ಲೋಕಾಯುಕ್ತ ಪೊಲೀಸರಿಂದ ಸಿಎಂ ಪತ್ನಿ ಗೌಪ್ಯ ವಿಚಾರಣೆ । ಪಾರ್ವತಿ ಸಿದ್ದರಾಮಯ್ಯಗೆ ಮುಡಾ ಪರೀಕ್ಷೆ

KannadaprabhaNewsNetwork |  
Published : Oct 26, 2024, 12:47 AM ISTUpdated : Oct 26, 2024, 06:47 AM IST
Parvathi Siddaramaiah

ಸಾರಾಂಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಗೌಪ್ಯವಾಗಿ ವಿಚಾರಣೆ ನಡೆಸಿದ್ದಾರೆ.

  ಮೈಸೂರುಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಗೌಪ್ಯವಾಗಿ ವಿಚಾರಣೆ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಸದ್ದಿಲ್ಲದೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿಚಾರಣೆಯನ್ನು ಮುಗಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಗುರುವಾರ ಅವರಿಗೆ ನೋಟಿಸ್‌ ನೀಡಲಾಗಿತ್ತು. ಶುಕ್ರವಾರ ಅವರು ವಿಚಾರಣೆಗೆ ಹಾಜರಾಗಿದ್ದರು.

ಲೋಕಾಯುಕ್ತದ ಮೈಸೂರು ಎಸ್ಪಿ ಟಿ.ಜೆ.ಉದೇಶ ನೇತೃತ್ವದಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣದ 2ನೇ ಆರೋಪಿಯಾಗಿರುವ ಪಾರ್ವತಿ ಅವರನ್ನು ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಪ್ರಕರಣದ 3ನೇ ಆರೋಪಿ ಮಲ್ಲಿಕಾರ್ಜುನಸ್ವಾಮಿ ಮತ್ತು 4ನೇ ಆರೋಪಿ ದೇವರಾಜು ಅವರುಗಳ ವಿಚಾರಣೆಯನ್ನು ಈಗಾಗಲೇ ನಡೆಸಲಾಗಿದೆ.

ಪಾರ್ವತಿಯವರು ಮುಡಾ ಪ್ರಕರಣದಲ್ಲಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 14 ನಿವೇಶನಗಳನ್ನು ಮುಡಾಗೆ ವಾಪಸ್ ಮಾಡುವಾಗ, ಖಾತೆ ರದ್ದು ಮಾಡುವ ವೇಳೆ ಕೂಡ ಕಾಣಿಸಿಕೊಂಡಿರಲಿಲ್ಲ. ಎಲ್ಲಾ ವೇಳೆ ಗೌಪ್ಯತೆ ಕಾಪಾಡಲಾಗಿತ್ತು. ಉಪ ನೋಂದಣಾಧಿಕಾರಿಯವರು ಪಾರ್ವತಿ ಅವರು ಇದ್ದಲ್ಲಿಯೇ ಹೋಗಿ ರದ್ದತಿ ಪ್ರಕ್ರಿಯೆ ಮುಗಿಸಿದ್ದರು.

ಸಾಲು-ಸಾಲು ಪ್ರಶ್ನೆಗಳಿಗೆ ಪಾರ್ವತಿ ಉತ್ತರ:

ಮುಡಾದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆ ಪ್ರಕರಣದಡಿ ಲೋಕಾಯುಕ್ತ ಪೊಲೀಸರು ಕೇಳಿದ ಸಾಲು-ಸಾಲು ಪ್ರಶ್ನೆಗಳಿಗೆ ಪಾರ್ವತಿ ಅವರು ಉತ್ತರಿಸಿದ್ದಾರೆ. ಸತತ 3 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ 20 ಪ್ರಶ್ನೆಗಳನ್ನು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಕೇಳಿದರು. 

ಅವರು ಕೇಳಿದ ಪ್ರಶ್ನೆಗಳು ಇಂತಿವೆ:

