ಅಳುವ ಮಗುವನ್ನು ಕೊಂದ ಪೋಷಕರಿಗೆ ಜೀವಾವಧಿ

KannadaprabhaNewsNetwork |  
Published : Dec 01, 2025, 02:00 AM ISTUpdated : Dec 01, 2025, 11:43 AM IST
High Court

ಸಾರಾಂಶ

  ಅಳುತ್ತಾ ಮನೆಯಿಂದ ಹೊರಗೆ ಹೋಗುವ ಸಮಸ್ಯೆಯಿಂದ ಬಳಲುತ್ತಿದ್ದ ಮಗಳನ್ನು ಸಾಯಿಸಿದ ಹೆತ್ತ ತಾಯಿ ಹಾಗೂ ಮಲತಂದೆಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿರುವ ಹೈಕೋರ್ಟ್‌, ‘ಮಕ್ಕಳು’ ಪೋಷಕರ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಆಸ್ತಿ ಸಹ ಆಗಿರುತ್ತಾರೆ. ಅತ್ಯಂತ ದುರ್ಬಲ ಮಕ್ಕಳ ರಕ್ಷಣೆ ಅತ್ಯಗತ್ಯ ಎಂದು ನುಡಿದಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು :  ಮಧ್ಯರಾತ್ರಿ ಎಚ್ಚರಗೊಂಡು ಅಳುತ್ತಾ ಮನೆಯಿಂದ ಹೊರಗೆ ಹೋಗುವ ಸಮಸ್ಯೆಯಿಂದ ಬಳಲುತ್ತಿದ್ದ ಮಗಳನ್ನು ಸಾಯಿಸಿದ ಹೆತ್ತ ತಾಯಿ ಹಾಗೂ ಮಲತಂದೆಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿರುವ ಹೈಕೋರ್ಟ್‌, ‘ಮಕ್ಕಳು’ ಪೋಷಕರ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಆಸ್ತಿ ಸಹ ಆಗಿರುತ್ತಾರೆ. ಅತ್ಯಂತ ದುರ್ಬಲ ಮಕ್ಕಳ ರಕ್ಷಣೆ ಅತ್ಯಗತ್ಯ ಎಂದು ನುಡಿದಿದೆ.

ಮಕ್ಕಳು ಅತ್ಯಂತ ದುರ್ಬಲ ಹಾಗೂ ಅಸಹಾಯಕರಾಗಿರುತ್ತಾರೆ. ಮಕ್ಕಳ ರಕ್ಷಣೆಗಾಗಿಯೇ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ -2015 ಮತ್ತು ಲೈಂಗಿಕ ಅಪರಾಧ ಕೃತ್ಯಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಎಂಬ ಎರಡು ವಿಶೇಷ ಕಾಯ್ದೆಗಳನ್ನು ಶಾಸಕಾಂಗ ಜಾರಿಗೆ ತಂದಿದೆ. ಬಾಲನ್ಯಾಯ ಕಾಯ್ದೆಯ ಸೆಕ್ಷನ್‌ 75 ಪ್ರಕಾರ ಮಕ್ಕಳ ಮೇಲೆ ಕ್ರೌರ್ಯ ಎಸಗಿದವರಿಗೆ ಮೂರು ವರ್ಷದಿಂದ 10 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆದರೆ, ಮಕ್ಕಳ ಮೇಲಿನ ಕ್ರೌರ್ಯ ಪ್ರಕರಣದಲ್ಲಿ ಪೊಲೀಸರು ಬಾಲನ್ಯಾಯ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸುತ್ತಿಲ್ಲ. ಇದರಿಂದ ಕಾಯ್ದೆ ಜಾರಿಯ ಉದ್ದೇಶವೇ ವಿಫಲವಾಗುತ್ತಿದೆ. ಬಾಲ ನ್ಯಾಯ (ಜೆಜೆ ಆಕ್ಟ್‌) ಕಾಯ್ದೆಯ ಉದ್ದೇಶಗಳನ್ನು ಸಾಧಿಸಲು ಮತ್ತು ಆ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಎಲ್ಲ ಇಲಾಖೆಗಳು ಗಮನಹರಿಸಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಮಗಳ ಕೊಲೆ ಅಪರಾಧದಡಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ ಬೆಂಗಳೂರಿನ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಪಶ್ಚಿಮ ಬಂಗಾಳ ಮೂಲದ ರೇಖಾ ಮಂಡಳ್‌ (33) ಮತ್ತು ಬಿದ್ಯೂತ್‌ ಮಂಡಳ್‌ (33) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಗೋಡೆಗೆ ತಲೆ ಗುದ್ದಿಸಿ ಕೊಲೆ :

ಬಂಗಾಳದ ರೇಖಾ, ಮೊದಲಿಗೆ ದಿನೇಶ್‌ ಎಂಬಾತನನ್ನು ಮದುವೆಯಾಗಿದ್ದರು. ಆ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ನಂತರ ರೇಖಾ ತನ್ನ 2ನೇ ಮಗಳು ಬಬ್ಲಿ (8) ಅನ್ನು ಕರೆದುಕೊಂಡು ಪ್ರಿಯಕರ ಬಿದ್ಯೂತ್‌ ಜೊತೆ ಬೆಂಗಳೂರಿನ ಪೀಣ್ಯಗೆ ಬಂದು, ಪತಿ-ಪತ್ನಿಯಂತೆ ಜೀವಿಸುತ್ತಿದ್ದರು.

