ಗುಂಡ್ಲುಪೇಟೆ ಹೆದ್ದಾರಿಯಲ್ಲಿ ವಾಹನಗಳ ಪಾರ್ಕಿಂಗ್‌!

KannadaprabhaNewsNetwork | Published : Nov 10, 2024 1:43 AM

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ಮೂಲಕ ಪ್ರವಾಸಿಗರ ಸಾವಿರಾರು ವಾಹನಗಳು ತೆರಳುವಂತ ಪಟ್ಟಣದ ಪರಿಮಿತಿಯ ಹೆದ್ದಾರಿಯಲ್ಲೇ ವಾಹನಗಳು ನಿಲ್ಲುತ್ತಿವೆ. ಇದು ಅಪಘಾತಕ್ಕೆ ಎಡೆ ಮಾಡಿ ಕೊಡುತ್ತಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಮೂಲಕ ಪ್ರವಾಸಿಗರ ಸಾವಿರಾರು ವಾಹನಗಳು ತೆರಳುವಂತ ಪಟ್ಟಣದ ಪರಿಮಿತಿಯ ಹೆದ್ದಾರಿಯಲ್ಲೇ ವಾಹನಗಳು ನಿಲ್ಲುತ್ತಿವೆ. ಇದು ಅಪಘಾತಕ್ಕೆ ಎಡೆ ಮಾಡಿ ಕೊಡುತ್ತಿದೆ.

ಗುಂಡ್ಲುಪೇಟೆ ತಾಲೂಕು ಕೇಂದ್ರ ಸ್ಥಾನ. ಪೊಲೀಸ್‌ ಠಾಣೆ ಕೂಡ ಇದೆ. ಕಳೆದೆರಡು ವರ್ಷದಿಂಚೀಗೆ ಗುಂಡ್ಲುಪೇಟೆ ಠಾಣೆ ವ್ಯಾಪ್ತಿ ಕುಗ್ಗಿದೆ. ಆದರೆ ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌, ಓರ್ವ ಸರ್ಕಲ್‌ ಇನ್ಸ್‌ಪೆಕ್ಟರ್‌ ಇದ್ರು. ಈಗ ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಇದ್ದಾರೆ. ಜೊತೆಗೆ ನಾಲ್ವರು ಸಬ್‌ ಇನ್ಸ್‌ಪೆಕ್ಟರ್‌ ಇದ್ದಾರೆ. ಆದರೆ ಗುಂಡ್ಲುಪೇಟೆ ಪಟ್ಟಣದ ಪರಿಮಿತಿಯ ಹೆದ್ದಾರಿಯಲ್ಲಿ ವಾಹನಗಳು ನಿಲ್ಲಿಸುವುದನ್ನು ತಪ್ಪಿಸಲು ಸ್ಥಳೀಯ ಪೊಲೀಸರಿಂದ ಆಗಿಲ್ಲ.!

ಗುಂಡ್ಲುಪೇಟೆ ಪಟ್ಟಣದೊಳಗಿನ ಟ್ರಾಫಿಕ್‌ ಸಮಸ್ಯೆ ಅಗಾಧವಾಗಿದೆ. ಜೊತೆಗೆ ಗುಂಡ್ಲುಪೇಟೆ ಪಟ್ಟಣದ ಮೂಲಕವೇ ಪ್ರವಾಸಿಗರು, ದೇಶ, ವಿದೇಶದ ಪ್ರವಾಸಿಗರು, ವಿವಿಐಪಿಗಳು ಬಂದು ಹೋಗುವ ಪಟ್ಟಣದಲ್ಲಿ ಇರುವ ಒಂದು ಜೋಡಿ ರಸ್ತೆಯ ಅಲ್ಲಲ್ಲಿ ವಾಹನಗಳು ಪಾರ್ಕಿಂಗ್‌ ಮಾಡುತ್ತಿದ್ದಾರೆ. ಪಟ್ಟಣದ ಪರಿಮಿತಿಯ ಜೋಡಿ ರಸ್ತೆಯಿದೆ. ಆದರೆ ಸರ್ವೀಸ್‌ ರಸ್ತೆ ಇಲ್ಲದ ಕಾರಣ ಹೆದ್ದಾರಿಯಲ್ಲಿಯೇ ಜನರು ನಡೆದು ಹೋಗುತ್ತಾರೆ. ಹೆದ್ದಾರಿಯಲ್ಲಿ ಬೀದಿ ಬದಿ ವ್ಯಾಪಾರ ಕೂಡ ನಡೆಯುತ್ತಿದೆ. ಇದನ್ನು ಕೇಳಬೇಕಾದ ಪುರಸಭೆ ಆಡಳಿತ ಹಾಗೂ ಪೊಲೀಸರು ಇದ್ದು ಇಲ್ಲದಂತಾಗಿ ಹೋಗಿದ್ದಾರೆ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾದ ಹೊಸದರಲ್ಲಿ ಗುಂಡ್ಲುಪೇಟೆ ಪಟ್ಟಣ ಅಂದವಾಗಿ ಇಡಬೇಕು. ಹೆದ್ದಾರಿಯ ಅಕ್ಕ ಪಕ್ಕ ಸುಂದರವಾಗಿರಬೇಕು ಮತ್ತು ಹೆದ್ದಾರಿ ಬದಿ ವಾಹನಗಳು ನಿಲುಗಡೆ ಬೇಕಾಗಿಲ್ಲ ಎಂದು ಸೂಚನೆ ನೀಡಿ ವರ್ಷಗಳೇ ಕಳೆದರೂ ಶಾಸಕರ ಮಾತಿಗೆ ಪುರಸಭೆ ಆಡಳಿತ ಹಾಗೂ ಪೊಲೀಸ್‌ ಅಧಿಕಾರಿಗಳು ಬೆಲೆ ಕೊಟ್ಟಿಲ್ಲ.

