ಮುಂಡರಗಿ: ಪಾಲಕರು ತಮ್ಮ ಮಕ್ಕಳಿಗೆ ಮುಖ್ಯವಾಗಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಮಕ್ಕಳ ಜತೆಗೆ ಪಾಲಕರು ಹೆಚ್ಚು ಸಮಯವನ್ನು ಕಳೆಯುವ ಮೂಲಕ ಅವರನ್ನು ಸದ್ಗುಣ, ಸದ್ವಿಚಾರದಿಂದ ಬೆಳೆಸುವ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗುತ್ತಿರುವ ಶಿವಶರಣ ಚರಿತ್ರಾಮೃತ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ಮಾತನಾಡಿದರು.
ಕಲಬುರಗಿ ಕೊಳ್ಳೂರು ಶಿವಲಿಂಗೇಶ್ವರ ಮಠದ ಮೃತ್ಯುಂಜಯ ದೇವರು ಪ್ರವಚನ ನೀಡಿ, ಮನುಷ್ಯ ಅನ್ನ, ಆಹಾರ, ಗಾಳಿಗೆ ಹೆಚ್ಚು ಬೆಲೆ ನೀಡಿ ಗೌರವಿಸಿ ಬಾಳಬೇಕು. ಸಾವಿನ ನಂತರ ನಮ್ಮೊಂದಿಗೆ ಧನ, ಕನಕಗಳು ಬರುವುದಿಲ್ಲ. ಅವುಗಳನ್ನು ಬೆನ್ನು ಹತ್ತಬಾರದು. ಪ್ರಸಾದಕ್ಕೆ ತನ್ನದೆ ಆದ ಶಕ್ತಿ ಇದೆ. ಪ್ರಸಾದ ಕೆಡಿಸಬಾರದು. ತಮ್ಮ ಕೈಲಾದ ಅನ್ನದಾಸೋಹ ಮಾಡಬೇಕು ಎಂದರು.ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಡಾ. ಕುಮಾರಸ್ವಾಮಿ ಹಿರೇಮಠ, ಪ್ರವಚನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಸವರಾಜ ಸಿದ್ದಣ್ಣವರ ಮತ್ತು ನಾಗಭೂಷಣ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಶಿಕ್ಷಕರಾದ ಲೀಲಾ ಉಮಚಗಿ, ಎಸ್.ಎಸ್. ಮಠದ ಕಾರ್ಯಕ್ರಮ ನಡೆಸಿಕೊಟ್ಟರು.
ಗದಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಾಯಿತ ಫಲಾನುಭವಿ ರೈತರಲ್ಲಿ ಬಾಕಿ ಇರುವ ಇ- ಕೆವೈಸಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲೆಯ ಎಲ್ಲ ರೈತರಿಗೆ ತಿಳಿಸಲಾಗಿದೆ. ರೈತರು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಥವಾ ಫೇಸ್ ಆಥೆಂಟಿಕೇಶನ್ ಸೌಲಭ್ಯದ ಮೂಲಕ ಇ- ಕೆವೈಸಿ ಪೂರ್ಣಗೊಳಿಸಬಹುದು.ಇ- ಕೆವೈಸಿ ಪ್ರಕ್ರಿಯೆಯನ್ನು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಮೊಬೈಲ್ ಆ್ಯಪ್ ಮೂಲಕವೇ ಕೈಗೊಳ್ಳುವಂತೆ ಹಾಗೂ ಅಪರಿಚಿತ ಲಿಂಕ್‌ಗಳು ಮತ್ತು ಆ್ಯಪ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಕೆಲವು ವಂಚಕರು ಪಿಎಂ ಕಿಸಾನ್ ಇ-ಕೆವೈಸಿ ಹೆಸರಿನಲ್ಲಿ ನಕಲಿ ಎಪಿಕೆ ಫೈಲ್‌ಗಳು ಹಾಗೂ ಅನುಮಾನಾಸ್ಪದ ಲಿಂಕ್‌ಗಳನ್ನು ಕಳುಹಿಸಿ ವಂಚಿಸಲು ಪ್ರಯತ್ನಿಸಬಹುದು. ಆದರೆ ಗದಗ ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.ರೈತರು ಮುನ್ನೆಚ್ಚರಿಕೆ ವಹಿಸಿ ಇಂತಹ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡದೆ, ಒಟಿಪಿ ಹಾಗೂ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದೆ, ಕೆವೈಸಿಯನ್ನು ಸಾಮಾನ್ಯ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್‌ಗಳ ಮೂಲಕ ಮಾಡುವಂತೆ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.