ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೋಷಕರು ಪ್ರೋತ್ಸಾಹ ನೀಡಬೇಕು, ಆದರೆ, ಇಂತಹದ್ದೇ ವಿಷಯವನ್ನು ಆಯ್ಕೆ ಮಾಡಿ ಓದುವಂತೆ ಯಾವುದೇ ಕಾರಣಕ್ಕೂ ಒತ್ತಡ ಹೇರಬಾರದು ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ಪಿ.ದಿನೇಶ್ ಕುಮಾರ್ ಅವರು ಸಲಹೆ ನೀಡಿದ್ದಾರೆ.ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಹುದ್ದೆಯನ್ನು ಅಲಂಕರಿಸಲು ಎಲ್ಲರಿಗೂ ಸಾಮರ್ಥ್ಯ ಇದೆ, ಆದರೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು. ಆ ಭಾವನೆಯನ್ನು ಪೋಷಕರು ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.ಪೋಷಕರು ಮಕ್ಕಳಿಗೆ ಡಾಕ್ಟರ್, ಇಂಜಿನಿಯರ್ ಗಳಾಗುವಂತೆ ಒತ್ತಡ ಹೇರದೆ ಅವರ ಆಸಕ್ತಿಯ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಬೇಕು. ಒತ್ತಡ ಹೇರುವುದರಿಂದ ಮಕ್ಕಳು ಮಾನಸಿಕವಾಗಿ ಕುಸಿದು ಹೋಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು:ನಾವು ಏನನ್ನಾದರು ಸಾಧಿಸಬೇಕಾದರೆ ಒಳ್ಳೆಯ ದಾರಿಯಲ್ಲೇ ಸಾಗಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಕಾನೂನು ಪಾಲನೆ ಮಾಡಬೇಕು, ದುಶ್ಚಟಗಳನ್ನು ಬೆಳೆಸಿಕೊಳ್ಳದೆ ಉತ್ತಮ ಸ್ನೇಹಿತರನ್ನು ಸಂಪಾದಿಸಬೇಕು. ನಿಷ್ಠೆ, ಕಠಿಣ ಪರಿಶ್ರಮ ಇದ್ದರೆ ಮಾತ್ರ ಸಮಾಜದಲ್ಲಿ ಗೌರವವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಗೆ ದಾಸರಾಗದೆ ವಿದ್ಯಾರ್ಥಿ ಜೀವನದಿಂದಲೇ ಸಮಾಜ ಸೇವೆಯನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ವಾಟ್ಸಪ್ ಯೂನಿವರ್ಸಿಟಿ ವಿದ್ಯಾರ್ಥಿಗಳನ್ನು ಆವರಿಸಿಕೊಂಡಿದೆ. ಬೆಳೆಯುತ್ತಿರುವ ತಂತ್ರಜ್ಞಾನವು ಅನುಕೂಲ ಮತ್ತು ಅನಾನುಕೂಲ ಎರಡನ್ನೂ ಹೊಂದಿದೆ, ಆದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಯಾವುದೇ ಮಾಹಿತಿಯನ್ನು ಸ್ವೀಕರಿಸುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳಬೇಕು ಎಂದು ದಿನೇಶ್ ಕುಮಾರ್ ತಿಳಿಸಿದರು.ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಂಗಾರು ಆರ್.ನಾಣಯ್ಯ ಅವರು ಮಾತನಾಡಿ, ಗ್ರಾಮೀಣ ಜನರ ಸಮಸ್ಯೆಯನ್ನು ಅರಿತು ಸಮುದಾಯ ಬಾಂಧವರ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಹಿರಿಯರ ಉದಾತ್ತ ಚಿಂತನೆಗಳ ಫಲವಾಗಿ 1908ರಲ್ಲಿ ಕೊಡಗು ವಿದ್ಯಾಸಂಘ ಅಸ್ತಿತ್ವಕ್ಕೆ ಬಂದಿದೆ. ಅಂದಿನಿಂದ ಇಂದಿನವರೆಗೆ ಸಮುದಾಯದ ಅಭಿವೃದ್ಧಿಗಾಗಿ ದುಡಿದ ಅನೇಕ ಸಾಧಕರಿದ್ದಾರೆ, ಜನಾಂಗದ ಪ್ರತಿಷ್ಠೆಗೆ ಪಾತ್ರರಾಗಿದ್ದಾರೆ. ಅವರ ಕೊಡುಗೆಯನ್ನು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.
