ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕಲೆ, ಸಂಗೀತ, ನಾಟಕ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳನ್ನು ಪೋಷಕರು ಪ್ರೋತ್ಸಾಹಿಸಬೇಕು ಎಂದು ಪಾಂಡವಪುರ ತಹಸೀಲ್ದಾರ್ ಸಂತೋಷ್ ತಿಳಿಸಿದರು.ಎಸ್ ಇಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ದೃಶ್ಯ ಟ್ರಸ್ಟ್ ಮತ್ತು ಅರವು ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿಗರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಜೀವನಕ್ಕೆ ಓದು ಎಷ್ಟುಮುಖ್ಯವೋ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳೂ ಅಷ್ಟೇಮುಖ್ಯ ಎಂದರು.
ಸದಾ ಮನಸ್ಸು ಉಲ್ಲಸಿತವಾಗಲು ಮಕ್ಕಳು ಚಿತ್ರಕಲೆ ನಾಟಕ ಸಂಗೀತ ಮುಂತಾದ ತೊಡಗಿಸಿಕೊಳ್ಳಬೇಕು. ಸಾಂಸ್ಕೃತಿಕ ಕಲಿಕೆ ಮಕ್ಕಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಪೋಷಕರು ಪ್ರಚಾರ ಮತ್ತು ಸ್ಪರ್ಧೆಗಾಗಿ ಮಾತ್ರ ಮಕ್ಕಳನ್ನು ತಯಾರು ಮಾಡುವ ಬದಲು ನಿಜವಾದ ಕಲಿಕೆಯನ್ನು ಒದಗಿಸಿಕೊಡಬೇಕು. ಕಲೆಯ ಪೋಷಣೆಗಾಗಿ ಮಕ್ಕಳನ್ನು ತಯಾರು ಮಾಡಬೇಕಿದೆ ಎಂದರು.ಇತ್ತೀಚೆಗೆ ಮಕ್ಕಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ದೊರೆಯುವುದೇ ಅಪರೂಪ. ಸಿಗುವ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಲೆ, ಸಾಹಿತ್ಯ ಸಂಸ್ಕೃತಿಯ ಉತ್ತೇಜನಕ್ಕಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದರೆ ಮಾತ್ರ ನಮ್ಮ ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ.ನಂದೀಶ್ ಮಾತನಾಡಿ, ಮಕ್ಕಳಪ್ರತಿಭೆಗೆ ವೇದಿಕೆ ಕಲ್ಪಸಲು ಕನ್ನಡಸಂಸ್ಕೃತಿ ಇಲಾಖೆ ಚಿಗುರು ಕಾರ್ಯಕ್ರಮ ರೂಪಿಸಿ 8 ರಿಂದ 14ವರ್ಷ ವಯೋಮಾನದ ಶಾಲಾಮಕ್ಕಳಿಗೆ ಮೂರು ವಿಭಾಗದಲ್ಲಿ ಪ್ರತಿಭೆಗೆ ಅವಕಾಶ ಕಲ್ಪಿಸುತ್ತಿದೆ. ಒಂದು ವಿಭಾಗದಲ್ಲಿ 5 ತಂಡಗಳು ಪ್ರದರ್ಶನ ನೀಡಲು ಅವಕಾಶವಿದೆ. ಭಾಗವಹಿಸುವ ತಂಡಗಳಿಗೆ ಗೌರವ ಸಂಭಾವನೆ ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಮಂಡ್ಯ ಬಾಲ ಕಲಾವಿದರಿಂದ ನಗಾರಿ ಮೇಳ, ವಿಕಸನಮಕ್ಕಳಿಂದ ಬೊಮ್ಮನಹಳ್ಳಿ ಕಿಂದರಜೋಜಿ ನಾಟಕ ದೊಡ್ಡಬ್ಯಾಡರಹಳ್ಳಿ ಮಕ್ಕಳಿಂದ ಏಕಪಾತ್ರಾಭಿನಯ ಮಳವಳ್ಳಿ ಮಕ್ಕಳ ತಂಡದಿಂದ ಭರತನಾಟ್ಯ ಸಮೂಹನೃತ್ಯ ಎಸ್.ಇ.ಟಿ ಪಬ್ಲಿಕ್ ಶಾಲೆ ಮಕ್ಕಳಿಂದ ಜನಪದಗೀತೆ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಎಸ್.ಇ.ಟಿ ಪಬ್ಲಿಕ್ ಶಾಲೆ ಆಡಳಿತಾಧಿಕಾರಿ ವೆಂಕಟರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದೃಶ್ಯಟ್ರಸ್ಟ್ ಗಿರೀಶ್, ಮಂಡ್ಯದ ಅರುವು ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್, ವಿಕಸನ ಸಂಸ್ಥೆ ದತ್ತುಜೋಗುಳ ವ್ಯವಸ್ಥಾಪಕಿ ಅನುಸೂಯ, ಶಿಕ್ಷಕ ನಂಜುಂಡಸ್ವಾಮಿ, ಮತ್ತಿತರರು ಭಾಗವಹಿಸಿದ್ದರು.