ಮಕ್ಕಳಿಗೆ ಪೋಷಕರು ಸಂಸ್ಕೃತಿ, ಸಂಸ್ಕಾರ ಕಲಿಸಬೇಕು

KannadaprabhaNewsNetwork |  
Published : May 11, 2024, 01:30 AM IST
ಹೊನ್ನಾಳಿ ಫೋಟೋ 10ಎಚ್ಎಲ್ಐ2.ಪಟ್ಟಣದ ಹಿರೇಕಲ್ಮಠದಲ್ಲಿ  ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಮತ್ತು ಸಂಸ್ಕತಿ-ಸಂಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ  ಹಿರೇಕಲ್ಮಠ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ನಿಮ್ಮ ಮಕ್ಕಳ ಭವಿಷ್ಯ ಪೋಷಕರಾದ ನಿಮ್ಮ ಕೈಯಲ್ಲಿಯೇ ಇದೆ. ಆದ್ದರಿಂದ ಹೆತ್ತವರು ಜಾಗೃತೆಯಿಂದ ಮಕ್ಕಳ ಲಾಲನೆ, ಪೋಷಣೆ ಮಾಡಬೇಕು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಡಾ.ಚನ್ನಮಲ್ಲಿಕಾರ್ಜುನ ಶ್ರೀ ಸಲಹೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ನಿಮ್ಮ ಮಕ್ಕಳ ಭವಿಷ್ಯ ಪೋಷಕರಾದ ನಿಮ್ಮ ಕೈಯಲ್ಲಿಯೇ ಇದೆ. ಆದ್ದರಿಂದ ಹೆತ್ತವರು ಜಾಗೃತೆಯಿಂದ ಮಕ್ಕಳ ಲಾಲನೆ, ಪೋಷಣೆ ಮಾಡಬೇಕು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಮತ್ತು ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಗು 6 ತಿಂಗಳಿದ್ದಾಗಿನಿಂದಲೇ ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ನೀಡುತ್ತಿದ್ದಾರೆ. ಮಗುವನ್ನು ಮೊಬೈಲ್‍ಗೆ ದಾಸನಾಗುವಂತೆ ಮಾಡುತ್ತಿದ್ದಾರೆ. ಇದರಿಂದ ಮಗುವಿನ ಮನಸು, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲು ಪೋಷಕರೇ ನೇರ ಕಾರಣರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿ ಅಮಾವಾಸ್ಯೆಯಂದು ಹಿರೇಕಲ್ಮಠದಲ್ಲಿ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಅರಿವು ನೀಡಿ, ಉಳಿಸಿ-ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು. ಮಕ್ಕಳು ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ಒದಗಿಸಿ ಕೊಡಲಾಗುತ್ತಿದೆ. ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೇ, ಮಕ್ಕಳ ಹುಟ್ಟುಹಬ್ಬ ಸಹ ಆಚರಿಸಿಕೊಳ್ಳಲು ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಸಾಹಿತಿ ಯು.ಎನ್. ಸಂಗನಾಳಮಠ ಮಾತನಾಡಿ, ಬಸವಣ್ಣ ಅವರು ವೀರಶೈವ ಧರ್ಮದ ಪುನರುದ್ಧಾರ ಮಾಡಿದ ಮಹಾನ್ ವ್ಯಕ್ತಿ. ಕನ್ನಡವನ್ನು ಸಂವಹನ ಭಾಷೆಯನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. 1913ರಲ್ಲಿಯೇ ದಾವಣಗೆರೆಯ ವಿರಕ್ತ ಮಠದಲ್ಲಿ ಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಹರ್ಡೇಕರ್ ಮಂಜಪ್ಪ ಅವರು ಬಸವ ಜಯಂತಿ ಆಚರಿಸಿದ್ದರು ಎಂದು ಮಾಹಿತಿ ನೀಡಿದರು.

ಚನ್ನೇಶ್ವರ ಗಾನ ಕಲಾ ಬಳಗ ಮತ್ತು ಸಂಸ್ಕೃತಿ- ಸಂಸ್ಕಾರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗಂಡವು. ಧಾರ್ಮಿಕ ಸಭೆಯಲ್ಲಿ ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ನಿಜಗುಣ ಶಾಸ್ತ್ರಿ, ಹರಳಹಳ್ಳಿ ಶೇಖರಪ್ಪ, ಕಡದಕಟ್ಟೆ ದಾನಪ್ಪ ಮತ್ತಿತರರು ಉಪಸ್ಥಿತರಿದ್ದರು.

- - -

ಟಾಪ್‌ ಕೋಟ್‌ ಬಸವಾದಿ ಶರಣರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಆಗ ಮಾತ್ರವೇ ಬಸವ ಜಯಂತಿ ಸೇರಿದಂತೆ ಇತರೇ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮಾಡಿದ್ದಕ್ಕೂ ಸಾರ್ಥಕ ಸಿಗಲಿದೆ

- ಯು.ಎನ್‌.ಸಂಗನಾಳಮಠ, ಸಾಹಿತಿ

- - -

-10ಎಚ್ಎಲ್ಐ2:

ಹೊನ್ನಾಳಿ ಹಿರೇಕಲ್ಮಠದ ಕಾರ್ಯಕ್ರಮದಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!