ಸಾಧನೆಗೆ ಹೇಮರೆಡ್ಡಿ ಮಲ್ಲಮ್ಮನವರಂತೆ ತಾಳ್ಮೆ ಬಹಳ ಮುಖ್ಯ: ಸುತ್ತೂರು ಶ್ರೀ

KannadaprabhaNewsNetwork |  
Published : Dec 31, 2023, 01:30 AM IST
15 | Kannada Prabha

ಸಾರಾಂಶ

ಮಲ್ಲಮ್ಮ ಮಹಾ ತಪಸ್ವಿನಿ. ಸಾತ್ವಿಕ ಪತಿವ್ರತೆ. ತನ್ನ ಆರಾಧ್ಯದೈವ ಮಲ್ಲಿಕಾರ್ಜುನನ ಮೇಲೆ ಅಪಾರ ಭಕ್ತಿ, ಶ್ರದ್ಧೆ ಇತ್ತು. ಇದರಿಂದಲೇ ದೇವರನ್ನು ಒಲಿಸಿಕೊಂಡಿದ್ದರು. ಈ ರೀತಿಯ ಸಾಧನೆಗೆ ತಾಳ್ಮೆಯ ಜೊತೆಗೆ ನಂಬಿಕೆ, ವಿಶ್ವಾಸ ಕೂಡ ಮುಖ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಧನೆಗೆ ಹೇಮರೆಡ್ಡಿ ಮಲ್ಲಮ್ಮ ಅವರಂತೆ ತಾಳ್ಮೆ ಮುಖ್ಯ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಜೆಎಸ್ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಶನಿವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ತನ್ನ ಐದನೇ ವಾರ್ಷಿಕೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಂಸಾರದ ಕಷ್ಟ, ಕಾರ್ಪಣ್ಯಗಳ ನಡುವೆಯೂ ಹೇಮರೆಡ್ಡಿ ಮಲ್ಲಮ್ಮ ಅವರು ಸೌಜನ್ಯಮೂರ್ತಿಯಾಗಿದ್ದರು. ಅತ್ತೆ, ಮೈದುನರ ಕಾಟದ ನಡುವೆಯೂ ಪ್ರತಿಯೊಬ್ಬರನ್ನು ಪರಿವರ್ತನೆ ಮಾಡಿದರು ಎಂದರು.

ಮಲ್ಲಮ್ಮ ಮಹಾ ತಪಸ್ವಿನಿ. ಸಾತ್ವಿಕ ಪತಿವ್ರತೆ. ತನ್ನ ಆರಾಧ್ಯದೈವ ಮಲ್ಲಿಕಾರ್ಜುನನ ಮೇಲೆ ಅಪಾರ ಭಕ್ತಿ, ಶ್ರದ್ಧೆ ಇತ್ತು. ಇದರಿಂದಲೇ ದೇವರನ್ನು ಒಲಿಸಿಕೊಂಡಿದ್ದರು. ಈ ರೀತಿಯ ಸಾಧನೆಗೆ ತಾಳ್ಮೆಯ ಜೊತೆಗೆ ನಂಬಿಕೆ, ವಿಶ್ವಾಸ ಕೂಡ ಮುಖ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಹೇಮರೆಡ್ಡಿ ಮಲ್ಲನ ಚರಿತ್ರೆ ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಡಾ.ಗೊ.ರು. ಚನ್ನಬಸಪ್ಪ ಮಾತನಾಡಿ, ಕಾವ್ಯ ರೂಪದಲ್ಲಿದ್ದ ಈ ಕೃತಿಯನ್ನು ಜನಸಾಮಾನ್ಯರಾಗಿ ಸುಲಭವಾಗಿ ಅರ್ಥವಾಗಲಿ ಎಂದು ಇದೀಗ ಗದ್ಯರೂಪದಲ್ಲಿ ತರಲಾಗಿದೆ. ಮಲ್ಲಮ್ಮನ ಬಗ್ಗೆ ದಕ್ಷಿಣ ಕರ್ನಾಟಕದಲ್ಲಿ ಪರಿಚಯ ಕಡಿಮೆ. ಸರ್ಕಾರದ ವತಿಯಿಂದಲೇ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಆರಂಭವಾದ ನಂತರ ವಿಚಾರಗಳು ಜನರಿಗೆ ಗೊತ್ತಾಗುತ್ತಿವೆ ಎಂದರು.

