ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಜಿಪಂ, ತಾಪಂ, ಗ್ರಾಪಂ ಹಾಗೂ ಸ್ಥಳೀಯ ಸಹಕಾರ ಸಂಸ್ಥೆಗಳ ಚುನಾವಣೆಗಳು ಪಕ್ಷದ ಕಾರ್ಯಕರ್ತರು ಸ್ಪರ್ಧಿಸುವ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬಿ ಅವರನ್ನು ಗೆಲ್ಲಿಸಿದರೆ ಪಕ್ಷವು ತಳಮಟ್ಟದಲ್ಲಿ ಗಟ್ಟಿಯಾದ ಪಕ್ಷದ ಬಲವರ್ಧನೆಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪಿಎಲ್‌ಡಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಕಾರ್ಯಕರ್ತರು ಅಥವಾ ಪರಾಭವಗೊಂಡ ಕಾರ್ಯಕರ್ತರು ಪಕ್ಷವು ತಮ್ಮನ್ನು ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಪಕ್ಷವನ್ನು ಸಂಘಟಿಸಲು ತೊಡಗಿಸಿಕೊಳ್ಳುತ್ತಾರೆ. ಇದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಗೆಲುವಿನ ಗುರಿ ಮುಟ್ಟಲು ಸಹಕಾರಿಯಾಗುತ್ತದೆ ಎಂದರು.ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಸಹಕಾರ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರಲಿಲ್ಲ. ಇದು ತಳಮಟ್ಟದಲ್ಲಿ ಪಕ್ಷದ ಸಂಘಟನೆಗೆ ತೊಡಕಾಗಿತ್ತು. ಇದನ್ನು ಅರ್ಥಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಿ ಪಕ್ಷವನ್ನು ಗಟ್ಟಿಗೊಳಿಸಲು ತಾಲೂಕಿನಲ್ಲಿ ನಡೆಯುವ ಸೊಸೈಟಿಗಳು, ಎಪಿಎಂಸಿ, ಟಿಎಪಿಸಿಎಂಎಸ್, ಹಾಲು ಉತ್ಪಾದಕರ ಸಹಕಾರ ಸಂಘಗಳು ಸೇರಿದಂತೆ ಎಲ್ಲಾ ಸಹಕಾರ ಸಂಸ್ಥೆಗಳ ಚುನಾವಣೆಯಲ್ಲಿ ಕಡ್ಡಾಯವಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುತ್ತಿದೆ ಎಂದರು.
ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ಫೆ.೮ರಂದು ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ೧೪ಸ್ಥಾನಗಳಿಗೆ ಸುಮಾರು ೪೦ಮಂದಿ ಆಕಾಂಕ್ಷಿಗಳು ತಮ್ಮ ಹೆಸರನ್ನು ತಾಲೂಕು ಕಾಂಗ್ರೆಸ್ ಸಮಿತಿಗೆ ನೋಂದಾಯಿಸಿದ್ದಾರೆ. ಯಾರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಚುನಾವಣಾ ಕ್ಷೇತ್ರದ ಗ್ರಾಮಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು.ಇಲ್ಲಿ ಅವಕಾಶ ತಪ್ಪಿದವರಿಗೆ ಟಿಎಪಿಸಿಎಂಎಸ್, ಎಪಿಎಂಸಿ, ಟಿಎಪಿಸಿಎಂಎಸ್, ಜಿ.ಪಂ, ತಾ.ಪಂ.ಚುನಾವಣೆಗಳಲ್ಲಿ ಸ್ಪರ್ಧಿಸಲು ಪಕ್ಷವು ಅವಕಾಶ ಕಲ್ಪಿಸಿಕೊಡುತ್ತದೆ. ಪುರಸಭೆ, ಮುಜರಾಯಿ ಆರಾಧನಾ ಸಮಿತಿ, ಪುರಸಭೆ ಆಶ್ರಯ ಕಮಿಟಿ, ತಾ.ಪಂ.ಆಶ್ರಯ ಕಮಿಟಿ, ಎಪಿಎಂಸಿ, ಟಿಎಪಿಸಿಎಂಎಸ್, ಡಿಸಿಸಿ ಬ್ಯಾಂಕ್, ಹಾಗೂ ಸರ್ಕಾರದ ಅನುಧಾನ ಪಡೆದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರಿ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕಾತಿ ಮಾಡಲು ಅವಕಾಶ ಇದೆ ಎಂದರು.
ಈ ಹುದ್ದೆಗಳಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ನಾಮ ನಿರ್ದೇಶನ ಮಾಡಲು ಪಕ್ಷವು ಅಗತ್ಯ ಕ್ರಮ ಕೈಗೊಳ್ಳಲಿದೆ ಹಾಗಾಗಿ ಈಗ ನಡೆಯುತ್ತಿರುವ ಪಿ.ಎಲ್.ಡಿ.ಬ್ಯಾಂಕ್ ಚುನಾವಣೆಯಲ್ಲಿ ಒಮ್ಮತದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಕ್ತಿ ಮೀರಿ ಶ್ರಮಿಸಬೇಕು ಎಂದು ಕೆ.ಬಿ.ಚಂದ್ರಶೇಖರ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಸದಸ್ಯ ಕಿಕ್ಕೇರಿ ಸುರೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಹೆಚ್.ಎಸ್.ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಹಿರೀಕಳಲೆ ರಾಮದಾಸ್, ಎಲ್.ಕೆ.ಮಂಜುನಾಥ್, ತಾಲ್ಲೂಕು ಕಾಂಗ್ರೆಸ್ ಎಸ್.ಸಿ ವಿಭಾಗದ ಅಧ್ಯಕ್ಷ ರಾಜಯ್ಯ, ಶಿವಣ್ಣ, ಎಲ್.ಪಿ.ನಂಜಪ್ಪ ಇತರರಿದ್ದರು.