ಭಕ್ತಿಯ ಕಡಲಿನಲ್ಲಿ ಮಿಂದೆದ್ದ ಕೃಷ್ಣನಗರಿ ಉಡುಪಿ

KannadaprabhaNewsNetwork |  
Published : Jan 18, 2026, 02:15 AM IST
ಉಡುಪಿಯ ರಥ ಬೀದಿ | Kannada Prabha

ಸಾರಾಂಶ

ಅತ್ತ ಪಡುಗಡಲಿನಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದಾಗ, ಇತ್ತ ಭಕ್ತಿಯ ಕಡಲಿನಲ್ಲಿ ಮಿಂದೇಳುತ್ತಿದ್ದ ಕೃಷ್ಣನಗರಿಯಲ್ಲಿ 253ನೇ ದ್ವೈವಾರ್ಷಿಕ ಪರ್ಯಾಯೋತ್ಸವದ ಪ್ರಕ್ರಿಯೆಗಳು ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ ಅತ್ತ ಪಡುಗಡಲಿನಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದಾಗ, ಇತ್ತ ಭಕ್ತಿಯ ಕಡಲಿನಲ್ಲಿ ಮಿಂದೇಳುತ್ತಿದ್ದ ಕೃಷ್ಣನಗರಿಯಲ್ಲಿ 253ನೇ ದ್ವೈವಾರ್ಷಿಕ ಪರ್ಯಾಯೋತ್ಸವದ ಪ್ರಕ್ರಿಯೆಗಳು ಆರಂಭವಾಯಿತು. ಶನಿವಾರ ಮಧ್ಯರಾತ್ರಿ, ಕಳೆದೆರಡು ವರ್ಷಗಳಿಂದ ಕೃಷ್ಣನ ಷೋಡಶ ಪೂಜೆಗಳನ್ನು, ಕೃಷ್ಣಮಠದ ಆಡಳಿತವನ್ನು, ಕೋಟ್ಯಂತರ ಭಕ್ತರಿಗೆ ಕೃಷ್ಣದರ್ಶನ-ಅನ್ನಭೋಜನವನ್ನು, ನಿತ್ಯವೂ ಉತ್ಸವಾದಿಗಳನ್ನು ಯಶಸ್ವಿಯಾಗಿ ನಡೆಸಿದ ಪುತ್ತಿಗೆ ಮಠದ ಶ್ರೀಗಳು ತಮ್ಮ ಪರ್ಯಾಯದ ಕೊನೆಯ ಪೂಜೆಯನ್ನು ಮುಗಿಸಿ, ಕೃಷ್ಣಮಠದಿಂದ ನಿರ್ಗಮಿಸಲನುವಾಗುತಿದ್ದರೆ, ಮುಂದಿನೆರಡು ವರ್ಷ ಈ ಎಲ್ಲ ಜವಾಬ್ದಾರಿಗಳನ್ನು ಹೊರುವುದಕ್ಕೆ ಸರ್ವಜ್ಞ ಪೀಠವನ್ನೇರಲು ಶೀರೂರು ಮಠದ ಯತಿಗಳು ಭವ್ಯ ಮೆರವಣಿಗೆಯಲ್ಲಿ ಕೃಷ್ಣಮಠಕ್ಕಾಗಮಿಸುತಿದ್ದರು. ಇದಕ್ಕೆ ಮೊದಲು ತಮ್ಮ ಕ್ರಾಂತಿಕಾರಕ ವಿಶ್ವ ಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಉಡುಪಿಯ ಜನತೆಯ ಪರವಾಗಿ, ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಲಾಯಿತು.ಸಂಪ್ರದಾಯದಂತೆ ಪರ್ಯಾಯ ಪೀಠಾರೋಹಣಕ್ಕೆ ಮೊದಲು ಮುಂಜಾನೆ 1.30ಕ್ಕೆ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕಾಪುವಿನ ದಂಡತೀರ್ಥ ಪುಷ್ಕರಣಿಗೆ ತೆರಳಿ, ಪುಣ್ಯಸ್ನಾನ ಮಾಡಿ, ಮರಳಿ ಇಲ್ಲಿನ ಜೋಡುಕಟ್ಟೆಗೆ ಬಂದಾಗ ಅವರನ್ನು ಸ್ವಾಗತಿಸಲು ಇತರ ಏ‍ಳು ಮಠಾಧೀಶರು ಹೊಸಮಡಿ ಬಟ್ಟೆಗಳನ್ನುಟ್ಟು, ತಲೆಗೆ ಕಾಷಾಯ ವಸ್ತ್ರದ ಮುಂಡಾಸು ಧರಿಸಿ ತಂತಮ್ಮ ಮಠದ ಶಿಷ್ಯವರ್ಗ, ಬಿರುದಾವಳಿ, ಮೇನೆಗಳೊಂದಿಗೆ ಸಿದ್ಧರಾಗಿದ್ದರು. ಈ ಬಾರಿ ವಿಶೇಷವಾಗಿ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ 85ಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು, ಸ್ಥಬ್ಧಚಿತ್ರಗಳು ನಾಡಹಬ್ಬ ಪರ್ಯಾಯೋತ್ಸವ ಮೆರವಣಿಗೆಗೆ ಹೊಸ ಸಾಂಸ್ಕೃತಿಕ ಕಳೆ ನೀಡಿದ್ದವು. ಜೋಡುಕಟ್ಟೆಯಿಂದ ಕೋರ್ಟು ರಸ್ತೆ, ಡಯಾನ ವೃತ್ತ, ಕೊಳದಪೇಟೆ, ತೆಂಕುಪೇಟೆಯಿಂದ ರಥಬೀದಿವರೆಗೆ ಇಕ್ಕೆಲಗಳಲ್ಲಿ ಸಂಜೆಯಿಂದಲೇ ಕಾಯುತ್ತಿದ್ದ ಲಕ್ಷಾಂತರ ಮಹಿಳೆಯರು, ಮಕ್ಕಳು, ಹಿರಿಯರು ಭಕ್ತಿ ಮತ್ತು ಸಡಗರದಿಂದ ಅಷ್ಟ ಮಠಾಧೀಶರ ಪಲ್ಲಕ್ಕಿ ಮೆರ‍ವಣಿಗೆ ನೋಡಲು ಕಾಯುತಿದ್ದರು.