ವಿದ್ಯೆ ಎನ್ನುವುದು ವಸ್ತುವಲ್ಲ:ವಿದ್ಯೆ ಎನ್ನುವುದು ವಸ್ತುವಲ್ಲ, ಯಾರೂ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರಯತ್ನಿಸಬೇಕು ಎಂದರು.
ಜಿಲ್ಲೆಯ ಸಾಕಷ್ಟು ಸರ್ಕಾರಿ ಶಾಲೆಗಳು ಕ್ಷೀಣಿಸುತ್ತಿದ್ದು, ವಿದ್ಯಾರ್ಥಿಗಳ ಕೊರತೆ ಕಾಣುತ್ತಿದೆ. ಸರ್ಕಾರಿ ಶಾಲೆಗಳು ನಶಿಸಿ ಹೋಗಬಾರದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕಂಪ್ಯೂಟರ್ ಸೆಂಟರ್, ಗ್ರ‍್ರಂಥಾಲಯ ಸೇರಿದಂತೆ ಉತ್ತಮ ಯೋಜನೆಗಳನ್ನು ರೂಪಿಸಿಕೊಂಡು ಶಾಲೆಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸುವಂತಾಗಬೇಕು ಎಂದು ತಿಳಿಸಿದರು.ಕೊಡಗು ವಿದ್ಯಾಸಂಘ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗೌರವಿಸಿ, ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಜನಾಂಗ ಬಾಂಧವರು ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸುವಂತಾಗಬೇಕು ಎಂದು ಹೇಳಿದರು.
ಕಾಫಿ ಬೆಳೆಗಾರರಾದ ತಳೂರು ಯಶೋಧ ಸೋಮಣ್ಣ ಮಾತನಾಡಿ, ಪ್ರತಿಭಾ ಪುರಸ್ಕಾರದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿರುವುದು ಹೆಮ್ಮೆ ಎನಿಸಿದೆ. ಮುಂದೆ ಉನ್ನತ ಸಾಧನೆ ಮಾಡಿ ಸಮುದಾಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದರು.ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜ್ ನ ನಿವೃತ್ತ ಪ್ರಾಂಶುಪಾಲೆ ಆನೇರ ಜಾನಕಿ ಮೋಹನ್ ಮಾತನಾಡಿ, ಗೌಡ ಸಮುದಾಯದ ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಬೇಕು. ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರವನ್ನು ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಿ, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಜನಾಂಗ ಬೆಳೆಯಲು ಸಾಧ್ಯ:ಭಾಷೆ ಬೆಳೆದರೆ ಮಾತ್ರ ಜನಾಂಗ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇತಿಹಾಸ, ಪರಂಪರೆ, ಆಚಾರ, ವಿಚಾರವನ್ನು ತಿಳಿದುಕೊಳ್ಳಬೇಕು ಮತ್ತು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಮೈಸೂರು ಮಹಾರಾಜ ಕಾಲೇಜ್ ನ ನಿವೃತ್ತ ಪ್ರಾಂಶುಪಾಲ ಚೆರಿಯಮನೆ ಬಿ.ರಾಮಚಂದ್ರ ಅವರು ಮಾತನಾಡಿ, ಗುರಿಯನ್ನು ಮಾನವ ನಿರ್ಧರಿಸಬಲ್ಲ, ಗುರಿ ವ್ಯಕ್ತಿಗೆ ಸ್ಪಷ್ಟತೆ, ಪ್ರೇರಣೆ, ಶ್ರದ್ಧೆ ಮತ್ತು ಸಾಧನೆಗೆ ಪಥವನ್ನೊದಗಿಸುತ್ತದೆ. ಶಿಸ್ತು, ಬದ್ಧತೆ, ಛಲ ಸಾಧನೆಯ ಹಾದಿಗೆ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜ್ ನ ನಿವೃತ್ತ ಪಾಂಶುಪಾಲೆ ನಿಡ್ಯಮಲೆ ದೇವಕಿ ಅವರು ಮಾತನಾಡಿ, ಶಿಕ್ಷಣವೆನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅಗತ್ಯ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.
