ಕೊಪ್ಪಳ:
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಬಗ್ಗೆ ಚರ್ಚಿಸಲು ಸಂಬಂಧಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಜಿಲ್ಲೆಯ ಎನ್‌ಜಿಒಗಳೊಂದಿಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ರಾಜ್ಯಾದ್ಯಂತ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಬರೆಯಲು ಮುಂದಾಗಿದೆ. ಅದರಂತೆ ಜಿಲ್ಲೆಯಲ್ಲಿಯೂ ಮಾನವ ಸರಪಳಿ ನಿರ್ಮಾಣಕ್ಕಾಗಿ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸುವ ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಎನ್‌ಜಿಒ, ಸಂಘ-ಸಂಸ್ಥೆಗಳು, ಸಹಕಾರ ಸಂಘಗಳು ಪಾಲ್ಗೊಳ್ಳುವಿಕೆ ಅತ್ಯವಶ್ಯಕವಾಗಿದೆ ಎಂದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಕಳೆದ ಬಾರಿ ಹಮ್ಮಿಕೊಂಡಿದ್ದ ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಗೆ ಮೊದಲ ಸ್ಥಾನ ಸಿಕ್ಕಿದೆ. ಈ ದಿಶೆಯಲ್ಲಿ ಈ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ನಗರದ ಎಲ್ಲ ವಾರ್ಡ್‌ಗಳಲ್ಲಿ ಜನಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದು ಹೇಳಿದರು.ಕೊಪ್ಪಳ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಾಲಚಂದ್ರನ್ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಮಾರ್ಗದ ವ್ಯಾಪ್ತಿಯಲ್ಲಿ 30 ಸಾವಿರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಿಗಬಹುದು. ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲಾಗುವುದು. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೂ ಸಹ ಅಗತ್ಯವಿದೆ ಎಂದರು.
ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಬಹದ್ದೂರ್ ಬಂಡಿ ಗ್ರಾಪಂ ಅಧ್ಯಕ್ಷ ಯಲಪ್ಪ ತಳವಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಎನ್‌ಜಿಒಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಜಾಗೃತಿ ಮೂಡಿಸಿ:ಸಂಜೀವಿನ ಎನ್‌ಆರ್‌ಎಲ್ ಹಾಗೂ ಸ್ವಸಹಾಯ ಗುಂಪುಗಳು, ನರೇಗಾ ಕೂಲಿಕಾರರು, ಗ್ರಾಮ ಮಟ್ಟದ ಸಂಸ್ಥೆಗಳು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕು. ಕಸ ವಿಲೇವಾರಿ ವಾಹನ, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಜನಪ್ರತಿನಿಧಿಗಳು ಸಭೆಗೆ ಸಲಹೆ ನೀಡಿದರು.