ವಸಂತಕುಮಾರ್ ಕತಗಾಲ
ಕಾರವಾರ: ನಗರದ ಕ್ರಿಮ್ಸ್ ನ ಜಿಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರು, ಸಿಬ್ಬಂದಿಗೆ ಜಾರಿಗೊಳಿಸಿದ ಹಾಜರಾತಿ ಕ್ರಮದಿಂದಾಗಿ ಆಸ್ಪತ್ರೆ ಅವಧಿಯಲ್ಲಿ ವೈದ್ಯರು ಆಸ್ಪತ್ರೆಯಲ್ಲೇ ಲಭ್ಯವಿರುವಂತಾಗಿದ್ದು, ಇದರಿಂದ ರೋಗಿಗಳು ಹಾಗೂ ಜನತೆಗೆ ಅನುಕೂಲವಾಗಿ ಪರಿಣಮಿಸಿದೆ.ಡಾ.ಪೂರ್ಣಿಮಾ ಆರ್.ಟಿ. ಕ್ರಿಮ್ಸ್ ನ ಡೀನ್ ಆಗಿ ಅಧಿಕಾರಕ್ಕೆ ಬರುತ್ತಿದ್ದಂತೆ ವೈದ್ಯರುಗಳು ಹಾಗೂ ಸಿಬ್ಬಂದಿಯ ಹಾಜರಾತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದರು. ಬೆಳಗ್ಗೆ 9.30 ಗಂಟೆ, ಮಧ್ಯಾಹ್ನ 1 ಗಂಟೆ, 3 ಗಂಟೆ ಹಾಗೂ 4 ಗಂಟೆ ಹೀಗೆ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿದರು. ಇದರ ಪರಿಣಾಮವಾಗಿ ಬೆಳಗ್ಗೆ 9.30ರಿಂದ ಸಂಜೆ 4 ಗಂಟೆ ತನಕ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಯಲ್ಲೇ ಇರುವಂತಾಗಿದೆ.
ಇದಕ್ಕೂ ಮುನ್ನ ಕೆಲ ವೈದ್ಯರುಗಳು ಆಸ್ಪತ್ರೆ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಲಭ್ಯ ಇರುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕಾಣಸಿಗುತ್ತಿದ್ದರು ಎಂಬ ಆರೋಪ ಇತ್ತು. ಮೊದಲೆಲ್ಲ ವೈದ್ಯರು ಹಾಜರಾತಿ ಪುಸ್ತಕದಲ್ಲಿ ಒಮ್ಮೆ ಸಹಿ ಹಾಕಿದರೆ ಸಾಕಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಹೀಗಿರುವಾಗ ಆಸ್ಪತ್ರೆ ಅವಧಿಯಲ್ಲಿ ವೈದ್ಯರು ಲಭ್ಯವಿಲ್ಲದಿದ್ದರೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಆಗುವ ಸಾಧ್ಯತೆ ಹೆಚ್ಚು. ಈಗ ನೂತನ ಹಾಜರಾತಿ ವಿಧಾನದಿಂದ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.ಆಸ್ಪತ್ರೆಯಲ್ಲಿ ಒಟ್ಟು 204 ವೈದ್ಯರ ಹುದ್ದೆ ಮಂಜೂರು ಆಗಿದೆ. ಆದರೆ ಸದ್ಯಕ್ಕೆ 93ರಷ್ಟೇ ಇದ್ದಾರೆ. 111 ವೈದ್ಯರ ಹುದ್ದೆ ಖಾಲಿ ಇದೆ. ಜನರಲ್ ಮೆಡಿಸಿನ್ ನಲ್ಲಿ 15 ಹುದ್ದೆಗಳಿಗೆ ಮಂಜೂರಾತಿ ಇದ್ದು, 6 ವೈದ್ಯರು ಇದ್ದಾರೆ. ಗೈನಕಾಲಜಿಯಲ್ಲಿ 13 ಹುದ್ದೆಗಳು ಮಂಜೂರಾತಿ ಇದ್ದು, 5 ವೈದ್ಯರು ಇದ್ದಾರೆ.
ಈಗ 450 ಬೆಡ್ ಸಾಮರ್ಥ್ಯದ ಹೊಸ ಆಸ್ಪತ್ರೆಗೆ ವೈದ್ಯರು, ಶುಶ್ರೂಷಕರು, ಇತರ ಎಲ್ಲ ಸಿಬ್ಬಂದಿ ಸೇರಿ 661 ಹುದ್ದೆಗಳ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳು ಬರಬೇಕಾಗಿವೆ. ಜೊತೆಗೆ ಈಗಿರುವ ಆಸ್ಪತ್ರೆಯ ಕಟ್ಟಡ ದುರ್ಬಲವಾಗಿರುವುದರಿಂದ ನೂತನ ಕಟ್ಟಡಕ್ಕೆ ಶೀಘ್ರದಲ್ಲಿ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಇದೆ.ಬಯೋಮೆಟ್ರಿಕ್ ಹಾಜರಾತಿ ಕ್ರಮದಿಂದಾಗಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಉಂಟಾಗಿದೆ. ಮೆಡಿಕಲ್ ಕಾಲೇಜಿನಲ್ಲಿ ರೋಗಿಗಳಿಗೆ ಆದಷ್ಟೂ ಹೆಚ್ಚು ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತರೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ, ಡೀನ್ ಡಾ.ಪೂರ್ಣಿಮಾ ಆರ್.ಟಿ.