ಎಸ್ಐಟಿ ತನಿಖೆಗೆ ಬೆಂಬಲಿಸುತ್ತೇವೆ । ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು
ಪ್ರಜ್ವಲ್ ರೇವಣ್ಣ ಬಂಧನದಿಂದ ಪಕ್ಷದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಎಸ್‌ಐಟಿ ತನಿಖೆಗೆ ಬೆಂಬಲಿಸುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಪ್ರಜ್ವಲ್ ರೇವಣ್ಣ ಬಂಧನ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಪ್ರಜ್ವಲ್ ಅವರನ್ನು ನಮ್ಮ ಪಕ್ಷದಿಂದ ಅಮಾನತು ಮಾಡಿದ್ದೇವೆ. ಈ ಸಂಬಂದ ತನಿಖೆ ನಡೆಯುತ್ತಿದೆ. ವಿಡಿಯೋ ಹಂಚಿದವರ ವಿರುದ್ಧ ಕ್ರಮ ಆಗಿಲ್ಲ ಎನ್ನುವ ಆಕ್ರೋಶ ಕೂಡ ಇದೆ. ಪ್ರಜ್ವಲ್ ಬಂಧನ ಆಗಿದೆ. ನಾವು ಯಾವುದೇ ಕಾರಣದಿಂದ ತನಿಖೆಯಲ್ಲಿ ಹಸ್ತಕ್ಷೇಪ ಮಾಡೋದಿಲ್ಲ. ತನಿಖೆಗೆ ಮುಕ್ತ ಅವಕಾಶ ನೀಡಲಾಗಿದೆ. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಯಾರಿಗೆ ಅನ್ಯಾಯ ಆಗಿದೆ ಅವರಿಗೆ ಸರ್ಕಾರ ನ್ಯಾಯ ಕೊಡಬೇಕು. ಪ್ರಜ್ವಲ್ ರೇವಣ್ಣ ಬಂಧನದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ’ ಎಂದು ಹೇಳಿದರು.ವಾಲ್ಮೀಕಿ ನಿಗಮದ ನೌಕರ ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಈ ಸರ್ಕಾರ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಹೇಳಿದ್ದರು. ಈಗ ಏನಾಗಿದೆ ಎಂದು ಸ್ಪಷ್ಟವಾಗಿದೆ. ಈ ಪ್ರಕರಣ ಸಂಬಂಧ ಸಚಿವರ ರಾಜೀನಾಮೆ ಪಡೆಯಬೇಕು. ಅವರು ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದಾರೆ. ಡೆತ್ ನೋಟ್ ಇದೆ ಎಂದ ಮೇಲೆ ರಾಜೀನಾಮೆ ಕೊಡಬೇಕಿತ್ತು. ಅಲ್ಲವೇ? ಈಗಲಾದರು ಸಚಿವರ ರಾಜಿನಾಮೆ ಪಡೆಯಿರಿ’ ಎಂದು ಆಗ್ರಹಿಸಿದರು.
ತಮ್ಮ ವಿರುದ್ಧ ಮಾಟ ಮಾಡಿಸುತ್ತಿದ್ದಾರೆ ಎಂಬಧುಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪ ವಿಚಾರದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಈ ಯಾಗಗಳು, ಪೂಜೆಗಳ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರೇ ಅದು ಏನೆಂದು ಹೇಳಬೇಕು. ಕುಮಾರಸ್ವಾಮಿ ಅವರು ಮಡಿಕೇರಿಯಲ್ಲಿದ್ದಾರೆ ಅವರಿಗೂ ಅದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.
ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್, ಮಾಧ್ಯಮ ವಕ್ತಾರ ಹೊಂಗೆರೆ ರಘು ಇದ್ದರು.