ಅಕ್ಕಮಹಾದೇವಿ, ಮೀರಾಬಾಯಿ ಅವರು ಸಂಸಾರವನ್ನು ತ್ಯಾಗ ಮಾಡಿ, ಸಾಧನೆ ಮಾಡಿದರೆ ಮಲ್ಲಮ್ಮ ಸಂಸಾರದಲ್ಲಿದ್ದುಕೊಂಡೇ ಸಾಧನೆ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಖಡ್ಗ ಹಿಡಿದು ಹೋರಾಡಿ ರಾಜಧರ್ಮ ಎತ್ತಿಹಿಡಿದರೆ ಮಲ್ಲಮ್ಮ ಸಂಸಾರದಲ್ಲಿದ್ದುಕೊಂಡೆ ಗೃಹಧರ್ಮ ಎತ್ತಿ ಹಿಡಿದರು. ಯಾವುದೇ ಸ್ಥಾನಮಾನ ಇಲ್ಲದೇ ಸಾಮಾನ್ಯ ಗೃಹಿಣಿಯಾಗಿ ಮಲ್ಲಮ್ಮ ತಮ್ಮ ನಡೆ- ನುಡಿಯ ಮೂಲಕ ಚಾರಿತ್ರಿಕವಾಗಿ ಉಳಿದಿದ್ದಾರೆ ಎಂದು ಅವರು ಶ್ಲಾಘಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕೇಂದ್ರ ಗಿರಿಯಾಪುರ ಬಡಗನಾಡು ಹೇಮರೆಡ್ಡಿ ಜನಾಂಗ ಸಂಘದ ಅಧ್ಯಕ್ಷ ಎಚ್.ಸಿ. ರೇವಣಸಿದ್ದಪ್ಪ ಮುಖ್ಯಅತಿಥಿಯಾಗಿದ್ದರು. ಬಳಗದ ಅಧ್ಯಕ್ಷ ಡಾ.ಜಿ.ಎಂ. ವಾಮದೇವ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಂಎಂಸಿ ಆರ್ಐ ನಿರ್ದೇಶಕಿ ಡಾ.ಕೆ.ಆರ್. ದಾಕ್ಷಾಯಿಣಿ, ಸಮಾಜ ಸೇವಕಿ ಉಮಾ ಎಚ್. ರಾಯನಗೌಡ, ಕರಕುಶಲತಜ್ಞೆ ಶಶಿಕಲಾ ವಿ. ದೇಸಾಯಿ ಅವರಿಗೆ ಹೇಮರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಂಗಳಾ ಮಹಂತೇಶ್, ಸುವರ್ಣ ಮಧುಸೂದನ ರೆಡ್ಡಿ, ಕನಕ ಹೇಮರೆಡ್ಡಿ ಸಾಧಕರನ್ನು ಪರಿಚಯಿಸಿದರು.

ಸುದರ್ಶಿನಿ ಚಂದ್ರಪ್ಪ ಮತ್ತು ಕುಸಮಾ ಮೂರ್ತಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಜಿ. ಶಿವಲಿಂಗಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ಎಂ. ಹೇಮರೆಡ್ಡಿ ವರದಿ ಓದಿದರು. ಸಹ ಕಾರ್ಯದರ್ಶಿ ಡಾ.ವಿಠಲರೆಡ್ಡಿ ಎಫ್. ಚುಳಕಿ ವಂದಿಸಿದರು. ಸಂಚಾಲಕಿ ಶಾರದಾ ಶಿವಲಿಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಖಜಾಂಚಿ ಟಿ. ಮಹಂತೇಶ್, ನಿರ್ದೇಶಕರಾದ ಸುರೇಶ ಹೊಂಬಳ, ಜಿ.ಎನ್. ಚಿದಾನಂದಮೂರ್ತಿ, ಡಾ.ಜಿ.ಪಿ. ಚಂದ್ರಧರ, ಡಾ.ಕೆ. ಮಧುಸೂದನ ರೆಡ್ಡಿ, ಜಿ.ಆರ್. ಜಗನ್ನಾಥ್ ಮೊದಲಾದವರು ಇದ್ದರು. ಮರಿಸ್ವಾಮಿ ಸರ್ವರ್ಥ, ಮಂಜುಳಾ ತಂಡದವರು ಗೀತಗಾಯನ ನಡೆಸಿಕೊಟ್ಟರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