ಹೈಟೆಕ್‌ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

KannadaprabhaNewsNetwork |  
Published : Jun 10, 2025, 04:36 AM IST
ನಿಲ್ದಾಣ | Kannada Prabha

ಸಾರಾಂಶ

ಲಿಂಬೆಯ ನಾಡು ಇಂಡಿ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನೇನೋ ನಿರ್ಮಿಸಲಾಗಿದೆ. ಆದರೆ, ಆ ಬಸ್‌ ನಿಲ್ದಾಣದ ಒಳಹೊಕ್ಕರೆ ಅಲ್ಲಿ ನಿಲ್ಲೋಕು ಆಗದ ಪರಿಸ್ಥಿತಿ ಕಂಡು ಬಂದಿದೆ. ಕಾರಣ, ಹೈಟೆಕ್‌ ಬಸ್‌ ನಿಲ್ದಾಣವೆಂದರೆ ಸ್ವಚ್ಛತೆ, ಮೂಲಭೂತ ಸೌಲಭ್ಯಗಳು ಅಗತ್ಯವಾಗಿರಬೇಕು. ಆದರೆ, ಇಂಡಿ ಪಟ್ಟಣದ ಈ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ಬಸ್‌ ನಿಲ್ದಾಣದ ಕಂಡ ಕಂಡಲ್ಲಿ ತ್ಯಾಜ್ಯವೇ ತುಂಬಿಕೊಂಡಿದೆ. ಅಲ್ಲದೇ, ಮೇಲಾಗಿ ನಿಲ್ದಾಣದಲ್ಲಿ ಸಮರ್ಪಕ ಆಸನಗಳ ಕೊರತೆ ಸೇರಿದಂತೆ ಹೋಗುವ, ಬರುವ ಪ್ರಯಾಣಿಕರಿಗೆ ಮೂಲ ಸೌಕರ್ಯಗಳಿಲ್ಲದೆ ಪರದಾಟ ನಡೆಸಿದ್ದಾರೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಲಿಂಬೆಯ ನಾಡು ಇಂಡಿ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನೇನೋ ನಿರ್ಮಿಸಲಾಗಿದೆ. ಆದರೆ, ಆ ಬಸ್‌ ನಿಲ್ದಾಣದ ಒಳಹೊಕ್ಕರೆ ಅಲ್ಲಿ ನಿಲ್ಲೋಕು ಆಗದ ಪರಿಸ್ಥಿತಿ ಕಂಡು ಬಂದಿದೆ. ಕಾರಣ, ಹೈಟೆಕ್‌ ಬಸ್‌ ನಿಲ್ದಾಣವೆಂದರೆ ಸ್ವಚ್ಛತೆ, ಮೂಲಭೂತ ಸೌಲಭ್ಯಗಳು ಅಗತ್ಯವಾಗಿರಬೇಕು. ಆದರೆ, ಇಂಡಿ ಪಟ್ಟಣದ ಈ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ಬಸ್‌ ನಿಲ್ದಾಣದ ಕಂಡ ಕಂಡಲ್ಲಿ ತ್ಯಾಜ್ಯವೇ ತುಂಬಿಕೊಂಡಿದೆ. ಅಲ್ಲದೇ, ಮೇಲಾಗಿ ನಿಲ್ದಾಣದಲ್ಲಿ ಸಮರ್ಪಕ ಆಸನಗಳ ಕೊರತೆ ಸೇರಿದಂತೆ ಹೋಗುವ, ಬರುವ ಪ್ರಯಾಣಿಕರಿಗೆ ಮೂಲ ಸೌಕರ್ಯಗಳಿಲ್ಲದೆ ಪರದಾಟ ನಡೆಸಿದ್ದಾರೆ.

