೆ- ತಾಯಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು. ಮಕ್ಕಳು ಸಂಸ್ಕಾರ ಕಲಿತರೆ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕೋಲಾರ- ಚಿಕ್ಕಬಳ್ಳಾಪುರ ಶಾಖೆಯ ಪರಮ ಪೂಜ್ಯ ಶ್ರೀಶ್ರೀ ಮಂಗಳಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿದರು.

ಟೇಕಲ್‌ನ ಹುಣಸಿಕೋಟೆಯ ಅಕ್ಷರಧಾಮ ಸಮೂಹ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಹೊಂದಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ಅನುಕರಣೆ ಮಾಡುವ ಶಕ್ತಿ ಹೆಚ್ಚು. ತಂದೆ- ತಾಯಿ ಏನು ಕಲಿಸುತ್ತಾರೋ ಅದನ್ನು ಕಲಿಯುತ್ತಾರೆ. ಮಕ್ಕಳ ಮುಂದೆ ತುಂಬಾ ಜಾಗರೂಕರಾಗಿರಬೇಕು. ಆದ್ದರಿಂದ ಪೋಷಕರು ಸಂಸ್ಕಾರವಂತರಾಗಿರಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ನಡೆಸುವುದು ಬಹಳ ಕಷ್ಟದ ಕೆಲಸ. ಧೈರ್ಯ ಮಾಡಿ ೧೦ ವರ್ಷಗಳ ಕಾಲ ಗುಣಮಟ್ಟದ ಶಿಕ್ಷಣವನ್ನು ರಂಜಿತ್‌ಕುಮಾರ್ ಅವರ ಸಂಸ್ಥೆ ನೀಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಆದಿಚುಂಚನಗಿರಿ ಮಠವು ೫೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಪೂಜ್ಯ ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿಯ ಆಶೀರ್ವಾದದಿಂದ ಎಲ್ಲವೂ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾಗಿವೆ ಎಂದರು.

ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿ ನಂತರ ತಮ್ಮ ಸ್ವಂತ ಶಿಕ್ಷಣ ಸಂಸ್ಥೆ ಅಕ್ಷರಧಾಮ ಸಮೂಹ ಸಂಸ್ಥೆ ಸ್ಥಾಪಿಸಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿರುವ ರಂಜಿತ್‌ಕುಮಾರ್‌ರವರ ಶ್ರಮ ಶ್ಲಾಘನೀಯವೆಂದರು.

ಮಾಲೂರು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಿ.ಪಿ.ಬೈಯಣ್ಣ ಮಾತನಾಡಿ, ಶಾಲೆಯಲ್ಲಿ ಮಕ್ಕಳು ೮ ಗಂಟೆ ಇದ್ದರೆ ಉಳಿದ ೧೬ ಗಂಟೆ ಪೋಷಕರ ಬಳಿಯೇ ಇರುತ್ತಾರೆ. ಮನೆಯಲ್ಲಿ ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದರು.

ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಸಂಘದ ಅಧ್ಯಕ್ಷ ಎಸ್.ಮುನಿಯಪ್ಪ ಮಾತನಾಡಿ, ಮೊದಲ ಬಾರಿಗೆ ಟೇಕಲ್ ವ್ಯಾಪ್ತಿಯಲ್ಲಿ ಅಕ್ಷರಧಾಮ ಪದವಿ ಪೂರ್ವ ಕಾಲೇಜು ಸ್ಥಾಪಿಸಿ, ಗ್ರಾಮೀಣ ಭಾಗದಲ್ಲಿ ಪದವಿ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯ ಕಾರ್ಯವೈಖರಿ ಮೆಚ್ಚುವಂತದ್ದು ಎಂದರು. ಅಕ್ಷರಧಾಮ ಸಂಸ್ಥೆಯವರು ಬಂಗಾರಪೇಟೆಯ ದಿವ್ಯ ವಿದ್ಯಾನಿಕೇತನ ಶಾಲೆಯನ್ನು ಸ್ವಾಮೀಜಿ ಮೂಲಕ ಹಸ್ತಾಂತರ ಮಾಡಿಕೊಂಡರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ೨೦೨೧-೨೨, ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸ್ವಾಮೀಜಿಯವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಷರಧಾಮ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಂಜಿತ್‌ಕುಮಾರ್, ಅಧ್ಯಕ್ಷರಾದ ಡಿ.ವೆಂಕಟೇಶಪ್ಪ, ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್, ಮುಖ್ಯೋಪಾಧ್ಯಾಯರಾದ ಪ್ರಶಾಂತ್, ದಿವ್ಯ ವಿದ್ಯಾನಿಕೇತನ ಶಾಲೆ ಕಾರ್ಯದರ್ಶಿ ಎಸ್.ಸರಸ್ವತಮ್ಮ, ನಿರ್ಮಲಮ್ಮ, ಬಿ.ಪಿ.ಬೈಯಣ್ಣ, ಕೋಲಾರ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಆನಂದ್‌ಕುಮಾರ್, ಶಾಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share this article