ನ್ಯಾಯವನ್ನು ಜನರ ಮನೆ ಬಾಗಿಲಿಗೆ ತಲುಪಿಸುವರೇ ಅರೆಕಾಲಿಕ ಕಾನೂನು ಸ್ವಯಂ ಸೇವಕರು: ಪಿ.ಸಂಧ್ಯಾ ರಾವ್

KannadaprabhaNewsNetwork |  
Published : Aug 18, 2026, 01:15 AM IST
1 | Kannada Prabha

ಸಾರಾಂಶ

ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸಲು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತ ನ್ಯಾಯಾಂಗ ನೆರವು ತಲುಪಿಸಲು ಪ್ಯಾರಾ ಲೀಗಲ್ ವಾಲಂಟಿಯರ್ (ಪಿಎಲ್ ವಿ) ಯೋಜನೆಯನ್ನು ಸಕ್ರಿಯವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ತರಬೇತಿ ನೀಡಲಾಗುತ್ತಿದ್ದು, ಸ್ವಯಂ ಸೇವಕರು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಮಾನ್ಯ ಜನರು ಮತ್ತು ಕಾನೂನು ಸೇವಾ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ನ್ಯಾಯವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ರಚಿಸಲಾದ ಸ್ವಯಂ ಸೇವಕರೇ ಪ್ಯಾರಾ ಲೀಗಲ್ ವಾಲಂಟಿಯರ್ ಗಳು. ಇವರು ವಕೀಲರಲ್ಲ, ಬದಲಾಗಿ ಕಾನೂನಿನ ಪ್ರಾಥಮಿಕ ಜ್ಞಾನ ಪಡೆದು ಸಮಾಜ ಸೇವೆ ಮಾಡುವ ಮಧ್ಯವರ್ತಿಗಳು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪಿ. ಸಂಧ್ಯಾ ರಾವ್ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಔಟ್ ಲಾಡ್ ಇಂಡಿಯಾ ಫೌಂಡೇಶನ್ ಸಂಯುಕ್ತವಾಗಿ ಆಯೋಜಿಸಿರುವ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ 2 ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಅವರು ಸೋಮವಾರ ಉದ್ಘಾಟಸಿ ಮಾತನಾಡಿದರು.

ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸಲು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತ ನ್ಯಾಯಾಂಗ ನೆರವು ತಲುಪಿಸಲು ಪ್ಯಾರಾ ಲೀಗಲ್ ವಾಲಂಟಿಯರ್ (ಪಿಎಲ್ ವಿ) ಯೋಜನೆಯನ್ನು ಸಕ್ರಿಯವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ತರಬೇತಿ ನೀಡಲಾಗುತ್ತಿದ್ದು, ಸ್ವಯಂ ಸೇವಕರು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನ್ಯಾಯಾಲಯಕ್ಕೆ ಹೋಗಲಾಗದ ಜನರನ್ನು ಲೋಕ್ ಅದಾಲತ್, ಮಧ್ಯಸ್ಥಿಕೆ ಕೇಂದ್ರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಂಪರ್ಕ ಕಲ್ಪಿಸುವುದು ಪ್ಯಾರಾ ಲೀಗಲ್ ವಾಲಂಟಿಯರ್ ಕೆಲಸವಾಗಿದೆ. ಸ್ವಯಂ ಸೇವಕರು ಬಡವರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಹಾಗೂ ಪರಿಶಿಷ್ಟ ಜಾತಿ/ ಪಂಗಡದ ಜನರಿಗೆ ಸಂವಿಧಾನಬದ್ಧ ಹಕ್ಕುಗಳು ಮತ್ತು ಸರ್ಕಾರಿ ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದರು.