ಪ್ರಯಾಣಿಕರಿಗೆ ಹೈಟೆಕ್‌ ಮಾದರಿಯಲ್ಲಿ ಅನುಕೂಲ ಕಲ್ಪಿಸುವ ಉದ್ಧೇಶದಿಂದ ಸರ್ಕಾರ ಸಾಕಷ್ಟು ಅನುದಾನ ಖರ್ಚು ಮಾಡಿ ಹೊಸ ಬಸ್‌ ನಿಲ್ದಾಣ ನಿರ್ಮಾಣ ಮಾಡಿದೆ. ಆದರೆ ಇಲ್ಲಿಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿಯಿಂದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ, ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರು ಸಾರಿಗೆ ಇಲಾಖೆಯ ಮೇಲೆ ಹಿಡಿತಾಪ ಹಾಕುವಂತಾಗಿದೆ.ಇಂಡಿ ಪಟ್ಟಣದಲ್ಲಿನ ಬಸ್ ನಿಲ್ದಾಣ ಹೆಸರಿಗಷ್ಟೇ ಹೈಟೆಕ್ ಬಸ್ ನಿಲ್ದಾಣವಾಗಿದೆ. ಬಸ್ ನಿಲ್ದಾಣದಲ್ಲಿ ನಿರ್ವಹಣೆ ಕೊರತೆಯಿಂದ ಅನೈರ್ಮಲ್ಯ ಎದ್ದು ಕಾಣುತ್ತಿದೆ. ನಿಲ್ದಾಣದಲ್ಲಿ ಡೆಸ್ಟ್‌ ಬಿನ್ ಇದ್ದರೂ ಯಾವುದೇ ಪ್ರಯೋಜನವಿಲ್ಲ. ನಿರುಪಯುಕ್ತ ವಸ್ತುಗಳು ಹಾಗೂ ಉಗುಳಲು ಬಸ್ ನಿಲ್ದಾಣದಲ್ಲಿ ಎರಡು ಸಣ್ಣ ಡಬ್ಬಿ(ಡಸ್ಟ್ ಬಿನ್) ಇಡಲಾಗಿದೆ. ಆದರೆ ಅದು ತುಂಬಿ ತುಳುಕುತ್ತಿದ್ದರೂ ಅದರೊಳಗೆ ತ್ಯಾಜ್ಯ ವಿಲೇವಾರಿಗೆ ಸಿಬ್ಬಂದಿ ಮುಂದಾಗಿಲ್ಲ. ಇಂಡಿ ಪಟ್ಟಣದಲ್ಲಿರುವ ಹೈಟೆಕ್ ಬಸ್ ನಿಲ್ದಾಣದಲ್ಲಿ ನಿರುಪಯುಕ್ತ ವಸ್ತುಗಳು ಹಾಕಲು ಇಟ್ಟಿರುವ ಡಬ್ಬಿ ತುಂಬಿಕೊಂಡರೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುವುದು, ಡಬ್ಬಿಯಲ್ಲಿ ತುಂಬಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಗಾಳಿಗೆ ಹಾರಿ ನಿಲ್ದಾಣದ ತುಂಬೆಲ್ಲ ಆವರಿಸಿದ್ದರಿಂದ ನಿಲ್ದಾಣವೆಲ್ಲ ಕಸದ ತೊಟ್ಟಿಯಂತಾಗಿದೆ. ಇನ್ನು, ಪ್ರಯಾಣಿಕರಿಗೆ ನೀರಿನ ದಾಹ ತೀರಿಸಲು ಅಳವಡಿಸಿರುವ ನಲ್ಲಿಯನ್ನು ಯಾವುದೋ ಮೂಲೆಯೊಂದರಲ್ಲಿ ಅಳವಡಿಕೆ ಮಾಡಿದ್ದು, ನೀರಿಗಾಗಿ ನಿಲ್ದಾಣವನ್ನೆಲ್ಲ ಹುಡುಕಾಡಿ ನೀರು ತೆಗೆದುಕೊಳ್ಳುವ ಪರಿಸ್ಥಿತಿ ಇದೆ.ಬಾಯಾರಿಕೆಯಾಗಿ ನಿಲ್ದಾಣದಲ್ಲಿನ ಹೊಟೆಲ್‌ಗೆ ಹೋದರೆ, ನೀರು ಕೊಡುವುದಿಲ್ಲ, ಪ್ರಯಾಣಿಕರಿಗೆ ನಲ್ಲಿಯ ಅಳವಡಿಸಿದ ಸ್ಥಳವೂ ಸ್ವಚ್ಛವಾಗಿಲ್ಲ. ಅಲ್ಲಿನ ನೀರು ಸಹ ತಗೆದುಕೊಂಡು ಕುಡಿಯದಂತಾ ಪರಿಸ್ಥಿತಿ ಇಲ್ಲಿಯ ಪ್ರಯಾಣಿಕರಿಗೆ ಇದೆ.ಶೌಚಾಲಯ ಕೊರತೆ: ಈ ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಓಬೇರಾಯನ ಕಾಲದ ಶೌಚಾಲಯವಿದೆ. ಶೌಚಾಲಯದ ಛಾವಣಿಗೆ ಅಳವಡಿಸಿದ ತಗಡಿನ ಪತರಾ ಕೊಳೆತು ರಂದ್ರ ಬಿದಿದ್ದು, ಮಳೆಯ ನೀರು ಶೌಚಾಲಯದಲ್ಲಿ ನುಗ್ಗುತ್ತಿದೆ. ಶೌಚಕ್ಕೆ ಹೋದವರು ಮಳೆ ನೀರಿನ ಸ್ನಾನ ಮಾಡಿಕೊಂಡೇ ಹೊರಬರುವಂತಾಗಿದೆ.

