ಪಾದರಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿರೋಧಿಸಿ ಪೋಷಕರ ಪ್ರತಿಭಟನೆ

KannadaprabhaNewsNetwork |  
Published : May 12, 2026, 01:15 AM IST
11ಕೆಆರ್ ಎಂಎನ್ 2.ಜೆಪಿಜಿಪಾದರಹಳ್ಳಿಯಲ್ಲಿ ಕೆಪಿಎಸ್ ಶಾಲೆ ಪ್ರಾರಂಭಿಸುವುದನ್ನು ವಿರೋಧಿಸಿ ಪೋಷಕರು, ವಿದ್ಯಾರ್ಥಿಗಳು ,ಹಳೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

1919-20ರಲ್ಲಿ ಸ್ಥಾಪನೆಯಾದ ಹರೀಸಂದ್ರ ಸರ್ಕಾರಿ ಶಾಲೆಯು ಸುಮಾರು 107 ವರ್ಷಗಳ ಇತಿಹಾಸವನ್ನು ಹೊಂದಿದೆ. ಶಾಲೆಯ ದಾಖಲಾತಿ ಸಂಖ್ಯೆ 120 ದಾಟುತ್ತಿದ್ದರೂ ಇದನ್ನು ವಿಲೀನಗೊಳಿಸಲು ಮುಂದಾಗಿರುವುದು ಸರಿಯಲ್ಲ. ಈ ಐತಿಹಾಸಿಕ ಶಾಲೆಯನ್ನು ಉಳಿಸಲು ಹಳೆಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಿಂದ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಜನರ ಈ ಭಾವನೆಯನ್ನು ಬದಿಗೊತ್ತಿ, 7-10 ಕಿ.ಮೀ ದೂರದಲ್ಲಿ ಖಾಸಗಿ ಕಂಪನಿಗಳ ನೆರವಿನೊಂದಿಗೆ ಶಾಲೆ ಸ್ಥಾಪಿಸಲು ಮುಂದಾಗಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯ .

ಕನ್ನಡಪ್ರಭ ವಾರ್ತೆ ರಾಮನಗರ

ಪಾದರಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯುವುದನ್ನು ವಿರೋಧಿಸಿ, ತಾಲೂಕಿನ ಹರೀಸಂದ್ರ ಮತ್ತು ಮದರ್ ಸಾಬರದೊಡ್ಡಿ ಗ್ರಾಮದಲ್ಲಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಒ) ಜಿಲ್ಲಾ ಘಟಕದ ನೇತೃತ್ವದಲ್ಲಿ ಹರೀಸಂದ್ರ ಮತ್ತು ಮದರ್ ಸಾಬರದೊಡ್ಡಿ ಗ್ರಾಮಗಳಲ್ಲಿ ಪ್ರತಿಭಟಿಸಿದ ಪೋಷಕರು, ಸರ್ಕಾರ ಕೂಡಲೇ ಕೆಪಿಎಸ್ ಮ್ಯಾಗ್ನೆಟ್ ನೀತಿಯಿಂದ ಹಿಂದೆ ಸರಿಯಬೇಕು. ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕು. ಎಲ್ಲಾ ಗ್ರಾಮೀಣ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರನ್ನು ನೇಮಿಸಿ, ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಎಐಡಿಎಸ್‍ಒ ಜಿಲ್ಲಾ ಸಂಚಾಲಕ ರೋಹಿತ್, ಕೆಪಿಎಸ್ ಮ್ಯಾಗ್ನೆಟ್ ನೀತಿಯು ಸಂಪೂರ್ಣ ವೈಫಲ್ಯ ಕಂಡಿದೆ. ಇದಕ್ಕೆ ಹೊಂಗನೂರು ಶಾಲೆಯೇ ಸಾಕ್ಷಿ. ಈಗ ಪಾದರಹಳ್ಳಿಯಲ್ಲಿ ಮಾದರಿ ಶಾಲೆಯ ಹೆಸರಿನಲ್ಲಿ ಹರೀಸಂದ್ರ, ಮದರ್ ಸಾಬರದೊಡ್ಡಿ, ತಿಮ್ಮೇಗೌಡನದೊಡ್ಡಿ, ಚಿಕ್ಕೇಗೌಡನದೊಡ್ಡಿ, ಕೆಂಪೇಗೌಡನದೊಡ್ಡಿ, ಹಳ್ಳಿಮಾಳ ಸೇರಿದಂತೆ ಹಲವು ಶಾಲೆಗಳನ್ನು ಮುಚ್ಚಲು ಸರ್ಕಾರ ಸಂಚು ರೂಪಿಸಿದೆ. ಈ ಶಾಲೆಗಳು ಟೊಯಾಟಾ ಕಿರ್ಲೋಸ್ಕರ್ ಸಂಸ್ಥೆಯ ದಾನದಿಂದ ನಿರ್ಮಾಣವಾಗಿದ್ದು, ಸರ್ಕಾರ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ನಮ್ಮೂರಿನ ಶಾಲೆಗಳನ್ನು ಉಳಿಸಲು ನಾವು ಬೃಹತ್ ಹೋರಾಟ ಕಟ್ಟಬೇಕಿದೆ ಎಂದು ಕರೆ ನೀಡಿದರು.