ರಸ್ತೆಯಲ್ಲೇ ಬೈಕ್‌ ನಿಲುಗಡೆ:

ಮೈಸೂರು-ಊಟಿ ಹೆದ್ದಾರಿಯ ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದ ಮುಂದಿನ ಹೆದ್ದಾರಿ, ಸೂರ್ಯ ಬೇಕರಿ, ಬಸ್‌ ನಿಲ್ದಾಣ ಹಾಗೂ ಸಂಗಮ ಪ್ರತಿಷ್ಠಾನದ ಕಟ್ಟಡದ ಮುಂದೆ ನೂರಾರು ಬೈಕ್, ಕಾರುಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ.

ಕಾರ್‌ ನಿಲ್ದಾಣ: ಇನ್ನೂ ದೊಡ್ಡಹುಂಡಿ ಭೋಗಪ್ಪ ಕಾಲೇಜಿನ ಮುಂದೆ ಫುಟ್‌ಪಾತ್‌ ಇದ್ದು ಇಲ್ಲದಂತಾಗಿದೆ. ಫುಟ್‌ಪಾತ್‌ ಸರಿಯಿಲ್ಲ. ಇದರಿಂದ ಕಾರು, ಟೆಂಪೋ ಹೆದ್ದಾರಿಯಲ್ಲಿ ನಿಲ್ಲುವ ಕಾರಣ ಪಾದಚಾರಿಗಳು ಹೆದ್ದಾರಿಯಲ್ಲೇ ನಡೆದುಕೊಂಡು ಬಸ್‌ ನಿಲ್ದಾಣಕ್ಕೆ ಬರುತ್ತಿದ್ದಾರೆ.

ಮಾತಿಗೆ ಸೀಮಿತ:

ಪುರಸಭೆ ಮುಖ್ಯಾಧಿಕಾರಿ ಹಾಗೂ ಪೊಲೀಸರು ಹೆದ್ದಾರಿಯ ವ್ಯಾಪಾರ ಹಾಗೂ ಹೆದ್ದಾರಿಯಲ್ಲಿ ವಾಹನಗಳು ನಿಲ್ಲುವ ಸಂಬಂಧ ಪ್ರಶ್ನಿಸಿದರೆ ಜಂಟಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿ ವರ್ಷಗಳೇ ಉರುಳುತ್ತಿದೆ.

ಪಟ್ಟಣದಲ್ಲಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್‌ ಹಾಗೂ ನಾಲ್ವರು ಸಬ್‌ ಇನ್ಸ್‌ ಪೆಕ್ಟರ್‌ಗಳಿದ್ದರೂ ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಸ್ಥಳೀಯ ಪೊಲೀಸರಿಂದ ಸಾಧ್ಯವಾಗಿಲ್ಲ. ಪಟ್ಟಣದಲ್ಲಿರುವ ಒಂದು ಪ್ರಮುಖ ಹೆದ್ದಾರಿಯಲ್ಲಿ ವಾಹನಗಳು ನಿಲ್ಲಿಸುವುದನ್ನು ತಡೆಗಟ್ಟಲು ಕೆಲ ದಿನಗಳ ಕಾಲ ಮೊದಲಿಗೆ ದಂಡದ ಪ್ರಯೋಗ ಮಾಡಿದರೆ ಹೆದ್ದಾರಿಯಲ್ಲಿ ವಾಹನಗಳು ನಿಲುಗಡೆ ತಪ್ಪಲಿದೆ. ಅಲ್ಲದೆ ಬ್ಯಾಂಕ್‌, ಹೋಟೆಲ್‌, ಬಾರ್‌ಗಳ ಮುಂದೆ ವಾಹನಗಳು ನಿಂತರೆ, ದಂಡ ಹಾಕಿದರೆ ರಸ್ತೆಯ ಬದಿಯಲ್ಲಿ ಪಾದಚಾರಿಗಳು ತಿರುಗಾಡಲು ಅನುಕೂಲವಾಗುತ್ತದೆ. ಆ ಕೆಲಸ ಮಾಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ನಾಗರೀಕರು ದೂರಿದ್ದಾರೆ.

Share this article