ಯುವ ಸಂಸತ್ತು ಕಾರ್ಯಕ್ರಮದಲ್ಲಿ ಗಮನ ಸೆಳೆದ ಸಂಸತ್ತ ಕಲಾಪ

KannadaprabhaNewsNetwork |  
Published : Oct 31, 2026, 02:00 AM IST
ಹೊಸಪೇಟೆ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಮಹಿಳಾ ಸುರಕ್ಷತೆಯಂತಹ ಪ್ರಮುಖ ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಸರ್ಕಾರದ ಗಮನ ಸೆಳೆದರು.

ಹೊಸಪೇಟೆ: ರಾಜ್ಯದ ಜ್ವಲಂತ ಸಮಸ್ಯೆ, ಕಾವೇರಿದ ಚರ್ಚೆ,ಗಲಾಟೆ ಹಾಗೂ ವಿಪಕ್ಷ ನಾಯಕರನ್ನು ಸದನದಿಂದ ಹೊರಹಾಕಿದ ಪ್ರಸಂಗಗಳೊಂದಿಗೆ ಹೊಸಪೇಟೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮವು ಸಂಸತ್ತಿನ ಕಲಾಪ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿತು.

ತಾಲೂಕಾಡಳಿತ, ತಾಪಂ, ನಗರಸಭೆ, ಶಾಲಾ ಶಿಕ್ಷಣ ಇಲಾಖೆ, ಕಾನೂನು ಮತ್ತು ನ್ಯಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಹೊಸಪೇಟೆ ತಾಪಂ ಇಓ ಡಿ.ಅಲಂ ಭಾಷಾ ಅಧ್ಯಕ್ಷತೆ ವಹಿಸಿದ್ದರು.

ಸದನದಲ್ಲಿ ಕಾವೇರಿದ ಚರ್ಚೆ: ಕಾರ್ಯಕ್ರಮದಲ್ಲಿ ಪ್ರೌಢಶಾಲೆ,ಪಿಯು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ಸರ್ಕಾರದ ಕಾರ್ಯದರ್ಶಿ ಹಾಗೂ ಶಾಸಕರ ಪಾತ್ರಗಳನ್ನು ಅತ್ಯಂತ ಪ್ರಬುದ್ಧತೆಯಿಂದ ನಿರ್ವಹಿಸಿದರು.

ರಾಜ್ಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಅನಾವೃಷ್ಠಿ, ಬರ ಪರಿಹಾರ, ಕೃಷಿ, ನೀರಾವರಿ, ಬಡತನ, ನಿರುದ್ಯೋಗ, ಮೂಲಭೂತ ಸೌಲಭ್ಯ, ಯುವಕರ ಸಬಲೀಕರಣ ಹಾಗೂ ಮಹಿಳಾ ಸುರಕ್ಷತೆಯಂತಹ ಪ್ರಮುಖ ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಸರ್ಕಾರದ ಗಮನ ಸೆಳೆದರು.

ಇದಕ್ಕೆ ಆಡಳಿತ ಪಕ್ಷದ ಕಡೆಯಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಿತ ಇಲಾಖೆಗಳ ಸಚಿವರು ಸೂಕ್ತ ಪ್ರತ್ಯುತ್ತರ ನೀಡಿದರು.

ವಿಧೇಯಕ ಮಂಡನೆ: ಸದನದ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ರಾಜ್ಯದಲ್ಲಿ ಚರ್ಚೆಯಲ್ಲಿರುವ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಮಹತ್ವದ ವಿಧೇಯಕ ಸದನದಲ್ಲಿ ಮಂಡಿಸಲಾಯಿತು.

ಗದ್ದಲ, ವಿಪಕ್ಷ ನಾಯಕರಿಗೆ ಗೇಟ್ ಪಾಸ್: ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆ ಮುಂದಿಟ್ಟುಕೊಂಡು ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿದ್ದ ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರನ್ನು ಸದನದಿಂದ ಹೊರಹಾಕಿದ ಘಟನೆಗಳು ಯುವ ಸಂಸತ್ತಿನಲ್ಲಿ ವಿಶೇಷ ಗಮನ ಸೆಳೆದವು.

ಅಂತಿಮವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಬಿರುಸಿನ ಚರ್ಚೆ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ವಿದ್ಯಾರ್ಥಿಗಳಲ್ಲಿ ಪ್ರಜಾಸತಾತ್ಮಕ ಮೌಲ್ಯ ಹಾಗೂ ಸಂಸದೀಯ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವಲ್ಲಿ ಈ ವಿನೂತನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ್ ನಾಗರಾಜ್, ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಪತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಾಜಿಮ ಬಾನು, ನೋಡಲ್ ಅಧಿಕಾರಿ ಪ್ರಾಧ್ಯಾಪಕ ಡಾ.ಬಾಬು ರಾಜೇಂದ್ರ ಪ್ರಸಾದ, ಶಿಕ್ಷಣ ಇಲಾಖೆಯ ಇ.ಸಿ.ಓ ರಾಜು, ಮತ್ತು ಅಬ್ದುಲ್ ಕಲಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವದ ಯಶಸ್ವಿಗೆ ಯುವಕರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಮುಂದೆ ಸಮ ಸಮಾಜ ನಿರ್ಮಾಣಕ್ಕಾಗಿ ಕಾರ್ಯ ಪ್ರವೃತ್ತರಾಗಲು ಈ ಕಾರ್ಯಕ್ರಮ ವೇದಿಕೆಯಾಗಿ ಬಳಸಿಕೊಳ್ಳಬೇಕು ಎಂದು ಹೊಸಪೇಟೆ ತಾಪಂ ಇಓ ಡಿ.ಅಲಂ ಭಾಷಾ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