ಶೀರೂರು ಶ್ರೀಗಳು ಮತ್ತು ಇತರ ಮಠಾಧೀಶರು ಸುಮಾರು 3 ಗಂಟೆಗೂ ಅಧಿಕ ಮೆರವಣಿಗೆಯಲ್ಲಿ ಮುಂಜಾನೆ ಸುಮಾರು 5.15ಕ್ಕೆ ರಥಬೀದಿ ಪ್ರವೇಶಿಸಿ, ಕನಕನ ಕಿಂಡಿಯಲ್ಲಿ ಕೃಷ್ಣದರ್ಶನ ಮಾಡಿ, 5.45ಕ್ಕೆ ಪರ್ಯಾಯ ಪೀಠದಲ್ಲಿ ಕುಳಿತು, ಪುತ್ತಿಗೆ ಶ್ರೀಗಳಿಂದ ಕೃಷ್ಣಮಠದ ಕೀಲಿ ಕೈ ಮತ್ತು ಅಕ್ಷಯ ಪಾತ್ರೆಗಳನ್ನು ಸ್ವೀಕರಿಸಿದರು. 5.55ಕ್ಕೆ ಬಡಗುಮಾಳಿಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್, 6.15ಕ್ಕೆ ರಾಜಾಂಗಣದಲ್ಲಿ ಬಹಿರಂಗ ದರ್ಬಾರ್, ಆಶೀರ್ವಚನ, ಯೋಜನೆಗಳ ಘೋಷಣೆ, ಕೃಷ್ಣಮಠದ ನೂತನ ಅಧಿಕಾರಿ ವರ್ಗದ ಪ್ರಕಟಣೆ ನಡೆಸುತ್ತಾರೆ, ಬಳಿಕ 10.30ಕ್ಕೆ ಶ್ರೀ ಕೃಷ್ಣದೇವರಿಗೆ ಶ್ರೀ ವೇದವರ್ಧನ ತೀರ್ಥರು ತಮ್ಮ ಜೀವನ ಮೊದಲ ಮಹಾಪೂಜೆ ನೆರವೇರಿಸಿ, ಮುಂದಿನ 2 ವರ್ಷಗಳ ಶ್ರೀಕೃಷ್ಣಾ ಪೂಜಾ ಕೈಂಕರ್ಯವನ್ನು ಆರಂಭಿಸುತ್ತಿದ್ದಾರೆ. ... ಬಾಕ್ಸ್....

ಇದು 253ನೇ ಪರ್ಯಾಯೋತ್ಸವ:

ಸುಮಾರು 12ನೇ ಶತಮಾನದಲ್ಲಿ ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿದ ಮಧ್ವಾಚಾರ್ಯರ ನಂತರ ಸಾವಿರಾರು ಪರ್ಯಾಯೋತ್ಸವಗಳಾಗಿವೆ. ಆರಂಭದಲ್ಲಿ 2 ತಿಂಗಳಿಗೊಮ್ಮೆ ಪರ್ಯಾಯಗಳು ನಡೆಯುತಿದ್ದವು, 16ನೇ ಶತಮಾನದಲ್ಲಿ ಶ್ರೀ ವಾದಿರಾಜ ತೀರ್ಥರು 2 ವರ್ಷಗಳಿಗೊಮ್ಮೆ ಪರ್ಯಾಯವನ್ನು ಆರಂಭಿಸಿದ ಮೇಲೆ ಅವುಗಳ ಲೆಕ್ಕ ಮಾಡಿದರೆ ಅಷ್ಟ ಮಠಗಳ ನಡುವೆ ಪರ್ಯಾಯೋತ್ಸವಗಳ 31 ಸುತ್ತುಗಳು ಪೂರ್ಣಗೊಂಡು, 5ನೇ ಪರ್ಯಾಯೋತ್ಸವ ನಡೆಯುತ್ತಿದೆ. ಅಂದರೇ ಇಂದು ಆರಂಭವಾಗಿರುವ ಶೀರೂರು ಮಠದ ಪರ್ಯಾಯವು 253ನೇಯದ್ದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ನಾಯಕರಿಂದ ಜಾತಿನಿಂದನೆಯ ಕೇಸ್‌ ದುರ್ಬಳಕೆ: ವೀರೇಶ ಹನಗವಾಡಿ
ರಸ್ತೆಯಲ್ಲೇ ದಂಪತಿಗೆ ಮಾರಕಾಸ್ತ್ರತೋರಿಸಿ ಬೆದರಿಸಿದ ಬೈಕ್‌ ಸವಾರ