- ಮಾರ್ಷಲ್‌ಗಳ ಸಭೆ ನಡೆಸಿದ ಸ್ಪೀಕರ್ । ಕಟ್ಟುನಿಟ್ಟಾದ ಭದ್ರತೆ ಕೈಗೊಳ್ಳುವಂತೆ ಸೂಚನೆ
ಕನ್ನಡಪ್ರಭ ವಾರ್ತೆ ಸುವರ್ಣಸೌಧಅತ್ತ ದೆಹಲಿ ಸಂಸತ್ ಭವನದ ಮೇಲೆ ಅಪರಿಚಿತರು ನುಗ್ಗ ‘ಹೊಗೆಬಾಂಬ್’ ಹಾಕಿದ ಬೆನ್ನಲ್ಲೇ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಧಾನಸೌಧಕ್ಕೆ ಬರುವವರ ತಪಾಸಣೆಯನ್ನೂ ಹೆಚ್ಚಿಸಲಾಗಿದೆ. ಭದ್ರತಾ ಅಧಿಕಾರಿಗಳು, ಮಾರ್ಷಲ್‌ಗಳ ಸಭೆ ನಡೆಸಿರುವ ಸ್ಪೀಕರ್ ಕೂಡ ಯಾವುದೇ ಕಾರಣಕ್ಕೂ ಭದ್ರತಾ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಕೂಡ ಭದ್ರತೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದಾರೆ.ದೇಶದ ಶಕ್ತಿ ಕೇಂದ್ರ ದೆಹಲಿ ಸಂಸತ್ ಭವನದ ಮೇಲೆ ಅಪರಿಚಿತರಿಬ್ಬರು ಒಳನುಗ್ಗಿರುವ ಆತಂಕ ಸೃಷ್ಟಿಸಿದ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಇಲ್ಲೂ ಹೈಅಲರ್ಟ್ ಘೋಷಿಸಲಾಯಿತು. ವಿಧಾನಸೌಧದ ಗೇಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ಮುಂದುವರಿಸಲಾಯಿತು. ಜತೆಗೆ ವಿಧಾನಸೌಧ ಪ್ರವೇಶಿಸುವ ನಾಲ್ಕು ಕಡೆಗಳಲ್ಲೂ ಭದ್ರತೆ ಹೆಚ್ಚಿಸಲಾಯಿತು. ಪ್ರತಿಯೊಬ್ಬರ ತಪಾಸಣೆಯನ್ನೂ ಹೆಚ್ಚಿಸಲಾಯಿತು. ಪ್ರತಿಯೊಬ್ಬರ ಬ್ಯಾಗ್, ಬಾಡಿ ಸ್ಕ್ಯಾನರ್‌ಗಳಿಂದ ತಪಾಸಣೆ ನಡೆಸಲಾಯಿತು. ಶ್ವಾನ ದಳಗಳಿಂದಲೂ ಮಧ್ಯಾಹ್ನದ ಬಳಿಕ ಹೆಚ್ಚಿಗೆ ವಿಧಾನಸೌಧದ ಸುತ್ತಲೂ ಮತ್ತೊಮ್ಮೆ ಮಗದೊಮ್ಮೆ ತಪಾಸಣೆ ಮಾಡಿಸಲಾಯಿತು. ಹಾಗೆ ನೋಡಿದರೆ ಪ್ರತಿದಿನ ಒಂದು ಸಲವಷ್ಟೇ ಶ್ವಾನ ದಳದಿಂದ ಪರಿಶೀಲಿಸಲಾಗುತ್ತಿತ್ತು. ಆದರೆ ದೆಹಲಿ ಘಟನೆ ಬಳಿಕ ಎರಡ್ಮೂರು ಬಾರಿ ಶ್ವಾನ ದಳವನ್ನು ಪರಿಶೀಲಿಸಿದ್ದು ವಿಶೇಷ.ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ: ಈ ನಡುವೆ ಸ್ಪೀಕರ್ ಯು.ಟಿ.ಖಾದರ್ ಅವರು ಭದ್ರತಾ ಅಧಿಕಾರಿಗಳು, ಮಾರ್ಷಲ್‌ಗಳ ಸಭೆಯನ್ನು ತುರ್ತಾಗಿ ಕರೆದು ಯಾವುದೇ ಕಾರಣಕ್ಕೂ ಭದ್ರತಾ ಲೋಪವಾಗಬಾರದು. ಸಂಶಯ ಕಂಡು ಬಂದರೆ ಕೂಡಲೇ ಹಿಡಿದು ವಿಚಾರಣೆಗೊಳಪಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕ ಸದನದಲ್ಲೂ ಯಾವುದೇ ಸದಸ್ಯರು, ಗುರುತು ಪರಿಚಯ ಇಲ್ಲದವರಿಗೆ ಯಾವುದೇ ಕಾರಣಕ್ಕೂ ಪಾಸ್‌ಗಳನ್ನು ನೀಡಬಾರದು. ನಿಮಗೆ ಮೊದಲೇ ಪರಿಚಯ ಇದ್ದವರಿಗೆ ಅವರ ಆಧಾರ್ ಕಾರ್ಡ್, ಗುರುತಿನ ಚೀಟಿ ಪರಿಶೀಲಿಸಿಯೇ ಪಾಸ್ ನೀಡಬೇಕು. ನಿಮ್ಮ ಕಚೇರಿಗಳಲ್ಲಿನ ಸಿಬ್ಬಂದಿಗೂ ಯಾರಿಗೂ ಪಾಸ್ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸೂಚನೆ ನೀಡಿದರು.ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಕೂಡ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭದ್ರತಾ ಲೋಪವಾಗದಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.------