ಕನ್ನಡಪ್ರಭ ವಾರ್ತೆ ಪುತ್ತೂರುತಾಲೂಕಿನ ಕೊಡಿಪ್ಪಾಡಿ ಸರ್ಕಾರಿ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಶಾಲೆಯ ಮುಂಭಾಗದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಎಸ್‌ಡಿಎಂಸಿ ಸದಸ್ಯ ಅದ್ದು ಕೊಡಿಪ್ಪಾಡಿ, ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿಯಾಗಿದೆ. ಮುಖ್ಯ ಶಿಕ್ಷಕರನ್ನು ಕೊಡಿ ಎಂದು ಹಲವು ಬಾರಿ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಶತಮಾನೋತ್ಸವ ಆಚರಣೆಯ ಜವಾಬ್ದಾರಿ ತೆಗೆದುಕೊಂಡಿರುವ ಇಬ್ಬರು ಶಿಕ್ಷಕರ ಹೆಸರು ಕೌನ್ಸಿಲಿಂಗ್ ಲಿಸ್ಟ್‌ನಲ್ಲಿದೆ. ಅವರು ಕೌನ್ಸಿಲಿಂಗ್‌ಗೆ ಹೋಗಲೇಬೇಕಾಗುತ್ತದೆ. ಇದರಿಂದ ನಮ್ಮಲ್ಲಿ ಇಬ್ಬರು ಶಿಕ್ಷಕರು ಮತ್ತೆ ಕಡಿಮೆಯಾಗಲಿದ್ದಾರೆ. ಹಾಗಾಗಿ ಅವರ ಹೆಸರನ್ನು ಈ ಲಿಸ್ಟ್‌ನಿಂದ ತೆಗೆಯಬೇಕು ಎಂದು ಆಗ್ರಹಿಸಿದರು.ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲಾ ಎಸ್‌ಡಿಎಂಸಿ ಮತ್ತು ಪೋಷಕರು, ಪುತ್ತೂರು ಶಾಸಕ ಅಶೋಕ್ ರೈ ಮತ್ತು ಪುತ್ತೂರು ಕ್ಷೇತ್ರಶಿಕ್ಷಣಾಧಿಕಾರಿ ಅವರಿಗೆ ಮನವಿ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷ ಸೋಮಪ್ಪ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಉಪಾಧ್ಯಕ್ಷೆ ಸಫಾನಾ, ಗಿರೀಶ್, ರಹೀಂ ಆನಾಜೆ, ರಾಮ ಜೋಯಿಸ್, ರಹೀಮ್, ಮಹಾಬಲ ಗಡಿಯಾರ ಸಹಿತ ಮಕ್ಕಳ ಪೋಷಕರು ಭಾಗವಹಿಸಿದ್ದರು.