ಕೇವಲ ಶಿಕ್ಷಕರಿಂದ ಮಾತ್ರ ಮಗುವಿನ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಮಗುವಿನ ಕಲಿಕೆಯಲ್ಲಿ ಪೋಷಕರ ಪಾತ್ರವೂ ಮುಖ್ಯವಾಗಿರುತ್ತದೆ ಎಂದು ಸಿ.ಆರ್.ಪಿ ಚೇತನಕುಮಾರ ಬಣಕಾರ ಹೇಳಿದರು.
ರಟ್ಟೀಹಳ್ಳಿ: ಕೇವಲ ಶಿಕ್ಷಕರಿಂದ ಮಾತ್ರ ಮಗುವಿನ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಮಗುವಿನ ಕಲಿಕೆಯಲ್ಲಿ ಪೋಷಕರ ಪಾತ್ರವೂ ಮುಖ್ಯವಾಗಿರುತ್ತದೆ ಎಂದು ಸಿ.ಆರ್.ಪಿ ಚೇತನಕುಮಾರ ಬಣಕಾರ ಹೇಳಿದರು.
ತಾಲೂಕಿನ ಕುಡಪಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು, ರಾತ್ರಿವೇಳೆ ಸಿರಿಯಲ್‍ಗಳನ್ನು (ಧಾರಾವಾಹಿ) ನೋಡುವುದನ್ನು ಬಿಟ್ಟು ಮಕ್ಕಳ ಓದಿನ ಕಡೆ ಹೆಚ್ಚಿನಗಮನಕೊಡಬೇಕು. ಮಕ್ಕಳು ತಂದೆ ತಾಯಿಗಳನ್ನು ನೋಡಿ ಕಲಿಯುತ್ತಾರೆ. ನಾವೇ ಮೊಬೈಲ್, ಟಿವ್ಹಿ ನೋಡುತ್ತಿದ್ದರೆ ಮಕ್ಕಳೂ ಸಹ ಅದರಕಡೆ ಗಮನಕೊಡುತ್ತಾರೆ. ಮಕ್ಕಳ ಓದಿನ ಸಮಯದಲ್ಲಿ ಮಕ್ಕಳೊಂದಿಗೆ ಕುಳಿತುಕೊಂಡು ಅವರ ಓದಿನ ಬಗ್ಗೆ ಗಮನಹರಿಸಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಪಾಲಕರ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ. ಮಕ್ಕಳಿಗಾಗಿ ಆಸ್ತಿಮಾಡುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು. ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರು ಆಗಾಗ ಶಾಲೆಗೆ ಬಂದು ಶಿಕ್ಷಕರೊಂದಿಗೆ ಸಮಾಲೋಚಿಸಬೇಕು, ಪೋಷಕರ ಸಭೆಯಲ್ಲಿ ಚರ್ಚೆ ನಡೆಸಬೇಕು. ಮಕ್ಕಳ ಕಲಿಕೆಯ ಬಗ್ಗೆ ಚರ್ಚೆಯಾಗಬೇಕು. ಕಾರಣ ಪ್ರತಿಯೊಬ್ಬ ತಂದೆ ತಾಯಿಗಳು ಆದಷ್ಟು ಮೊಬೈಲ್, ಟಿವ್ಹಿಯಿಂದ ದೂರವಿದ್ದು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಗಮನವಹಿಸಬೇಕು ಎಂದರು.ಗ್ರಾ.ಪಂ. ಅಧ್ಯಕ್ಷ ಮಹೇಶ್ವರಗೌಡ ಚಿಗ್ಗೌಡ್ರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿಯೂ ಉತ್ತಮವಾದ ಶಿಕ್ಷಣ ಸಿಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಉತ್ತಮವಾದ ಶಿಕ್ಷಕರು ಇದ್ದಾರೆ. ಸೌಲಭ್ಯಗಳನ್ನು ಸದ್ಬಳಕೆಮಾಡಿಕೊಂಡು ಉತ್ತಮ ಶಿಕ್ಷಣಪಡೆಯಬೇಕು. ಪಾಲಕರಾದ ನಾವುಗಳು ಟಿವಿ, ಮೊಬೈಲ್ ನೋಡುವುದನ್ನು ಬಿಟ್ಟು ಮಕ್ಕಳ ಓದಿನಕಡೆ ಹೆಚ್ಚಿನ ಗಮನಕೊಡಬೇಕೆಂದು ಹೇಳಿದರು. ಮುಖ್ಯ ಶಿಕ್ಷಕರಾದ ಎಂ.ಆರ್. ಮರಿಗೌಡ್ರ, ಎಸ್.ಬಿ. ಬಣಕಾರ, ತಾಯಂದಿರ ಸಮಿತಿ ಅಧ್ಯಕ್ಷರಾದ ಪ್ರಿಯಾಂಕ ಕುಸಗೂರ, ಶಿಕ್ಷಕಿ ಚಂದ್ರಕಲಾ, ಗೀತಾ ಹಿರೇಮಠ ಮಾತನಾಡಿದರು.
ಎಸ್‍ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಯಂದಿರ ಸಮಿತಿಯವರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು,ಸದಸ್ಯರು,ಶಿಕ್ಷಕ-ಶಿಕ್ಷಕಿಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.