ಶ್ರೀ ಜಗದ್ಗುರು ಪುರುಷೋತ್ತಮಾನಂದ ಸ್ವಾಮಿ ಎಜುಕೇಷನ್ ಟ್ರಸ್ಟ್ ನಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕನ್ನಡಪ್ರಭ ವಾರ್ತೆ, ಬೀರೂರು
ಪ್ರತಿಭೆ ಯಾರ ಸ್ವತ್ತೂ ಅಲ್ಲ, ಆದರೆ ಅದನ್ನು ಗುರುತಿಸುವುದು ಮುಖ್ಯ. ಪೋಷಕರು ತಮ್ಮ ಮಕ್ಕಳ ಬೆಳವಣಿಗೆಗಾಗಿ ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಶ್ರೀ ಜಗದ್ಗುರು ಪುರುಷೋತ್ತಮಾನಂದ ಸ್ವಾಮಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ವಿ.ಅಶೋಕ್ ಹೇಳಿದರು.ಪಟ್ಟಣದ ಉಪ್ಪಾರ ಕ್ಯಾಂಪ್‌ನ ರಾಮಮಂದಿರದ ಆವರಣದಲ್ಲಿ ಉಪ್ಪಾರ ಸಮಾಜ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಪರಿಕರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿಯೂ ಗೊಂದಲವಿದ್ದು, ಸರಿಯಾದ ಮಾರ್ಗದರ್ಶನ ಮತ್ತು ಗುರಿ ಅಗತ್ಯವಿದೆ. ಅವಕಾಶಗಳನ್ನು ಹುಡುಕಿ ಕೊಂಡು ಹೋಗಿ ಸಾಧನೆ ಮಾಡಬೇಕು. ಮಕ್ಕಳಲ್ಲಿ ಶ್ರದ್ಧೆ, ನ್ಯಾಯ, ವಿಧೇಯ ಗುಣಗಳನ್ನು ಕಲಿಸಿ ಸೋಲನ್ನು ಗೆಲುವಿನ ಸೋಪಾನವಾಗಿಸಿಕೊಳ್ಳುವತ್ತ ಕೊಂಡೊಯ್ಯುವ ಮತ್ತು ಸಾಮಾಜಿಕ ಕಳಕಳಿ ಬೆಳೆಸುವ ವ್ಯವಸ್ಥೆ ಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಎನ್.ಲೋಹಿತ್ ಮಾತನಾಡಿ, ಇಂದು ಹೆಚ್ಚು ಬುದ್ಧಿಮತ್ತೆಯ ಸಮಾಜದಿಂದ ಸ್ಪರ್ಧಾತ್ಮಕ ಜಗತ್ತು ನಿರ್ಮಾಣವಾಗಿದೆ. ಪರಿಶ್ರಮ, ಆತ್ಮವಿಶ್ವಾಸದಿಂದ ಬದುಕಿ, ಪೋಷಕರ ಶ್ರಮ ಅರಿತು ಭವಿಷ್ಯದ ಚಿಂತನೆ ನಡೆಸಿ ಎಂದು ಕಿವಿಮಾತು ಹೇಳಿದರು.ಸಾಧನೆಗೆ ಬಡತನ ಅಡ್ಡಿಯಾಗಬಾರದು. ಇಂದಿನ ದಿನಗಳಲ್ಲಿ ಶಿಕ್ಷಣ ದುಬಾರಿಯಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಗಳಿಸಲು ಮತ್ತು ಸ್ಪರ್ಧಾತ್ಮಕ, ಶೈಕ್ಷಣಿಕ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವಂತಾಗಲು ತರಬೇತಿ ನೀಡುವ ಮೂಲಕ ಸ್ಫರ್ಧೆಗೆ ಮಕ್ಕಳನ್ನು ಅಣಿಗೊಳಿಸಿ ಎಂದರು.
ಟ್ರಸ್ಟ್ ನ ಹಿರಿಯ ಸದಸ್ಯ ಮಧು ಬಾವಿಮನೆ ಮಾತನಾಡಿ, ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನು ಸಮಾಜಕ್ಕೆ ಆಸ್ತಿಯನ್ನಾಗಿಸಿ, ಅವರ ಸಾಮಥ್ಯಕ್ಕೆ ತಕ್ಕಂತೆ ಕಲಿಕೆಗೆ ಪ್ರೋತ್ಸಾಹ ನೀಡಿ ಅನರ್ಥ ಗಳನ್ನು ತಪ್ಪಿಸಿ, ಸಂಕುಚಿತ ಮನೋಭಾವ ತೊರೆದು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ. ಉಪ್ಪಾರ ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಳೆದ ಹಲವು ವರ್ಷಗಳಿಂದ ನಡೆಸುತ್ತಾ ಬಂದಿದ್ದು, ವಿದ್ಯಾರ್ಥಿಗಳಾದ ನಿಮ್ಮ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆದು ಸಮಾಜದಲ್ಲಿ ಉನ್ನತ ಸ್ಥಾನಗಳಿಸಿ ಎಂದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಉಪ್ಪಾರ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ನ ಬಿ.ಎಚ್. ರವಿ, ಬಿ.ಸಿ.ಪ್ರಕಾಶ್, ಬಿ.ಎಂ.ಚಂದ್ರಶೇಖರ್ ಸೇರಿದಂತೆ ಉಪ್ಪಾರ ಸಮಾಜದ ಮುಖಂಡರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.29 ಬೀರೂರು 1
ಬೀರೂರಿನ ಉಪ್ಪಾರ ಕ್ಯಾಂಪ್‌ನ ರಾಮಮಂದಿರದ ಆವರಣದಲ್ಲಿ ಉಪ್ಪಾರ ಸಮಾಜ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಪರಿಕರ ವಿತರಣಾ ಸಮಾರಂಭದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸ ಲಾಯಿತು.