ಬಳ್ಳಾರಿ ವಿವಿಯಲ್ಲಿ ಹಣ ಕೊಟ್ಟರೆ ಪರೀಕ್ಷೆ ಪಾಸ್‌!

KannadaprabhaNewsNetwork |  
Published : Jun 12, 2026, 02:00 AM IST
( ಈ ಸುದ್ದಿಗೆ ಬಳ್ಳಾರಿ ವಿವಿಯ ಲೋಗೋ ಹಾಗೂ ಫೋಟೋ ಬಳಸಿಕೊಳ್ಳುವುದು)  | Kannada Prabha

ಸಾರಾಂಶ

ವಿವಿಯಲ್ಲಿ ಅನುತ್ತೀರ್ಣಗೊಂಡವರು ದುಡ್ಡು ಕೊಟ್ಟರೆ ಪಾಸ್‌ ಮಾಡುವ ಜಾಲ ಬಯಲು.

ಮಂಜುನಾಥ ಕೆ.ಎಂ

ಬಳ್ಳಾರಿ: ಘಟಿಕೋತ್ಸವ ನಕಲಿ ಪ್ರಮಾಣಪತ್ರ ಹಗರಣದ ಮೂಲಕ ರಾಜ್ಯದ ಗಮನ ಸೆಳೆದ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಈಗ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಸ್ ಮಾಡುವ ದಂಧೆ ಬಲು ಜೋರು!

ವಿವಿಯ ಪರೀಕ್ಷಾ ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾರ್ಥಿ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿದ್ದು, ವಿವಿಯಲ್ಲಿ ಅನುತ್ತೀರ್ಣಗೊಂಡವರು ದುಡ್ಡು ಕೊಟ್ಟರೆ ಪಾಸ್‌ ಮಾಡುವ ಜಾಲ ಬಯಲು.

ಕಳೆದ ಜನವರಿಯಲ್ಲಿ ಜರುಗಿದ ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರು ವಿವಿಯ ಪರೀಕ್ಷಾ ಸಿಬ್ಬಂದಿಯ ಸಹಾಯ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ಹಣದ ಮಾತುಕತೆ ಮಾಡಿದ್ದಾರೆ. ₹8 ರಿಂದ 10 ಸಾವಿರ ವರೆಗೆ ಹಣ ಪಡೆದು ಪಾಸ್ ಮಾಡುತ್ತಿರುವ ವಿಚಾರ ಆಡಿಯೋ ಸಂಭಾಷಣೆಯಿಂದ ಬಹಿರಂಗಗೊಂಡಿದೆ. ಈ ಕೃತ್ಯ ಹಲವು ವರ್ಷಗಳಿಂದಲೂ ವಿವಿಯಲ್ಲಿ ನಡೆಯುತ್ತಿದ್ದು, ಈಗ ಬಹಿರಂಗಗೊಂಡಿದೆ ಎಂಬ ಆರೋಪಗಳು ಕೇಳಿ ಬಂದಿದೆ.

ಸಿಬ್ಬಂದಿ ವಿರುದ್ಧ ಕ್ರಮ:

ಪ್ರಕರಣ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರೀಯಿಸಿದ ಕುಲಪತಿ ಪ್ರೊ.ಎಂ.ಮುನಿರಾಜು, ವಿಶ್ವವಿದ್ಯಾಲಯದ ಹೆಸರು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಈಗ ವೈರಲ್ ಆಗಿರುವ ಆಡಿಯೋ ಹಳೆಯದ್ದು ಎಂದಿದ್ದಾರೆ.

ಆಡಿಯೋ ಹಳೆಯದಾಗಿರಬಹುದು. ಧ್ವನಿ ಯಾರದು ಎಂದು ಗೊತ್ತಾಗುತ್ತದೆಯಲ್ಲವೇ? ಎಂದು ಪ್ರಶ್ನಿಸಿದಾಗ, ಹೌದು ಗೊತ್ತಾಗಿದೆ. ಆಡಿಯೋದಲ್ಲಿ ಕೇಳಿ ಬಂದ ಹೆಸರಿನ ಸಿಬ್ಬಂದಿ ವಿರುದ್ಧ ಖಂಡಿತ ಕ್ರಮ ವಹಿಸುತ್ತೇನೆ. ಠಾಣೆಯಲ್ಲಿ ದೂರು ದಾಖಲಿಸುತ್ತೇನೆ. ಯಾರೇ ಆಗಲಿ ನನಗೆ ಮುಲಾಜಿಲ್ಲ. ಈ ರೀತಿಯ ಕೃತ್ಯ ಎಸಗಿದವರನ್ನು ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ತಿಳಿಸಿದರು.

