ಬಳ್ಳಾರಿ: ದೃಷ್ಟಿದೋಷವುಳ್ಳವರ ಬಾಳಿಗೆ ಬೆಳಕಾಗುವ ನೇತ್ರದಾನ ಮಾಡುವ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿ ಬದುಕು ಸಾರ್ಥಕತೆ ಹೊಂದಬೇಕು ಎಂದು ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಟಿ. ಗಂಗಾಧರ ಗೌಡ ಹೇಳಿದರು.
ಆಕಸ್ಮಿಕ ಘಟನೆಗಳಲ್ಲಿ ಕಣ್ಣುಗಳನ್ನು ಕಳೆದುಕೊಂಡು ದೃಷ್ಟಿಹೀನರಾದಂತಹ ಜನತೆಗೆ ಇನ್ನೊಬ್ಬರ ಕಣ್ಣುಗಳನ್ನು ಕೊಡುವ ಮೂಲಕ ಅಂಧತ್ವ ನಿವಾರಣೆಗೆ ಅವಕಾಶವಿದ್ದು, ಬಿಮ್ಸ್ ನೇತ್ರ ಭಂಡಾರದಲ್ಲಿ ಕಣ್ಣುಗಳನ್ನು ದಾನವಾಗಿ ಪಡೆಯಲು ಹಾಗೂ ಅಗತ್ಯವುಳ್ಳವರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಬಿಮ್ಸ್‌ನ ನೇತ್ರ ಭಂಡಾರದ 9483414824 ಸಂಖ್ಯೆಗೆ ಕರೆ ಮಾಡಿ ತಿಳಿಸಿದಾಗ ವೈದ್ಯಕೀಯ ತಂಡವು ನೇತ್ರಗಳನ್ನು ಸುರಕ್ಷಿತವಾಗಿ ಪಡೆದುಕೊಳ್ಳುತ್ತಾರೆ. ಈ ಎಲ್ಲ ಕಾರ್ಯವು ವ್ಯಕ್ತಿ ಮೃತಪಟ್ಟ 6-8 ಗಂಟೆಯೊಳಗೆ ಮಾಡಬೇಕಾಗುತ್ತದೆ ಎಂದರು.ಕಳೆದ ಜನವರಿಯಿಂದ ಇಲ್ಲಿಯವರೆಗೆ 50 ಜನರು ನೇತ್ರದಾನ ಮಾಡಿದ್ದಾರೆ. ಅದರಲ್ಲಿ 45ಕ್ಕೂ ಹೆಚ್ಚು ಜನರಿಗೆ ನೇತ್ರವನ್ನು ಅಳವಡಿಸಿ ಕಣ್ಣನ್ನು ಜೀವಂತವಿರಿಸುವ ಮಹತ್ವದ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಮೂಲಕ ಜಿಲ್ಲಾಡಳಿತದ ಸಹಕಾರದೊಂದಿಗೆ ಎನ್‌ಎಂಡಿಸಿ, ಸಿಎಸ್‌ಆರ್ ಅನುದಾನದಡಿ ಬಿಮ್ಸ್ ಉಚಿತ ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ ದೃಷ್ಟಿದೋಷ ಉಳ್ಳವರಿಗೆ ಕನ್ನಡಕ ವಿತರಣೆ ಕೈಗೊಳ್ಳಲಾಗುತ್ತಿದ್ದು, ಪ್ರಸ್ತುತ ವರ್ಷ 2741 ಕನ್ನಡಕಗಳನ್ನು ವಿತರಿಸಲಾಗಿದೆ. 6011 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ವೀರೇಂದ್ರ ಕುಮಾರ್, ನೇತ್ರ ತಜ್ಞ ಡಾ. ಮದನ್ ಜೋಶಿ, ವೈದ್ಯಕೀಯ ಅಧೀಕ್ಷಕ ಡಾ. ಚಿದಂಬರಮೂರ್ತಿ, ನೇತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೇಶ್, ನೇತ್ರ ಭಂಡಾರದ ನಿರ್ದೇಶಕ ಡಾ. ಪರಸಪ್ಪ ಬಂದ್ರಕಳ್ಳಿ, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಸುಮಾ, ನೇತ್ರ ವಿಭಾಗದ ಡಾ. ರಮೇಶ್ ನಡಮನಿ ಹಾಗೂ ವೈದ್ಯ ವಿದ್ಯಾರ್ಥಿಗಳು, ನರ್ಸಿಂಗ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.