ಅರ್ಹ ಫಲಾನುಭವಿಗಳಿಗೆ ಉಚಿತ ಕಾನೂನು ನೆರವು ಪಡೆಯಲು ಅರ್ಜಿ ಸಲ್ಲಿಸಲು ನೆರವಾಗುವುದು ಹಾಗೂ ಲೋಕ್ ಅದಾಲತ್ ಮತ್ತು ಮಧ್ಯಸ್ಥಿಕೆ ಕೇಂದ್ರಗಳ ಪ್ರಯೋಜನಗಳನ್ನು ತಿಳಿಸುವುದು, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಗುರುತಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸ್ವಯಂ ಸೇವಕರು ಮಾಹಿತಿ ನೀಡುಬೇಕು. ಇದರೊಂದಿಗೆ ಸ್ವಯಂ ಸೇವಕರು ಸಂತ್ರಸ್ತರಿಗೆ ವಸತಿ, ಪಿಂಚಣಿ, ಆಧಾರ್ ಹಾಗೂ ಉದ್ಯೋಗ ಖಾತರಿ ಯೋಜನೆಗಳನ್ನು ತಲುಪಿಸಲು ಸಹಕರಿಸಬೇಕು ಎಂದರು.

ಫಾಸ್ಟ್ ಟ್ರ್ಯಾಬಕ್ ವಿಶೇಷ ನ್ಯಾಯಾಲಯ ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆನಂದ್ ಪಿ.ಹೊಗಾಡೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್, ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಅಭಿಯೋಜನಾ ಇಲಾಖೆಯ ಕಾನೂನು ಅಧಿಕಾರಿ ಬಿ.ಇ.ಯೋಗೇಶ್ವರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ, ಔಟ್ ಲಾಡ್ ಫೌಂಡೇಶನ್ ತರಬೇತುದಾರರಾದ ಡಿ. ಶಮಾ ಮೊದಲಾದವರು ಇದ್ದರು.

ಕಾನೂನು ಸ್ವಯಂ ಸೇವಕರು ಕಾನೂನು ಸಂಸ್ಥೆ, ಇಲಾಖೆಗಳು ಹಾಗೂ ಸಮಾಜದ ದುರ್ಬಲ ವರ್ಗಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ನಿಮ್ಮಿಂದ ಜನರಿಗೆ ಕಾನೂನಿನ ಮಾಹಿತಿ ನೀಡಿ ಸಮಾಜದಲ್ಲಿ ಅದ್ಭುತ ಬದಲಾವಣೆ ತರಲು ಸಾಧ್ಯ.

- ಆನಂದ್‌ಪಿ. ಹೊಗಾಡೆ, ಜಿಲ್ಲಾ ಮತ್ತು ಸೆಷನ್ಸ್‌ನ್ಯಾಯಾಧೀಶರು

ಕಾನೂನು ವ್ಯವಸ್ಥೆಯಲ್ಲಿ ಶೀಘ್ರ ಬೆಳವಣಿಗೆಗಳು ನಡೆಯುತ್ತಿದೆ. ಸಾಮಾನ್ಯ ಜನರಿಗೆ ಕಾನೂನಿನ ಅರಿವು ಇಲ್ಲದಿದ್ದರೆ, ಸರ್ಕಾರ ಹಾಗೂ ಅಧಿಕಾರಿಗಳು ಜನರಿಗಾಗಿ ಮಾಡುವ ಯೋಜನೆ ಸಾಮಾನ್ಯರನ್ನು ತಲುಪುವುದಿಲ್ಲ. ಹೀಗಾಗಿ, ಗ್ರಾಪಂ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಬೇಕು.

- ಎಸ್. ಯುಕೇಶ್‌ಕುಮಾರ್, ಸಿಇಒ, ಜಿಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಹನಗಳ ಎಮಿಷನ್‌ ಟೆಸ್ಟ್‌ ಶುಲ್ಕ ಹೆಚ್ಚಿಸಿದ ಸಾರಿಗೆ ಇಲಾಖೆ
ರಾಜ್ಯವ್ಯಾಪಿ ಆಹಾರ ಮಳಿಗೆ ಮೇಲೆ ದಾಳಿ ಮುಂದುವರಿಯುತ್ತೆ: ಖಾದರ್