ನಕಲಿ ಘಟಿಕೋತ್ಸವ ಪ್ರಕರಣದಲ್ಲಿ ಕೋಟ್ಯಂತರ ರು. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಪ್ರಕರಣ ಈವರೆಗೆ ತಾರ್ಕಿಕ ಅಂತ್ಯ ಕಂಡಿಲ್ಲ. ತನಿಖೆ ನಡೆಸಲಾಗುತ್ತಿದೆ. ಕ್ರಮ ವಹಿಸುತ್ತೇವೆ. ಯಾರೇ ಆಗಲಿ ಮುಲಾಜಿಲ್ಲ ಎಂದು ವಿವಿ ಕುಲಪತಿ ಹೇಳುತ್ತಲೇ ಬಂದಿದ್ದಾರೆ. ಏತನ್ಮಧ್ಯೆ ಮತ್ತೊಂದು ಪ್ರಕರಣ ವಿವಿಗೆ ಸುತ್ತಿಕೊಂಡಿದೆ. ಹಣಕೊಟ್ಟರೆ ಪರೀಕ್ಷೆಯಲ್ಲಿ ಪಾಸ್ ಮಾಡಿಸುವ ದಂಧೆಕೋರರ ವಿರುದ್ಧ ಕುಲಪತಿ ಯಾವ ಕ್ರಮ ಜರುಗಿಸುತ್ತಾರೆ ಎಂಬ ಕುತೂಹಲವಿದೆ.

ಎಬಿವಿಪಿ ಪ್ರತಿಭಟನೆ:ಈ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಗುರುವಾರ ವಿವಿ ಮುಂದೆ ಪ್ರತಿಭಟನೆ ನಡೆಸಿ, ಪರೀಕ್ಷಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೆಂಕಟೇಶ್, ರಿಯಾಜ್ ಮತ್ತಿತರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಅವ್ಯವಹಾರ ತುಂಬ ದಿನಗಳಿಂದ ನಡೆಯುತ್ತಿದೆ. ಆಡೀಯೋ ವೈರಲ್‌ನಿಂದ ಬಹಿರಂಗಗೊಂಡಿದೆ. ಕೂಡಲೇ ಕುಲಪತಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಹಣಕೊಟ್ಟರೆ ಪರೀಕ್ಷೆಯಲ್ಲಿ ಪಾಸ್ ಮಾಡುವ ಕುರಿತು ವೈರಲ್ ಆಗಿರುವ ಆಡಿಯೋ ಹಳೆಯದ್ದು. ಆದಾಗ್ಯೂ ಆಡಿಯೋ ವೈರಲ್ ಆದ ಬಳಿಕ ಪರೀಕ್ಷಾ ಸಿಬ್ಬಂದಿ ಯಾರೆಂದು ತಿಳಿದಿದ್ದು, ಕರೆಸಿ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಹೇಳಿರುವೆ. ಈ ಬಗ್ಗೆ ದೂರು ಕೊಡುವೆ. ತನಿಖೆ ಮಾಡಿಸುವೆ. ತಪ್ಪಿಸ್ಥರು ಯಾರೇ ಆಗಲಿ ಕ್ರಮ ವಹಿಸುತ್ತೇವೆ. ಹೋರಾಟ ಮಾಡಿರುವ ಎಬಿವಿಪಿ ಮುಖಂಡರಿಗೆ ಸಾಕ್ಷ್ಯ ನೀಡುವಂತೆ ನೋಟಿಸ್ ನೀಡಿರುವೆ ಎನ್ನುತ್ತಾರೆ ಬಳ್ಳಾರಿ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳದ ಬೀಜಕ್ಕೆ ಒಂದೇ ಬೆಲೆ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ
ನಂದಿಪುರ ಚರಂತಪ್ಪಜ್ಜ ಶ್ರೀಗಳ 22ನೇ ಸ್ಮರಣೋತ್ಸವಕ್ಕೆ ಚಾಲನೆ