ಬಡ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ:

ಹರೀಸಂದ್ರದಲ್ಲಿ ಮಾತನಾಡಿದ ಎಐಡಿಎಸ್‍ಒ ರಾಜ್ಯ ಉಪಾಧ್ಯಕ್ಷೆ ಸಿ.ಎಂ.ಅಪೂರ್ವ, ಸರ್ಕಾರವು ತನ್ನ ಕ್ರೂರ ಕೆಪಿಎಸ್ ಮ್ಯಾಗ್ನೆಟ್ ನೀತಿಯ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದನ್ನು ಕಂಡು, ಈಗ ಕೇವಲ ಯೋಜನೆಯ ಹೆಸರನ್ನು ಬದಲಿಸಿ ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ಮುಂದುವರಿಸುತ್ತಿದೆ. ಇದು ಬಡ, ಕಾರ್ಮಿಕ ಮತ್ತು ರೈತರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1919-20ರಲ್ಲಿ ಸ್ಥಾಪನೆಯಾದ ಹರೀಸಂದ್ರ ಸರ್ಕಾರಿ ಶಾಲೆಯು ಸುಮಾರು 107 ವರ್ಷಗಳ ಇತಿಹಾಸವನ್ನು ಹೊಂದಿದೆ. ಶಾಲೆಯ ದಾಖಲಾತಿ ಸಂಖ್ಯೆ 120 ದಾಟುತ್ತಿದ್ದರೂ ಇದನ್ನು ವಿಲೀನಗೊಳಿಸಲು ಮುಂದಾಗಿರುವುದು ಸರಿಯಲ್ಲ. ಈ ಐತಿಹಾಸಿಕ ಶಾಲೆಯನ್ನು ಉಳಿಸಲು ಹಳೆಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಿಂದ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಜನರ ಈ ಭಾವನೆಯನ್ನು ಬದಿಗೊತ್ತಿ, 7-10 ಕಿ.ಮೀ ದೂರದಲ್ಲಿ ಖಾಸಗಿ ಕಂಪನಿಗಳ ನೆರವಿನೊಂದಿಗೆ ಶಾಲೆ ಸ್ಥಾಪಿಸಲು ಮುಂದಾಗಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ದೂರಿದರು.

ಈ ಪ್ರತಿಭಟನೆಯಲ್ಲಿ ಗ್ರಾಮದ ಪೋಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಮಾನಸದ ನಾಯಕನಿಗೆ ಕಣ್ಣೀರಿನ ಅಶ್ರುತರ್ಪಣ
ಸೂರನಹಳ್ಳಿಯಲ್ಲಿ ಸುಧಾಕರ್ ನೆನೆದು ಕಣ್ಣೀರು