ಮಹಿಳೆಯರಿಗೆ ಶೋಷಣೆ: ಶೌಚಾಲಯದಲ್ಲಿ ಮಹಿಳೆಯರಿಗೆ ಉಚಿತ ಮೂತ್ರ ಎಂದು ನಾಮಫಲಕ ಹಾಕಲಾಗಿದೆ. ಶೌಚಾಲಯ ಗುತ್ತಿಗೆ ಪಡೆದವರು ಕೇವಲ ಮೂತ್ರ ವಿಸರ್ಜನೆಗೆ ಮಾತ್ರವೇ ಸಾರ್ವಜನಿಕರಿಂದ ₹ 10 ವಸೂಲಿ ಮಾಡುತ್ತಿದ್ದು, ಹಣವಿಲ್ಲದ ಮಹಿಳೆಯರಿಗೆ ಮೂತ್ರ ವಿಸರ್ಜನೆಗೆ ನಿರಾಕರಿಸಲಾಗುತ್ತಿದೆ.

ಇದರಿಂದ ಹೈ ಟೆಕ್‌ ಬಸ್‌ ನಿಲ್ದಾಣದಲ್ಲಿರುವ ಚರಂಡಿಗಳು ತುಂಬಿ ಗಬ್ಬು ನಾರುತ್ತಿದ್ದು, ಶೌಚಾಲಯದ ಪೈಪ್‌ಲೈನ್‌ ಒಡೆದು ರಸ್ತೆಗೆ ಹರಿಯುತ್ತಿದೆ. ಇದರಿಂದ ಪ್ರಯಾಣಿಕರು ಹೈರಾಣಾಗಿ ಹಿಡಿಶಾಪ ಹಾಕುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಒತ್ತಾಯವನ್ನು ಮಾಡಿದ್ದಾರೆ.

ಬಸ್‌ ನಿಲ್ದಾಣದಲ್ಲಿನ ಶೌಚಾಲಯದ ಮೇಲ್ಛಾವಣಿ ಪತರಾ ಕೊಳೆತು ರಂದ್ರ ಬಿದ್ದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಸಿವಿಲ್‌ದವರಿಗೆ ಹೇಳಿ ದುರಸ್ತಿ ಮಾಡಿಸಲಾಗುತ್ತದೆ. ಸ್ವಚ್ಛತೆಯ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.

ರೇವಣಸಿದ್ದಪ್ಪ ಖೈನೂರ, ಘಟಕ ವ್ಯವಸ್ಥಾಪಕ, ಇಂಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