ಆದರೆ, ಬಬ್ಲಿ ಮಧ್ಯರಾತ್ರಿಯಲ್ಲಿ ಎದ್ದು, ಅಳುತ್ತಾ ಮನೆಯಿಂದ ಹೊರ ಹೋಗುವ ಸಮಸ್ಯೆಯಿಂದ ಬಳಲುತ್ತಿದ್ದಳು. ಇದೇ ಕಾರಣದಿಂದ ಸುಖ-ನೆಮ್ಮದಿಯಿಂದ ಜೀವಿಸಲಾಗುತ್ತಿಲ್ಲ ಎಂದು ಬಿದ್ಯೂತ್‌ ಆಕ್ರೋಶಗೊಂಡಿದ್ದ. 2016ರ ಜೂ.26ರಂದು ಮಧ್ಯರಾತ್ರಿ 12 ಗಂಟೆಗೆ ಎಚ್ಚರಗೊಂಡು ಮನೆಯಿಂದ ಹೊರಹೋಗಿದ್ದ ಬಬ್ಲಿ ವಾಪಸ್‌ ಬಂದಿರಲಿಲ್ಲ. ಇದರಿಂದ ಬಬ್ಲಿಯನ್ನು ಹುಡುಕಿ ಮನೆಗೆ ವಾಪಸ್‌ ಕರೆತಂದ ರೇಖಾ, ಬಿದ್ಯೂತ್‌ ಮಗುವಿನ ಕೈಗೆ ಮರದ ಹಲಗೆಯಿಂದ ಮಾರಣಾಂತಿವಾಗಿ ಹಲ್ಲೆ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಬಬ್ಲಿ ತಲೆಯನ್ನು ಗೋಡೆಗೆ ಗುದ್ದಿ ಕ್ರೌರ್ಯ ಎಸಗಿದ್ದರು. ಪರಿಣಾಮ 21 ಗಂಭೀರ ಗಾಯ ಉಂಟಾಗಿ, ಮಗು ಸಾವನ್ನಪ್ಪಿತ್ತು. ಪೀಣ್ಯ ಠಾಣಾ ಪೊಲೀಸರು ತನಿಖೆ ನಡೆಸಿ ಕೊಲೆ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನಗರದ 50ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಕೊಲೆ ಅಪರಾಧದಡಿ ರೇಖಾ ಮತ್ತು ಬಿದ್ಯುತ್‌ಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹10000 ದಂಡ ವಿಧಿಸಿ 2018ರ ನ.14ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರೇಖಾ ಮತ್ತು ಬಿದ್ಯುತ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಜೀವಾವಧಿ ಶಿಕ್ಷೆ ಸರಿ:

ಮರಣೋತ್ತರದ ಪರೀಕ್ಷೆಯ ವರದಿಯಲ್ಲಿ ಮೃತ ಮಗುವಿನ ದೇಹದ ಮೇಲೆ 21 ಗಾಯಗಳಿದ್ದವು. ಅವು ಮಗುವನ್ನು ತಾಯಿ-ಮಲತಂದೆ ಬರ್ಬರವಾಗಿ ಹಲ್ಲೆ ನಡೆಸಿರುವುದನ್ನು ಸಾಬೀತುಪಡಿಸುತ್ತವೆ. ಮಕ್ಕಳಿಗೆ ಮನೆಯಿಂದ ಹೊರಗಡೆಯಲ್ಲದೆ ಸ್ವಂತ ಮನೆಯಲ್ಲಿಯೇ ಸುರಕ್ಷತೆ/ರಕ್ಷಣೆ ಇಲ್ಲ ಎಂಬುದನ್ನು ಈ ಪ್ರಕರಣ ತೋರಿಸುತ್ತದೆ. ಇದರಿಂದ ಕೊಲೆ ಮಾಡುವ ಉದ್ದೇಶ ಮತ್ತು ಗಾಯಗಳು ಮಗುವಿನ ಸಾವಿಗೆ ಕಾರಣವಾಗುತ್ತವೆ ಎಂಬ ಅರಿವು ತಮಗೆ ಇರಲಿಲ್ಲ ಎಂಬ ಆರೋಪಿಗಳ ವಾದ ಒಪ್ಪಲಾಗದು. ಅವರಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ : ಡಿಕೆ ಸಿಡಿಮಿಡಿ ! - ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ ?
ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