ಮೆಮೋ ರೈಲಿಗೆ ಹುಟ್ಟುಹಬ್ಬ ಆಚರಿಸಿದ ಪ್ರಯಾಣಿಕರು

KannadaprabhaNewsNetwork |  
Published : Aug 04, 2024, 01:26 AM IST
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಕೇಕ್‌ ಕತ್ತರಿಸಿ ಮೆಮೋ ರೈಲು ಹುಟ್ಟಹಬ್ಬ ಆಚರಿಸಲಾಯಿತು. | Kannada Prabha

ಸಾರಾಂಶ

2013ರ ಆ. 3ರಂದು ರೈಲು ಸಂಚಾರ ಆರಂಭಗೊಂಡಿತು. ಈ ಹಿನ್ನೆಲೆಯಲ್ಲಿ ಅಂದಿನ ದಿನವನ್ನು ವಿಶೇಷವಾಗಿ ಪರಿಗಣಿಸಿ ರೈಲು ಹುಟ್ಟುಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷವೆಂದರೆ ರೈಲಿಗೆ ಬರ್ತ್ ಡೇ ಆಚರಿಸುತ್ತಿರುವುದು ರೈಲ್ವೇ ಇತಿಹಾಸದಲ್ಲೇ ಪ್ರಥಮ ಎನ್ನಬಹುದಾಗಿದೆ. ಇದರಿಂದ ರೈಲ್ವೇ ಇಲಾಖೆ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು ರೈಲು ನಿಲ್ದಾಣದಲ್ಲಿ ತುಮಕೂರು-ಬೆಂಗಳೂರು ವಿಶೇಷ ಮೆಮೋ ರೈಲಿನ 11ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.ಉದ್ಯೋಗಿ ಪ್ರಯಾಣಿಕರ ಮನವಿ ಮೇರೆಗೆ ಆ. 3ರಂದು ಸಂಚಾರ ಆರಂಭಗೊಂಡ ರೈಲಿಗೆ ಆ.3 ರಂದು ಹುಟ್ಟಿದ ದಿನ ಆಚರಿಸಿ ಪ್ರಯಾಣಿಕರು ಸಂಭ್ರಮಿಸುತ್ತಾರೆ. ಉದ್ಯೋಗಕ್ಕಾಗಿ ಪ್ರತಿ ದಿನ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ರೈಲು ಒಂದು ರೀತಿಯಲ್ಲಿ ಜೀವತಂತು ಎನಿಸಿದೆ. ಶನಿವಾರ ಬೆಳ್ಳಂಬೆಳಗ್ಗೆಯೇ ಸುಮಾರು 6.30ರ ವೇಳೆಗೆ ನಗರದ ರೈಲ್ವೇ ಸ್ಟೇಷನ್‌ಗೆ ಆಗಮಿಸಿದ ವೇದಿಕೆ ಪದಾಧಿಕಾರಿಗಳು, ಸದಸ್ಯರು ಮತ್ತು ಪ್ರಯಾಣಿಕರು ಸಡಗರದಿಂದ ರೈಲು ಇಂಜಿನ್‌ಗೆ ಬಾಳೆ ಕಂದು ಕಟ್ಟಿದರು. ಹೂವಿನಿಂದ, ಬಲೂನುಗಳಿಂದ ರೈಲನ್ನು ಸಿಂಗರಿಸಿದರು.ಬೆಳಗ್ಗೆ 8 ಕ್ಕೆ ತುಮಕೂರಿನಿಂದ ಹೊರಡುವ ರೈಲಿಗೆ ಸುಮಾರು 7.45ರ ವೇಳೆಗೆ ರೈಲಿನ ಲೋಕೋ ಪೈಲೆಟ್ ಬಿ. ಸುಬ್ರಹ್ಮಣ್ಯಂ ಮತ್ತು ಗಾರ್ಡ್ ಜಿ. ಜಯುಡು ಅವರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದರು. ಇದಕ್ಕೂ ಮುನ್ನ ರೈಲಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ತುಮಕೂರು ರೈಲು ನಿಲ್ದಾಣ ವ್ಯವಸ್ಥಾಪಕ ನಾಗರಾಜ್ ಎಲ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ವೇದಿಕೆ ಉಪಾಧ್ಯಕ್ಷ ಮಾಧವಮೂರ್ತಿ ಗುಡಿಬಂಡೆ, ಪರಮೇಶ್ವರ್ ಸೇರಿದಂತೆ ವೇದಿಕೆಯ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಪ್ರಯಾಣಿಕರು ಪರಸ್ಪರ ಕೇಕ್ ತಿನ್ನಿಸಿ ಖುಷಿಪಟ್ಟರು.2013ರ ಜೂನ್ ಅಂತ್ಯಕ್ಕೆ ಬೆಳಗ್ಗೆ 8 ಕ್ಕೆ ಬರುತ್ತಿದ್ದ ಸೋಲಾಪುರ-ಮೈಸೂರು ರೈಲಿನ ವೇಳೆ ಬೆಳಗ್ಗೆ 6.30ಕ್ಕೆ ಬದಲಾಯಿಸಲಾಯಿತು. ಇದರಿಂದ ಬೆಳಗ್ಗೆ 8 ಗಂಟೆಗೆ ಆ ರೈಲಿಗೆ ಹೊರಡುತ್ತಿದ್ದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಉದ್ಯೊಗಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ಸಂಕಷ್ಟವಾಗಿತ್ತು. ಆಗಿನ ರೈಲ್ವೆ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೇದಿಕೆ ವತಿಯಿಂದ ಪತ್ರ ಬರೆದು ಉದ್ಯೋಗಿಗಳು ಮತ್ತು ಪ್ರಯಾಣಿಕರ ಕಷ್ಟ ವಿವರಿಸಿದಾಗ ಕೇವಲ ಒಂದೇ ತಿಂಗಳಲ್ಲಿ ವಿಶೇಷ ರೈಲು ಸಂಚಾರ ಆರಂಭಿಸಿ ಅನುಕೂಲ ಮಾಡಿಕೊಟ್ಟಿದ್ದರು.2013ರ ಆ. 3ರಂದು ರೈಲು ಸಂಚಾರ ಆರಂಭಗೊಂಡಿತು. ಈ ಹಿನ್ನೆಲೆಯಲ್ಲಿ ಅಂದಿನ ದಿನವನ್ನು ವಿಶೇಷವಾಗಿ ಪರಿಗಣಿಸಿ ರೈಲು ಹುಟ್ಟುಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷವೆಂದರೆ ರೈಲಿಗೆ ಬರ್ತ್ ಡೇ ಆಚರಿಸುತ್ತಿರುವುದು ರೈಲ್ವೇ ಇತಿಹಾಸದಲ್ಲೇ ಪ್ರಥಮ ಎನ್ನಬಹುದಾಗಿದೆ. ಇದರಿಂದ ರೈಲ್ವೇ ಇಲಾಖೆ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆ.18ಕ್ಕೆ ವೇದಿಕೆ ದಶಮಾನೋತ್ಸವ: ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮ ಆ. 18 ರಂದು ಆಚರಿಸಲಾಗುತ್ತಿದೆ. ಉದ್ಯೋಗ ನಿಮಿತ್ತ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ರೈಲು ಪ್ರಯಾಣಿಕರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!