ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿ

KannadaprabhaNewsNetwork | Published : Dec 20, 2024 12:47 AM

ಸಾರಾಂಶ

ಇಂದು ಅತಿ ಹೆಚ್ಚು ಸಾಧನೆ ಮಾಡಿದವರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿದ್ದಾರೆ

ಮುಂಡರಗಿ: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಸರ್ಕಾರ ಬಿಸಿಯೂಟ, ಮೊಟ್ಟೆ, ಹಾಲು, ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಅನೇಕ ಸೌಲಭ್ಯ ನೀಡುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸೌಲಭ್ಯವುಳ್ಳ ಸರ್ಕಾರಿ ಶಾಲೆಗೆ ಕಳಿಸಬೇಕು ಎಂದು ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್.ಹೇಳಿದರು.

ಅವರು ಗುರುವಾರ ಪಟ್ಟಣದ‌ ಎಂ.ಸಿ. ಎಸ್.ಶಾಲೆ ಆವರಣದಲ್ಲಿ ಜಿಪಂ ಗದಗ, ತಾಪಂ ಮುಂಡರಗಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮುಂಡರಗಿ ಆಶ್ರಯದಲ್ಲಿ ಮುಂಡರಗಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಇಲಾಖೆ 2002 ರಿಂದ ಪ್ರತಿಭಾ ಕಾರಂಜಿ ಪ್ರಾರಂಭಿಸಿದ್ದು,ಇದರಿಂದ ಇಲ್ಲಿಯವರೆಗೆ ಲಕ್ಷಾಂತರ ಮಕ್ಕಳು ಪ್ರತಿಭಾವಂತರಾಗಿ ಹೊರ ಹೊಮ್ಮಿದ್ದಾರೆ. ಮಗುವಿಗೆ ಅಂಕ ಹಾಗೂ ರ್‍ಯಾಂಕ್‌ ಅಷ್ಟೇ ಮುಖ್ಯವಲ್ಲ, ಪ್ರತಿ ಮಗು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಪ್ರತಿಭಾ ಕಾರಂಜಿಯಲ್ಲಿ ಯಶಸ್ವಿಯಾಗಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಬೇಕು ಎಂದರು.

ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಕಲೋತ್ಸವ ಉದ್ಘಾಟಿಸಿ ಮಾತನಾಡಿ, ಇಂದು ಅತಿ ಹೆಚ್ಚು ಸಾಧನೆ ಮಾಡಿದವರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿದ್ದಾರೆ. ನಿಮ್ಮಲ್ಲಿಯೂ ಆ ಪ್ರತಿಭೆ ಇದ್ದು, ನೀವು ಉನ್ನತವಾದ ಸಾಧನೆ ಮಾಡಬೇಕು. ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು ಎನ್ನುವಂತೆ ತಾಯಿಯಷ್ಟೇ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಕರೆತಂದು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಬಿಇಒ ಎಚ್.ಎಂ. ಪಡ್ನೇಶಿ ಮಾತನಾಡಿ, ಮಕ್ಕಳಲ್ಲಿನ ಸೃಜನಶೀಲತೆ, ಪ್ರತಿಭೆಯ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಉಳಿಸಿ-ಬೆಳೆಸುವ ಕಾರ್ಯ ಈ ಪ್ರತಿಭಾ ಕಾರಂಜಿ ಮಾಡುತ್ತದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ‌. ಮೋರನಾಳ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಕಾರಂಜಿಯಾಗಿ ಹೊರಹೊಮ್ಮಲಿ ಎನ್ನುವುದು ಈ ಪ್ರತಿಭಾ ಕಾರಂಜಿಯ ಉದ್ದೇಶ. ಜತೆಗೆ ಮಕ್ಕಳಿಗೆ ನಮ್ಮ ಗ್ರಾಮೀಣ ಕಲೆ ಪರಿಚಯಿಸುವುದಕ್ಕೆ ಇದೊಂದು ವೇದಿಕೆಯಾದಂತಾಗಿದೆ. ಮಕ್ಕಳು ಈ‌ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಬೇಕು‌ ಎಂದರು.

ಪುರಸಭೆ ಸದಸ್ಯ ಕವಿತಾ ಉಳ್ಳಾಗಡ್ಡಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜಾಸಾಬ್‌ ಬೆಟಗೇರಿ, ಹೇಮಗಿರೀಶ ಹಾವಿನಾಳ, ಡಾ.ನಿಂ.ಗು. ಸೊಲಗಿ, ನಾಗರಾಜ ಹಳ್ಳಿಕೇರಿ, ಶಿವಕುಮಾರ ಸಜ್ಜನರ, ಎ.ಡಿ. ಬಂಡಿ, ಪಿ.ಡಿ. ಹಿರೇಮಠ, ಕಾಶೀನಾಥ, ಎಚ್.ಜೆ.ಪವಾರ, ಎಂ.ಎಂ.ಬಂಡಿ, ವಿಶ್ವನಾಥ ಉಳ್ಳಾಗಡ್ಡಿ, ದಿನೇಶ ನಾಯಕ, ಬಸವಣ್ಣೆಪ್ಪ. ಎಸ್.ಸಿ.ಹರ್ತಿ, ಜಗದೀಶ ಗುಳ್ಳಾರಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಬಿಆರ್‌ಸಿ ಸಮನ್ವಯಾಧಿಕಾರಿ ಗಂಗಾಧರ ಅಣ್ಣೀಗೇರಿ ಸ್ವಾಗತಿಸಿ, ಎನ್.ಎಂ. ಕುಕನೂರು ನಿರೂಪಿದರು.

Share this article