ನಿಮ್ಮ ಹೆಸರೇನು? ನಿಮ್ಮ ಪತಿಯ ಹೆಸರೇನು? ನಿಮ್ಮ ಮನೆಯ ವಿಳಾಸ ತಿಳಿಸಿ? ನೀವು ಯಾವ ಉದ್ಯೋಗ ಮಾಡುತ್ತೀರಿ? ನಿಮ್ಮ ಆದಾಯದ ಮೂಲ ಯಾವುದು? ನಿಮಗೆ ಕೆಸರೆಯ ಸರ್ವೇ ನಂಬರ್ 464ರ ಭೂಮಿ ಬಗ್ಗೆ ಗೊತ್ತಾ? ನಿಮ್ಮ ಅಣ್ಣ ಮಲ್ಲಿಕಾರ್ಜುನಸ್ವಾಮಿ ಭೂಮಿ ಖರೀದಿ ಮಾಡಿದ್ದರ ಬಗ್ಗೆ ಗೊತ್ತಾ? ನಿಮಗೆ ನಿಮ್ಮ ಅಣ್ಣ ನೀಡಿದ ಭೂಮಿ ಹಿನ್ನೆಲೆ ಗೊತ್ತಾ? 2010ರಲ್ಲಿ ಭೂಮಿ ದಾನ ಮಾಡಿದಾಗ ವಿಚಾರಣೆ ನಡೆಸಿದ್ರಾ? ಯಾವ ಸ್ಥಳದಲ್ಲಿ ಭೂಮಿಯನ್ನು ರಿಜಿಸ್ಟರ್ ಮಾಡಿಸಿಕೊಂಡ್ರಿ? ನಿಮ್ಮ ಭೂಮಿ ಮುಡಾ ಸ್ವಾಧೀನ ಮಾಡಿಕೊಂಡಿದ್ದು ತಿಳಿದಿತ್ತಾ? ನಿಮ್ಮ ಭೂಮಿಗೆ ಬದಲಾಗಿ, ಬೇರೆಡೆ ಬದಲಿ ಭೂಮಿ ಕೇಳಿದ್ರಾ? ಅಥವಾ ಹಣ ಕೇಳಿದ್ರಾ? ನಿಮಗೆ ಭೂಮಿ ಬದಲಿಗೆ ಸೈಟ್ ತೆಗೆದುಕೊಳ್ಳಿ ಎಂದವರು ಯಾರು? 14 ಸೈಟ್ ಪಡೆದುಕೊಳ್ಳಲು ನೀವು ಅರ್ಜಿ ಹಾಕಿದ್ರಾ? ಅರ್ಜಿಯಲ್ಲಿ ಹಾಕಿರುವ ಸಹಿ ನಿಮ್ಮದೆಯಾ? ಅಥವಾ ನಿಮ್ಮ ಪರವಾಗಿ ಬೇರೆಯವರು ಸಹಿ ಹಾಕಿದ್ರಾ? ದಾನಪತ್ರದ ಅಸಲಿ ದಾಖಲಾತಿಗಳು ನಿಮ್ಮ ಬಳಿ ಇವೆಯಾ? 14 ಸೈಟ್ ಗಳ ಅಸಲಿ ದಾಖಲಾತಿಗಳು ನಿಮ್ಮ ಬಳಿ ಇವೆಯಾ? ಸೈಟ್ ಗಳನ್ನು ವಾಪಸ್ ಯಾಕೆ ನೀಡಿದ್ರಿ? ಈ ಎಲ್ಲಾ ವಿಚಾರಗಳು ನಿಮ್ಮ ಪತಿ ಸಿದ್ದರಾಮಯ್ಯ, ಪುತ್ರ ಯತೀಂದ್ರ ಸೇರಿದಂತೆ ಕುಟುಂಬದವರಿಗೆ ಗೊತ್ತಾ? ನೀವು ನೀಡಿರುವ ಎಲ್ಲಾ ಹೇಳಿಕೆ ಹಾಗೂ ದಾಖಲೆಗಳು ಸರಿ ಇವೆಯಾ? ಎಂದು ಕೇಳಿದರು ಎನ್ನಲಾಗಿದೆ.

- ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಪಾರ್ವತಿ ಸಿದ್ದರಾಮಯ್ಯ

ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿಗಳ ಪತ್ನಿಗೆ ಗುರುವಾರ ಲೋಕಾಯುಕ್ತ ಪೊಲೀಸ್‌ ನೋಟಿಸ್‌

- ಶುಕ್ರವಾರ ವಿಚಾರಣೆಗೆ ಹಾಜರಾದ ಸಿದ್ದು ಪತ್ನಿ  

ಲೋಕಾಯುಕ್ತ ಕಚೇರಿಯಲ್ಲಿ ಎಸ್ಪಿ ಉದೇಶ್‌ ವಿಚಾರಣೆ

- ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಪಾರ್ವತಿ ಅವರನ್ನು ಗೌಪ್ಯವಾಗಿ ವಿಚಾರಣೆ ನಡೆಸಿದ ಎಸ್‌ಪಿ

- 14 ನಿವೇಶನ ವಾಪಸ್‌ ಮಾಡುವಾಗ, ಖಾತೆ ರದ್ದತಿ ಸಂದರ್ಭದಲ್ಲಿಯೂ ಸಿಎಂ ಪತ್ನಿ ಕಾಣಿಸಿಕೊಂಡಿರಲಿಲ್ಲ

- ಲೋಕಾಯುಕ್ತ ಪೊಲೀಸರು ಕೇಳಿದ 20 ಪ್ರಶ್ನೆಗಳಿಗೆ ಉತ್ತರ ನೀಡಿ ವಾಪಸಾದ ಪಾರ್ವತಿ ಸಿದ್ದರಾಮಯ್ಯ

ಸಿಎಂ ಪತ್ನಿ ವಿಚಾರಣೆ ವಿಡಿಯೋ ಚಿತ್ರೀಕರಣ

ಪಾರ್ವತಿ ಅವರ ಹೇಳಿಕೆಯನ್ನು ವಿಡಿಯೋ ಆಧಾರಿತ ಹೇಳಿಕೆಯಾಗಿ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ದಾಖಲಿಸಿದ್ದಾರೆ. ಪಾರ್ವತಿ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ಅವರು, ಉತ್ತರ ಪಡೆದ ಬಳಿಕ ಹೇಳಿಕೆಗೆ ಪಾರ್ವತಿ ಅವರಿಂದ ಸಹಿ ಪಡೆದುಕೊಂಡಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!