ಸಾಧನೆಯ ಹಾದಿ ಸುಗಮವಲ್ಲ, ಸಾಧನೆ ಮಾಡಬೇಕಾದರೆ ದೃಢ ಸಂಕಲ್ಪ, ಗುರಿ, ಛಲ ಇರಬೇಕು. ಪೋಷಕರು ಮನೆಯಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸಬೇಕು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ, ಅದನ್ನು ಹೊರ ಹಾಕಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರು, ಕೊಡಗು ಗೌಡ ವಿದ್ಯಾ ಸಂಘದಿಂದ ಕಳೆದ 50 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ, ವಿದ್ಯಾ ಸಂಘ 117ನೇ ವರ್ಷದ ಸಂಭ್ರಮದಲ್ಲಿದೆ. ವಿದ್ಯಾ ಸಂಘದ ಜಾಗದಲ್ಲಿ ಗೌಡ ಸಮೂಹ ಬಾಂಧವರ ಅಗತ್ಯತೆಗಳಿಗೆ ಅನುಗುಣವಾಗಿ ನೂತನ ಕಟ್ಟಡ ನವೀಕರಣಗೊಳ್ಳುತ್ತಿದೆ. ಸಮೂಹ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯ ಸಹಕಾರ ನೀಡಿದರೆ ನಿಗಧಿಯಂತೆ ಕಟ್ಟಡದ ಯೋಜನೆ ಪೂರ್ಣಗೊಳ್ಳಲಿದೆ. ಆದ್ದರಿಂದ ದಾನಿಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಕಾಳೇರಮ್ಮನ ಲತಾ ನಂದಕುಮಾರ್, ನಿರ್ದೇಶಕರಾದ ತಳೂರು ಕೆ.ದಿನೇಶ್ ಕುಮಾರ್, ಸೂದನ ಎಸ್.ಈರಪ್ಪ, ದೇವಂಗೋಡಿ ಎನ್.ಹರ್ಷ, ಮೂಲೆಮಜಲು ಎಂ.ಮನೋಜ್ ಕುಮಾರ್, ಕೆದಂಬಾಡಿ ಕಾಂಚನ ಕೀರ್ತನ್, ಪಾಂಡನ ಪುಷ್ಪವೇಣಿ ಪ್ರಕಾಶ್, ಪುದಿಯನೆರವನ ಯು.ಬಸಪ್ಪ, ನಾಮನಿರ್ದೇಶಿತ ನಿರ್ದೇಶಕ ಪೊನ್ನೆಟ್ಟಿ ಬಿ.ನಂದ ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್ 2024-25ನೇ ಸಾಲಿನ ವರದಿ ವಾಚಿಸಿದರು. ಕೇಡನ ಪ್ರಗತಿ ಪ್ರಾರ್ಥಿಸಿ, ಚೊಕ್ಕಾಡಿ ಅಪ್ಪಯ್ಯ ಸ್ವಾಗತಿಸಿ, ನಿರ್ದೇಶಕರಾದ ಪರಿಚನ ಟಿ.ಸತೀಶ್, ದುಗ್ಗಳ ಡಿ.ಕಪಿಲ್ ಕುಮಾರ್ ನಿರೂಪಿಸಿದರು. ಉಪಾಧ್ಯಕ್ಷ ಅಮೆ ಸಿ.ಸೀತಾರಾಮ್ ವಂದಿಸಿದರು.ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ:
ಕಾರ್ಯಕ್ರಮದಲ್ಲಿ 10ನೇ ತರಗತಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ, ಸಿಇಟಿ, ನೀಟ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸೂದನ ಧನ್ಯಶ್ರೀ, ಐ.ಡಿ.ಧೃತಿ ಹಾಗೂ ಪಿ.ಡಿ.ದೀಪ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.